Advertisement

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಉದಾಸೀನವೇಕೆ?

06:07 PM Jun 19, 2024 | Team Udayavani |

■ ಉದಯವಾಣಿ ಸಮಾಚಾರ
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ವೇಗ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉದಾಸೀನ ಮನೋಭಾವ ತಾಳಿವೆ. ಹಾಗಾಗಿ ಹೋರಾಟವನ್ನು ತೀವ್ರಗೊಳಿಸುವುದು ಅನಿವಾರ್ಯ ಎಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಹೇಳಿದರು.

Advertisement

ಮಂಗಳವಾರ ನಡೆದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಎದುರಾದ ಹಿನ್ನಲೆಯಲ್ಲಿ ಸಹಜವಾಗಿ
ಹೋರಾಟದಿಂದ ಹಿಂದೆ ಸರಿದಿದ್ದೆವು. ಚುನಾವಣೆ ಮುಗಿದ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಪ್ರಸ್ತಾಪ ಮಾಡುತ್ತಿಲ್ಲ. ಅನುದಾನ ಬಿಡುಗಡೆಗೂ ಮುಂದಾಗಿಲ್ಲ. ಇದೇ ನಿರ್ಲಕ್ಷ್ಯ ಮುಂದುವರಿದರೆ ಯೋಜನೆ ಮುಗಿಯಲು ಮತ್ತೂಂದು ದಶಕವೇ ಬೇಕಾಗುತ್ತದೆ ಎಂದರು.

ಕೇಂದ್ರ ಸರ್ಕಾರ ಕೊಟ್ಟ ಮಾತಿನಂತೆ 5300 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದರಲ್ಲಿಯೇ ಕಾಲ ಕಳೆಯುತ್ತಿದೆ. ನಾವು ಗ್ಯಾರಂಟಿ ಯೋಜನೆ ವಿರೋಧಿಸುವುದಿಲ್ಲ. ಆದರೆ ನೀರಾವರಿ ಯೋಜನೆಗಳ ಕಾಲಮಿತಿಯಲ್ಲಿ ಮುಗಿಸುವುದು ಸರ್ಕಾರಗಳ ಕರ್ತವ್ಯ ಎನ್ನುವುದನ್ನು ನೆನಪು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಅಬ್ಬಿನಹೊಳಲು ಭೂಸ್ವಾಧಿಧೀನ ಪ್ರಕ್ರಿಯೆ ಸಮಸ್ಯೆ ಮುಗಿದಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದರು. ಆದರೆ ಕಾಲುವೆ ನಿರ್ಮಾಣದ ಕಾಮಗಾರಿ ಮುಗಿದಿದೆಯಾ ಎಂಬ ಬಗ್ಗೆ ಇದುವರೆಗೂ ಇಲಾಖೆಯಿಂದ ಸಮಜಾಯಿಷಿ ನೀಡಲಾಗಿಲ್ಲ. ಅಧಿಕಾರಿಗಳು ಕೂಡ ಭೂಸ್ವಾಧೀನದ ಬಗ್ಗೆ ವಾಸ್ತವಾಂಶಗಳನ್ನು ಬಹಿರಂಗಗೊಳಿಸಿಲ್ಲ. ಭೂಸ್ವಾಧೀನವನ್ನೇ ದೊಡ್ಡ ಸಮಸ್ಯೆಯನ್ನಾಗಿ ಮಾಡಿ ಯೋಜನೆಯನ್ನೇ ಮೂಲೆಗುಂಪಾಗಿಸುವ ಹುನ್ನಾರಗಳು ನಡೆಯುತ್ತಿವೆಯೇ ಎಂಬ ಬಗ್ಗೆ
ಅನುಮಾನವಿದೆ ಎಂದರು.

ಕೇಂದ್ರದಲ್ಲಿ ನೂತನ ಸಚಿವರಾಗಿ ಮಧ್ಯ ಕರ್ನಾಟಕ ಪ್ರತಿನಿಧಿಸುತ್ತಿರುವ ವಿ. ಸೋಮಣ್ಣ ಅವರನ್ನು ಹೋರಾಟ ಸಮಿತಿ ಸಂಪರ್ಕಿಸಲು ಮುಂದಾಗಿದೆ. ಜೂ. 24ರಿಂದ ಲೋಕಸಭೆ ಅಧಿವೇಶನ ಆರಂಭವಾಗಲಿದೆ. ಅಷ್ಟರೊಳಗೆ ಸಚಿವರ ಭೇಟಿಯಾಗಿ ಭದ್ರಾ ಮೇಲ್ದಂಡೆಗೆ ಅನುದಾನ ಬಿಡುಗಡೆಗೆ ಯತ್ನಿಸುವಂತೆ  ಮನವಿ ಮಾಡಲಾಗುವುದು. ಭದ್ರಾ ಮೇಲ್ದಂಡೆ ಯೋಜನೆ ಸಂಬಂಧ ಇದುವರೆಗೆ ನಾಲ್ಕು ತಾಲೂಕುಗಳ ಬಂದ್‌ ಮಾಡಲಾಗಿದೆ. ಶೀಘ್ರ ಮೊಳಕಾಲ್ಮೂರು ಹಾಗೂ ಹೊಸದುರ್ಗ ಬಂದ್‌ ಗೆ ಕರೆ ನೀಡಲಾಗುವುದು.

Advertisement

ರಾಜ್ಯ ಸರ್ಕಾರ ಬಯಲುಸೀಮೆ ಜನರ ತಾಳ್ಮೆ ಪರೀಕ್ಷಿಸದೆ ಭದ್ರಾ ಮೇಲ್ದಂಡೆ ಯೋಜನೆಗೆ ಚುರುಕಿನ ವೇಗ ನೀಡಬೇಕೆಂದು ಲಿಂಗಾರೆಡ್ಡಿ ಆಗ್ರಹಿಸಿದರು.

ಸಭೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ. ಹೊರಕೇರಪ್ಪ, ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಮಹಿಳಾ ಘಟಕದ ಅಧ್ಯಕ್ಷೆ ಡ್ಡಸಿದ್ದವ್ವನಹಳ್ಳಿ ಸುಧಾ, ನೀರಾವರಿ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್‌. ದಯಾನಂದ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹುಣಿಸೆಕಟ್ಟೆ ಕಾಂತರಾಜ್‌ ಇದ್ದರು.

ನೂತನ ಸಂಸದ ಗೋವಿಂದ ಕಾರಜೋಳ ಅವರು ಈ ಮೊದಲು ಜಲಸಂಪನ್ಮೂಲ ಸಚಿವರಾಗಿದ್ದರು. ಅವರಿಗೆ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಅರಿವಿದೆ. ಕೇಂದ್ರದಿಂದ 5300 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಬೇಕಿದೆ. ಹಾಗಾಗಿ ಬುಧವಾರ ನೀರಾವರಿ ಅನುಷ್ಠಾನ ಸಮಿತಿಯಿಂದ ಗೋವಿಂದ ಕಾರಜೋಳ ಅವರ ಜೊತೆ ಚರ್ಚಿಸಲಾಗುವುದು.
●ಬಿ.ಎ. ಲಿಂಗಾರೆಡ್ಡಿ, ನೀರಾವರಿ
ಅನುಷ್ಠಾನ ಹೋರಾಟ ಸಮಿತಿ ಸಭೆ

Advertisement

Udayavani is now on Telegram. Click here to join our channel and stay updated with the latest news.

Next