Advertisement

ಜಲಮೂಲ ಸಂರಕ್ಷಣೆಗೆ ಕ್ರಮ

11:15 AM May 06, 2020 | Naveen |

ಚಿತ್ರದುರ್ಗ: ಅಂತರ್ಜಲ ಚೇತನ ಯೋಜನೆಯಡಿ ಜಿಲ್ಲೆಯ ಜಲಮೂಲಗಳ ಸಂರಕ್ಷಣೆ ಹಾಗೂ ಜಲಚಕ್ರ ವ್ಯವಸ್ಥೆ ಸುಧಾರಣೆಗಾಗಿ 270 ಕೋಟಿ ರೂ. ವೆಚ್ಚದಲ್ಲಿ ಸುಮಾರು 46 ಸಾವಿರ ಕಾಮಗಾರಿಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

Advertisement

ಜಿಪಂ ಸಭಾಂಗಣದಲ್ಲಿ “ಅಂತರ್ಜಲ ಚೇತನ’ ಯೋಜನೆ ಕುರಿತು ಪಿಡಿಒ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಬರಪೀಡಿತ ಚಿತ್ರದುರ್ಗ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ಯ ಇಲಾಖೆ, ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ನೆರವಿನೊಂದಿಗೆ ಜಲಮೂಲಗಳ ಸಂರಕ್ಷಣೆ ಹಾಗೂ ಅಂತರ್ಜಲ ವೃದ್ಧಿಗಾಗಿ “ಅಂತರ್ಜಲ ಚೇತನ’ ಯೋಜನೆಯನ್ನು ಚಿತ್ರದುರ್ಗ ಜಿಲ್ಲೆಯೂ ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿದೆ. ಅಂತರ್ಜಲ ಮಟ್ಟ ಸುಧಾರಣೆಗಾಗಿ ಸಾಕಷ್ಟು ತಜ್ಞರು ಅಧ್ಯಯನ ನಡೆಸಿ ವರದಿ ನೀಡಿದ್ದಾರೆ. ಹೀಗಾಗಿ ಜಿಲ್ಲೆಯ ಪಾಲಿಗೆ ಈ ಯೋಜನೆ ವರದಾನವಾಗಲಿದೆ ಎಂದರು.

ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಲ್ಲಿ, ಜಿಲ್ಲೆಯ ಚಿತ್ರಣವೇ ಬದಲಾಗಲಿದೆ ಎಂದು ಅಭಿಪ್ರಾಯಪಟ್ಟರು. ಆರ್ಟ್‌ ಆಫ್‌ ಲಿವಿಂಗ್‌ನ ಕಾರ್ಯಾಚರಣೆ ನಿರ್ದೇಶಕ ರವೀಂದ್ರ ದೇಸಾಯಿ, ಚಿತ್ರದುರ್ಗ, ಚಳ್ಳಕೆರೆ, ಪಾವಗಡ, ಶಿರಾ ಬರಡು ಪ್ರದೇಶಗಳಾಗಿವೆ. ಇಲ್ಲಿ ಅಂತರ್ಜಲ ಮಟ್ಟ ತೀರಾ ಕೆಳಗೆ ಕುಸಿದಿದೆ. ಈ ಮೊದಲು ಪ್ರಕೃತಿಯೇ ಮಳೆ ನೀರಿನ ಜಲ ಮರುಪೂರಣ ಮಾಡುತ್ತಿತ್ತು. ಆದರೆ ಕಾಡಿನ ನಾಶ ಹಾಗೂ ಪ್ರಕೃತಿ ಮೇಲೆ ಮನುಷ್ಯನ ಪ್ರಭಾವ ಹೆಚ್ಚಾದ ಕಾರಣದಿಂದ ಜಲಮೂಲಗಳನ್ನು ನಾವೇ ಸಂರಕ್ಷಿಸುವ ಅಗತ್ಯತೆ ಬಂದಿದೆ. ಅಂತರ್ಜಲಕ್ಕೂ, ಮೇಲ್ಮೈ ನೀರು ಹರಿಯುವಿಕೆಗೂ ಒಂದಕ್ಕೊಂದು ಸಂಬಂಧವಿದೆ. ನದಿಯ ಹರಿಯುವಿಕೆ ಆಧಾರದಲ್ಲಿ ಅಂತರ್ಜಲವೂ ಇದೆ. ಸದ್ಯ ಕೆರೆಗಳಲ್ಲಿ ನೀರಿನ ಆವಿಯ ಪ್ರಮಾಣ ಹೆಚ್ಚಿದ್ದು, ಈ ಭಾಗದಲ್ಲಿ ಪ್ರಕೃತಿಗೆ ಮೋಡಗಳನ್ನು ತಡೆದು ಮಳೆ ಸುರಿಸುವ ಶಕ್ತಿ ಕುಸಿದಿದೆ. ಹೀಗಾಗಿ ಜಲಚಕ್ರ ವ್ಯವಸ್ಥೆ ಏರುಪೇರಾಗಿದೆ ಎಂದರು.

ಈಗಾಗಲೇ ಅಂತರ್ಜಲ ಚೇತನ ಯೋಜನೆಗೆ ಗ್ರಾಮ ಪಂಚಾಯತ್‌ ವಾರು ಕ್ರಿಯಾ ಯೋಜನೆ ಸಿದ್ಧವಾಗಿದೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲಾ, ತಾಲೂಕು, ಗ್ರಾಮ ಮಟ್ಟದಲ್ಲಿ ಸಂಯೋಜಕರನ್ನು ಹಾಗೂ ಕಾಯಕ ಬಂಧುಗಳನ್ನು ನಿಯೋಜಿಸಲಾಗಿದೆ. ಯೋಜನೆ ಜಾರಿಯಿಂದ ಜಿಲ್ಲೆಯಲ್ಲಿ ಜಲಸಂರಕ್ಷಣೆಯ ಜೊತೆಗೆ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಳವಾಗುವುದರಲ್ಲಿ ಸಂಶಯವಿಲ್ಲ. ಶೀಘ್ರದಲ್ಲಿಯೇ ಯೋಜನೆಯನ್ನು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಆಯಾ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಜಿಪಂ ಸಿಇಒ ಹೊನ್ನಾಂಬ, ಉಪಕಾರ್ಯದರ್ಶಿ ಡಾ| ರಂಗಸ್ವಾಮಿ ಉಪಸ್ಥಿತರಿದ್ದರು.

ಅಂತರ್ಜಲ ಚೇತನ ಯೋಜನೆಯಡಿ ಇಡೀ ಜಲಾನಯನ ಪ್ರದೇಶದಲ್ಲಿ ನೀರನ್ನು ಇಂಗಿಸುವುದು, ಭೂಮಿಯ ಸವಕಳಿ ತಡೆಯುವ ಕಾರ್ಯವನ್ನು ವೈಜ್ಞಾನಿಕವಾಗಿ ಕೈಗೊಳ್ಳಲಾಗುವುದು. ಇದಕ್ಕೆ ಉಪಗ್ರಹ ಆಧಾರಿತ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ರವೀಂದ್ರ ದೇಸಾಯಿ,
ಆರ್ಟ್‌ ಆಫ್‌ ಲಿವಿಂಗ್‌
ಕಾರ್ಯಾಚರಣೆ ನಿರ್ದೇಶಕ

Advertisement
Advertisement

Udayavani is now on Telegram. Click here to join our channel and stay updated with the latest news.

Next