Advertisement

Chitradurga; ನಾರಾಯಣ ಸ್ವಾಮಿ ಮತ್ತೆ ಸ್ಪರ್ಧಿಸುತ್ತಾರಾ, ಕೋಲಾರಕ್ಕೆ ಹೋಗುತ್ತಾರಾ?

12:32 AM Jan 18, 2024 | Team Udayavani |

ಚಿತ್ರದುರ್ಗ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸಾಮಾನ್ಯ ವಾಗಿ ಹೊರಗಿನವರೇ ಬಂದು ಟಿಕೆಟ್‌ ಪಡೆದು ಗೆಲ್ಲುತ್ತಾರೆ ಎಂಬ ಆಕ್ರೋಶ ಇದೆ. ಈ ಸಲವೂ ಆ ಅಸಮಾಧಾನ ಸ್ಥಳೀಯರಲ್ಲಿದ್ದು, ಈ ಕಾರಣಕ್ಕಾಗಿಯೇ ಎಲ್ಲ ಪಕ್ಷಗಳಲ್ಲೂ ಟಿಕೆಟ್‌ಗೆ ಪೈಪೋಟಿ ಹೆಚ್ಚಾಗಿದೆ. ಸಂಸದ ಕೇಂದ್ರದಲ್ಲಿ ರಾಜ್ಯ ಖಾತೆ ಸಚಿವರೂ ಆಗಿರುವ ಎ.ನಾರಾಯಣ ಸ್ವಾಮಿ ಅವರು ರಾಜಕೀಯ ವೈರಾಗ್ಯದ ಮಾತನ್ನಾಡಿರುವುದು ಇಲ್ಲಿ ಕುತೂಹಲವನ್ನು ಹೆಚ್ಚಿಸಿದೆ.

Advertisement

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಪಕ್ಕದ ತುಮಕೂರು ಜಿಲ್ಲೆ ಶಿರಾ ಹಾಗೂ ಪಾವಗಡ ಕೂಡ ಚಿತ್ರದುರ್ಗಕ್ಕೆ ಸೇರಿವೆ. 8 ಕ್ಷೇತ್ರಗಳ ಪೈಕಿ ಈ ಬಾರಿ ಹೊಳಲ್ಕೆರೆಯಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದು, ಉಳಿದ 7 ಕಡೆ ಕಾಂಗ್ರೆಸ್‌ ಗೆದ್ದಿದೆ. 2019ರಲ್ಲಿ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯ ಇದ್ದಿದ್ದರೆ, ಚಳ್ಳಕೆರೆಯಲ್ಲಿ ಮಾತ್ರ ಕಾಂಗ್ರೆಸ್‌ ಶಾಸಕರಿದ್ದರು. ವಿಧಾನಸಭೆ ಚುನಾವಣೆ ಬಳಿಕ ಜಿಲ್ಲೆಯ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿದೆ.

ನಾರಾಯಣ ಸ್ವಾಮಿ ರಹಸ್ಯ
ಯಾವುದೇ ಪಕ್ಷಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್‌ ಕೊಡು ವುದು ವಾಡಿಕೆ. ಆದರೆ ಸಂಸದ ಎ.ನಾರಾಯಣ ಸ್ವಾಮಿ ಇತ್ತೀಚೆಗೆ ಭ್ರಷ್ಟ ರಾಜಕಾರಣದಲ್ಲಿ ಮುಂದುವರಿ ಯುವ ಮನಸ್ಸಿಲ್ಲ ಎನ್ನುವ ಮೂಲಕ ತಾವು ಮತ್ತೆ ಸ್ಪರ್ಧಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೂಂದೆಡೆ ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಅಲ್ಲದೆ, ಈ ಬಾರಿ ಅವರು ಕೋಲಾರ ದಿಂದ ಸ್ಪರ್ಧಿಸುತ್ತಾರಂತೆ ಎನ್ನುವ ವದಂತಿ ಕ್ಷೇತ್ರದಲ್ಲಿ ಹರಿದಾಡುತ್ತಿವೆ.
ಆದರೆ ಬಿಜೆಪಿ ಅಭ್ಯರ್ಥಿಯಾಗಿ ಅವರೇ ಕಣಕ್ಕಿಳಿಯುವ ಸಾಧ್ಯತೆ ಯನ್ನೂ ಅಲ್ಲಗಳೆಯುವಂತಿಲ್ಲ. ಒಂದೊಮ್ಮೆ ಅವರು ನಿರಾಕರಿಸಿದರೆ ಮಾಜಿ ಸಂಸದ ಜನಾರ್ದನ ಸ್ವಾಮಿ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಪುತ್ರ ಎಂ.ಸಿ. ರಘುಚಂದನ್‌, ಮಾಯ ಕೊಂಡ ಮಾಜಿ ಶಾಸಕ ಪ್ರೊ|ಲಿಂಗಪ್ಪ, ಮೂಡಿಗೆರೆ ಬಿಜೆಪಿ ಅಭ್ಯರ್ಥಿಯಾಗಿದ್ದ ದೀಪಕ್‌ ದೊಡ್ಡಯ್ಯ, ಸಂಘ ಪರಿವಾರದ ಹಿನ್ನೆಲೆಯ ಮೂಡಿಗೆರೆಯ ನರೇಂದ್ರ, ನಿವೃತ್ತ ಐಎಎಸ್‌ ಅ ಧಿಕಾರಿ ಲಕ್ಷ್ಮೀನಾರಾಯಣ, ಹರಪನಹಳ್ಳಿಯ ಡಾ| ರಮೇಶ್‌, ಚಳ್ಳಕೆರೆಯ ಸೂರನಹಳ್ಳಿ ವಿಜಯಣ್ಣ ಕೂಡ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಆಕಾಂಕ್ಷಿಗಳಾಗಿದ್ದಾರೆ.

