ಅಬುಧಾಬಿ: ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಿಗ್ಗಜ ಕ್ರಿಸ್ ಗೇಲ್ ಅವರು ತಾನಿನ್ನೂ ವಿದಾಯ ಘೋಷಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಗೇಲ್ ವಿದಾಯ ನೀಡಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ ವಿಂಡೀಸ್ ದೈತ್ಯ ಈ ಮಾತುಗಳನ್ನಾಡಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ನ ತನ್ನ ಅಂತಿಮ ಪಂದ್ಯವನ್ನು ವೆಸ್ಟ್ ಇಂಡೀಸ್ ತಂಡ ಆಸೀಶ್ ವಿರುದ್ಧ ಶನಿವಾರ ಆಡಿತು. ಈಗಾಗಲೇ ವಿದಾಯ ಘೋಷಿಸಿರುವ ಡ್ವೇನ್ ಬ್ರಾವೋ ತಮ್ಮ ಅಂತಿಮ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದರು. ಈ ಪಂದ್ಯದಲ್ಲಿ ಆಸೀಸ್ ಗೆಲುವು ಸಾಧಿಸಿತು.
ಕ್ರಿಸ್ ಗೇಲ್ ಈ ಪಂದ್ಯದಲ್ಲಿ ತನ್ನ ಕೊನೆಯ ಪಂದ್ಯದಂತೆ ಆಡಿದರು. ತಂಪು ಕನ್ನಡಕ ಹಾಕಿಕೊಂಡು ಬ್ಯಾಟಿಂಗ್ ಮಾಡಿದ ಗೇಲ್ 9 ಎಸೆತಗಳಲ್ಲಿ 15 ರನ್ ಗಳಿಸಿದರು. ತನ್ನ ಅಂತಿಮ ವಿಶ್ವಕಪ್ ಪಂದ್ಯವನ್ನು ಆನಂದಿಸುತ್ತಿದ್ದೇನೆ ಮತ್ತು ತನ್ನ ತವರು ಜಮೈಕಾದಲ್ಲಿ ವಿದಾಯ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ಬಯಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಟಿ20 ವಿಶ್ವಕಪ್ 2022: ಎಂಟು ತಂಡಗಳಿಗೆ ನೇರ ಅರ್ಹತೆ, ಲಂಕಾ-ವಿಂಡೀಸ್ ಗಿಲ್ಲ ಈ ಅವಕಾಶ
ನನ್ನ ಕೊನೆಯ ವಿಶ್ವಕಪ್ ಅನ್ನು ಆನಂದಿಸಲು ಪ್ರಯತ್ನಿಸುತ್ತಿದ್ದೆ. ಇದು ನನಗೆ ವೈಯಕ್ತಿಕವಾಗಿ ತುಂಬಾ ನಿರಾಶಾದಾಯಕ ವಿಶ್ವಕಪ್ ಆಗಿದೆ. ಇದು ಬಹುಶಃ ನನ್ನ ಕೆಟ್ಟ ವಿಶ್ವಕಪ್ ಆಗಿದೆ. ಆದರೆ ಈ ಸಂಗತಿಗಳು ನಡೆಯುತ್ತವೆ. ವೆಸ್ಟ್ ಇಂಡೀಸ್ ಕ್ರಿಕೆಟ್‌ನಲ್ಲಿ ನಮ್ಮಲ್ಲಿ ಇನ್ನೂ ಸಾಕಷ್ಟು ಶ್ರೇಷ್ಠ ಪ್ರತಿಭೆಗಳು ಬರುತ್ತಿವೆ” ಎಂದು ಗೇಲ್ ಐಸಿಸಿಗೆ ತಿಳಿಸಿದರು.
“ನಾನು ಯಾವುದೇ ನಿವೃತ್ತಿಯನ್ನು ಘೋಷಿಸಲಿಲ್ಲ ಆದರೆ ಜಮೈಕಾದಲ್ಲಿ ನನ್ನ ತವರು ಪ್ರೇಕ್ಷಕರ ಮುಂದೆ ಆಡಲು ನನಗೆ ಒಂದು ಪಂದ್ಯವನ್ನು ನೀಡಿದರೆ, ನಾನು ಅಲ್ಲೇ ವಿದಾಯ ಹೇಳಬಹುದು. ನಾನು ಇನ್ನೂ ಹೆಚ್ಚು ವಿಶ್ವಕಪ್ ಆಡಲು ಇಷ್ಟಪಡುತ್ತೇನೆ, ಆದರೆ ನನಗೆ ಅವಕಾಶ ನೀಡುತ್ತಾರೆ ಎಂದು ನಾನು ಭಾವಿಸುವುದಿಲ್ಲ”. ಎಂದು ಕ್ರಿಸ್ ಗೇಲ್ ಹೇಳಿದರು.