ಚಿತ್ರದುರ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ನಿರ್ದೇಶಕ ಕೆ. ಮಂಜುನಾಥ ನೇತೃತ್ವದಲ್ಲಿ ನಗರದ ವಿವಿಧ ಸರ್ಕಾರಿ ಇಲಾಖೆಗಳ ನೌಕರರಿಗೆ ಮಾಸ್ಕ್ ವಿತರಿಸಲಾಯಿತು.
ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಗಳ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ವಿಜ್ಞಾನ ಕಾಲೇಜು, ಜಿಲ್ಲಾ ತರಬೇತಿ ಸಂಸ್ಥೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬಿಇಒ ಕಚೇರಿ ಸೇರಿದಂತೆ ಹಲವು ಇಲಾಖೆಗಳ ನೌಕರರಿಗೆ ಮಾಸ್ಕ್ ನೀಡಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಜಾಗೃತಿ ಮೂಡಿಸಲಾಯಿತು.
ಈಗಾಗಲೇ ಮೂರು ಹಂತಗಳಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ನೌಕರರಿಗೆ ಮಾಸ್ಕ್ ವಿತರಿಸಲಾಗಿದೆ. ಬುಧವಾರ ನಾಲ್ಕನೇ ಹಂತದಲ್ಲಿ ಬಾಕಿ ಉಳಿದ ಕಚೇರಿಗಳ ನೌಕರರಿಗೆ ಮಾಸ್ಕ್ ವಿತರಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಲೆಕ್ಕ ಪರಿಶೋಧನಾಧಿಕಾರಿ ಕೆ.ಮಂಜುನಾಥ ತಿಳಿಸಿದ್ದಾರೆ.
ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಪ್ರಪಂಚವೇ ಕೊರೊನಾ ಅಟ್ಟಹಾಸಕ್ಕೆ ನಲುಗಿ ಹೋಗಿರುವ ಇಂತಹ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‌ಗಳಾದ ಪೊಲೀಸ್ ಅಧಿಕಾರಿ/ಸಿಬ್ಬಂದಿ, ಹೋಂ ಗಾರ್ಡ್, ಅಗ್ನಿಶಾಮಕದಳದ ಅಧಿಕಾರಿ/ಸಿಬ್ಬಂದಿ, ಆರೋಗ್ಯ ಇಲಾಖೆಯ ನೌಕರರು, ಪತ್ರಕರ್ತರು, ಆಶಾ ಕಾರ್ಯಕರ್ತರು, ಪೌರಕಾರ್ಮಿಕರು, ಎಲ್ಲಾ ಹಿರಿಯ ಅಧಿಕಾರಿಗಳ ವಾಹನ ಚಾಲಕರು ಹಾಗೂ ಅಗತ್ಯ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರ ಕಾರ್ಯ ಶ್ಲಾಘನೀಯ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ, ಪ್ರಧಾನ ಕಾರ್ಯದರ್ಶಿ ಜಿ.ಬಿ. ಮಹಂತೇಶ್, ಸರ್ಕಾರಿ ನೌಕರರ ಜೆ.ರಾಘವೇಂದ್ರ, ಆರ್.ಶ್ರೀನಿವಾಸ್, ಪ್ರದೀಪ್ ಕುಮಾರ್ ಜಿ.ಆರ್, ಬಿ.ಆರ್.ತಿಪ್ಪೇಸ್ವಾಮಿ, ಅಜ್ಜಯ್ಯ.ಆರ್, ಕಲ್ಲೇಶ್ ಮೌರ್ಯ, ಗವಿಸಿದ್ದೇಶ್, ತಿಮ್ಮಪ್ಪ ವಡಕಲ್, ಕೆ.ಟಿ.ತಿಮ್ಮಾರೆಡ್ಡಿ, ತಾಜೀರ್ ಬಾಷಾ, ಸಂತೋಷ್, ಶ್ರೀರಾಮ್ ರೆಡ್ಡಿ ಇದ್ದರು.