ಕಾಂಗ್ರೆಸ್‌ನಿಂದಲೂ ಟಿಕೆಟ್‌ ಬಯಸಿ 24 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ 2019ರಲ್ಲಿ ಪರಾಭವಗೊಂಡಿರುವ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್‌.ಚಂದ್ರಪ್ಪ, 2009ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಡಾ| ಬಿ.ತಿಪ್ಪೇಸ್ವಾಮಿ, ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್‌.ಮಂಜುನಾಥ್‌, ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಪುತ್ರ ವಿನಯ ತಿಮ್ಮಾಪುರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ರಾಮಪ್ಪ, ಮಾಜಿ ಸಚಿವ ವೆಂಕಟರಮಣಪ್ಪ ಪುತ್ರ ಪಾವಗಡದ ಎಚ್‌.ಕೆ.ಕುಮಾರಸ್ವಾಮಿ ಸಹಿತ ಹಲವು ಆಕಾಂಕ್ಷಿಗಳಿದ್ದಾರೆ.

ಬಿಜೆಪಿ-ಜೆಡಿಎಸ್‌ ಮೈತ್ರಿ ಬಲ
ಚಿತ್ರದುರ್ಗ ಕ್ಷೇತ್ರದಲ್ಲಿ ಜೆಡಿಎಸ್‌ ಮತಗಳು ಗಣನೀಯವಾಗಿವೆ. ಅಂಕಿಅಂಶ ಪ್ರಕಾರ 2009ರಲ್ಲಿ ಎಂ. ರತ್ನಾಕರ್‌ ಜೆಡಿಎಸ್‌ ಅಭ್ಯರ್ಥಿಯಾಗಿದ್ದರು. ಈ ವೇಳೆ ಜೆಡಿಎಸ್‌ 1.46 ಲಕ್ಷ ಮತ ಪಡೆದಿತ್ತು. 2014ರ ಚುನಾವಣೆಯಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದು 2.02 ಲಕ್ಷ ಮತ ಗಳಿಸಿ ಜೆಡಿಎಸ್‌ ಪ್ರಾಬಲ್ಯವನ್ನು ತೋರ್ಪಡಿಸಿದ್ದರು. 2019ರಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮಧ್ಯೆ ಮೈತ್ರಿಯಾಗಿತ್ತು. ಆದರೆ ಈ ಚುನಾವಣೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್‌ಗೆ ಕೈ ಕೊಟ್ಟರು ಎನ್ನುವ ಆರೋಪ ಕೇಳಿ ಬಂದಿತ್ತು. ಜೆಡಿಎಸ್‌ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೆಚ್ಚು ಮತ ಬಂದಿದ್ದವು. ಈಗ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರ ಪ್ರಾಬಲ್ಯವಿದ್ದರೂ ಜೆಡಿಎಸ್‌-ಬಿಜೆಪಿ ಮೈತ್ರಿ ಬಿಜೆಪಿಗೆ ವರವಾಗಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಶಿರಾ, ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ, ಪಾವಗಡ ಭಾಗದ ಜೆಡಿಎಸ್‌ ಮತಗಳು ಬಿಜೆಪಿಗೆ ಬಂದರೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಪೈಪೋಟಿ ಏರ್ಪಡಲಿದೆ.

Advertisement

ಎ.ನಾರಾಯಣ ಸ್ವಾಮಿ, ಬಿಜೆಪಿ
(ಹಾಲಿ ಸಂಸದ‌)
ಬಿಜೆಪಿ ಸಂಭಾವ್ಯರು
-ಎ.ನಾರಾಯಣ ಸ್ವಾಮಿ
-ಜನಾರ್ದನ ಸ್ವಾಮಿ
-ಎಂ.ಸಿ.ರಘುಚಂದನ್‌
-ಪ್ರೊ|ಲಿಂಗಪ್ಪ
-ದೀಪಕ್‌ ದೊಡ್ಡಯ್ಯ
-ಲಕ್ಷ್ಮೀನಾರಾಯಣ
-ನರೇಂದ್ರ

ಕಾಂಗ್ರೆಸ್‌ ಸಂಭಾವ್ಯರು
-ಬಿ.ಎನ್‌.ಚಂದ್ರಪ್ಪ
-ಡಾ| ಬಿ. ತಿಪ್ಪೇಸ್ವಾಮಿ
-ಜಿ.ಎಸ್‌.ಮಂಜುನಾಥ್‌
-ವಿನಯ ತಿಮ್ಮಾಪುರ
-ಎಂ. ರಾಮಪ್ಪ
-ಎಚ್‌.ಕೆ.ಕುಮಾರಸ್ವಾಮಿ,
-ಎಚ್‌.ಆಂಜನೇಯ,
-ಪಿ.ರಘು

-ತಿಪ್ಪೇಸ್ವಾಮಿ ನಾಕೀಕೆರೆ

 

Advertisement

Udayavani is now on Telegram. Click here to join our channel and stay updated with the latest news.

Next