ಹೊಸದಿಲ್ಲಿ: ಇತ್ತೀಚೆಗೆ ಮುಕ್ತಾಯವಾದ ಪಂಚ ರಾಜ್ಯ ಚುನಾವಣೆಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಗಳಲ್ಲಿ ಬಿಜೆಪಿ ಜಯಗಳಿಸಿರುವುದು ಜನರು ನಮ್ಮ ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ. ಜತೆಗೆ ಅವರಿಗೆ ನಮ್ಮ ಪಕ್ಷವೇ ಅತ್ಯುತ್ತಮ ಆಯ್ಕೆ ಎಂದು ಫಲಿತಾಂಶದ ಮೂಲಕ ತೋರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಗುರುವಾರ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, “ಮೂರು ರಾಜ್ಯಗಳಲ್ಲಿ ಪಕ್ಷದ ಜಯ ಕೇವಲ ಒಬ್ಬ ವ್ಯಕ್ತಿಯಿಂದ ಅಲ್ಲ. ಎಲ್ಲರೂ ಒಗ್ಗಟ್ಟಿನಿಂದ ಪಕ್ಷಕ್ಕಾಗಿ ದುಡಿದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟಿನ ಜಯ ಪ್ರಾಪ್ತವಾಗಿದೆ’ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ 40 ಬಾರಿ ಚುನಾವಣೆಗಳನ್ನು ಎದುರಿಸಿತ್ತು. ಆ ಪೈಕಿ ಏಳರಲ್ಲಿ ಮಾತ್ರ ಜಯಸಾಧಿಸಲು ಶಕ್ತವಾಗಿತ್ತು. ಆದರೆ ಬಿಜೆಪಿ 39 ಚುನಾವಣೆಗಳನ್ನು ಎದುರಿಸಿ 22 ಬಾರಿ ಗೆದ್ದಿದೆ. ಶೇಕಡಾವಾರು ಲೆಕ್ಕಾಚಾರ ನೋಡಿದರೆ 56 ಎಂದು ಪ್ರಧಾನಿ ಸಭೆಗೆ ವಿವರಿಸಿದರು. ಹೀಗಾಗಿ, ದೇಶದ ಜನರಿಗೆ ಆಡಳಿತ ನಡೆಸಲು ಬಿಜೆಪಿಯೇ ಅತ್ಯುತ್ತಮ ಆಯ್ಕೆ ಎನ್ನುವುದು ಸಾಬೀತಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇದೇ ವೇಳೆ, ನಿಮ್ಮ ನಿಮ್ಮ ಕ್ಷೇತ್ರಗಳಿಗೆ ತೆರಳಿ ವಿಕಸಿತ ಭಾರತ ಯಾತ್ರೆಯಲ್ಲಿ ಭಾಗವಹಿಸಿ ಎಂದೂ ಸಂಸದರಿಗೆ ಸೂಚಿಸಿದ್ದಾರೆ.
ನನ್ನನ್ನು ಮೋದಿಜಿ ಎಂದು ಕರೆಯದಿರಿ…
“ನನ್ನನ್ನು ಮೋದಿಜಿ ಎಂದು ಕರೆಯು ವುದು ಬೇಡ. ಕೇವಲ ಮೋದಿ ಎಂದರೆ ಸಾಕು’ ಎಂದು ಪಕ್ಷದ ಕಾರ್ಯಕರ್ತರಿಗೆ ನರೇಂದ್ರ ಮೋದಿ ಮನವಿ ಮಾಡಿದರು. ಈ ಜಯ ವ್ಯಕ್ತಿಯದ್ದಲ್ಲ. ಪಕ್ಷದ ಎಲ್ಲ ಕಾರ್ಯಕರ್ತರು ಮತ್ತು ನಾಯಕರು ಒಟ್ಟಾಗಿ ದುಡಿದ ಹಿನ್ನೆಲೆಯಲ್ಲಿ ಮೂರು ರಾಜ್ಯಗಳಲ್ಲಿ ಅಧಿಕಾರ ಪ್ರಾಪ್ತಿಯಾಗಿದೆ ಎಂದರು. ಮೋದಿಜಿಯವರ ಗ್ಯಾರಂಟಿ ಎಂದು ಹೇಳಬೇಡಿ. ಮೋದಿ ಗ್ಯಾರಂಟಿ ಎಂದರೆ ಸಾಕು ಎಂದರು. ಮೋದಿಯವರು ಸಭೆಗೆ ಆಗಮಿಸುತ್ತಿದ್ದಂತೆ ಪಕ್ಷದ ಎಲ್ಲ ನಾಯಕರು, ಪದಾಧಿಕಾರಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದು ಕಂಡುಬಂತು.