ಚಿತ್ರದುರ್ಗ: ಕೋವಿಡ್ ಲಾಕ್‌ಡೌನ್ ಕಾರಣಕ್ಕೆ ಜಿಲ್ಲೆಗೆ ಆಗಮಿಸಿರುವ ಕೂಲಿ ಕಾರ್ಮಿಕರು, ರೈತರಿಗೆ ನೆರವಾಗುವ ಉದ್ದೇಶದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಸಮರೋಪಾದಿಯಲ್ಲಿ ಕೆಲಸ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಹೊನ್ನಾಂಬ ತಿಳಿಸಿದ್ದಾರೆ.
ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ನರೇಗಾ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಇಷ್ಟು ದಿನ ಬೇರೆ ಜಿಲ್ಲೆ, ರಾಜ್ಯಗಳಲ್ಲಿದ್ದು, ಈಗ ಜಿಲ್ಲೆಗೆ ಆಗಮಿಸಿರುವ ಕಾರ್ಮಿಕರಿಗೆ ಜಾಬ್‌ಕಾರ್ಡ್ ನೀಡಲಾಗುವುದು. ಈ ವರ್ಷ ನರೇಗಾದಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಆರಂಭಿಸಿದ್ದು, ರೈತರು ತಮ್ಮ ಹೊಲಗಳಲ್ಲಿ ಕೃಷಿಹೊಂಡ, ಬದು ನಿರ್ಮಾಣ ಕಾಮಗಾರಿ ಕೈಗೊಳ್ಳಬಹುದಾಗಿದೆ ಎಂದರು.
ನರೇಗಾದಡಿ ಏನೇನು ಮಾಡಬಹುದು?: ನರೇಗಾ ಯೋಜನೆಯಡಿ ಪ್ರಸ್ತುತ ವೈಯಕ್ತಿಕ ಕಾಮಗಾರಿಗಳು, ಬದುಗಳ ನಿರ್ಮಾಣ, ಕೃಷಿ ಹೊಂಡ, ಅರಣ್ಯದಲ್ಲಿ ಗುಂಡಿ ತೆಗೆಯುವಿಕೆ, ಅರಣ್ಯದಲ್ಲಿ ನೀರು ಇಂಗಿಸುವ ಕಾಮಗಾರಿ, ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ, ರೇಷ್ಮೆ, ಕೃಷಿ ಇಲಾಖೆಯ ವತಿಯಿಂದ ಬದು ನಿರ್ಮಾಣ, ಸಮುದಾಯ ಆಧಾರಿತ ಕಾಮಗಾರಿಗಳಾದ ಕೆರೆ ಮತ್ತು ಗೋಕಟ್ಟೆ ಹೂಳೆತ್ತುವುದು, ಕನ್ವರ್ಜೆನ್ಸ್ ಕಾಮಗಾರಿ ಮಾಡಬಹುದು ಎಂದು ಹೊನ್ನಾಂಬ ಮಾಹಿತಿ ನೀಡಿದ್ದಾರೆ.
75 ಲಕ್ಷ ಮಾನವ ದಿನ ಸೃಜನೆ ಗುರಿ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ನರೇಗಾ ಯೋಜನೆಯಡಿ 75 ಲಕ್ಷ ಮಾನವ ದಿನ ಸೃಜನೆಯ ಗುರಿ ಹೊಂದಿದ್ದು, ಇದಕ್ಕಾಗಿ ಕನಿಷ್ಟ 300 ಕೋಟಿ ರೂ. ವೆಚ್ಚ ಮಾಡುವ ಅಂದಾಜು ಮಾಡಿಕೊಳ್ಳಲಾಗಿದೆ. ಇದಕ್ಕಿಂತ ಹೆಚ್ಚಿನ ಮಾನವ ದಿನಗಳ ಸೃಜನೆಯಾದರೂ ಸರ್ಕಾರ ಅನುದಾನ ನೀಡಲು ಅವಕಾಶ ಕಲ್ಪಿಸಿದೆ. 275 ರೂ. ಕೂಲಿ ನಿಗದಿ ಮಾಡಲಾಗಿದೆ. ಕೂಲಿ ಕಾರ್ಮಿಕರು ಸಲಕೆ, ಗುದ್ದಲಿ ಮುಂತಾದ ಸಲಕರಣೆಗಳನ್ನು ಕೊಂಡೊಯ್ದರೆ ಹೆಚ್ಚುವರಿಯಾಗಿ 10 ರೂ. ಕೂಲಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಜಿಪಂ ಉಪಕಾರ್ಯದರ್ಶಿ ಡಾ| ಎಸ್. ರಂಗಸ್ವಾಮಿ ಮಾಹಿತಿ ನೀಡಿ, ಜಿಲ್ಲೆಯ 188 ಗ್ರಾಪಂಗಳಲ್ಲಿ ನರೇಗಾ ಕೆಲಸ ಆರಂಭವಾಗಿವೆ. ಇದುವರೆಗೆ 4.03 ಲಕ್ಷ ಮಾನವ ದಿನ ಸೃಜನೆಯಾಗಿದ್ದು, ನರೇಗಾ ಯೋಜನೆಯಡಿ ಸದ್ಯ ಜಿಲ್ಲೆಯಲ್ಲಿ 27 ಸಾವಿರ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ 10 ಕೋಟಿ ರೂ. ಕೂಲಿ ಬಾಬ್ತು ಪಾವತಿಸಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಕೂಲಿ ಕೆಲಸವಿಲ್ಲದೆ ಆತಂಕದಲ್ಲಿದ್ದ ಜಿಲ್ಲೆಯ ಕೂಲಿ ಕಾರ್ಮಿಕರು ಆರ್ಥಿಕ ಸಂಕಷ್ಟದಿಂದ ಪಾರಾಗಲು ಸರ್ಕಾರ ಅನುಕೂಲ ಕಲ್ಪಿಸಿದೆ ಎಂದರು.