Advertisement

ಅಪರೂಪಕ್ಕೆ ಬಂದು ಹೋದರೆ ಅಭಿವೃದ್ಧಿ ಹೇಗೆ ಸಾಧ್ಯ?

01:25 PM May 30, 2020 | Naveen |

ಚಿತ್ರದುರ್ಗ: ಬಿಜೆಪಿ ಮೂರು ಸಲ ಅಧಿಕಾರಕ್ಕೆ ಬಂದಾಗಲೂ ಬೇರೆಯವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಬೇಸರ ವ್ಯಕ್ತಪಡಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೊರಗಿನವರೇ ಇಲ್ಲಿಗೆ ಉಸ್ತುವಾರಿ ಸಚಿವರಾಗುತ್ತಿದ್ದಾರೆ. ಇದರಿಂದ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿಯುತ್ತಿದೆ. ಜಿಲ್ಲೆಯಲ್ಲಿ ಈಗ ಬಿಜೆಪಿ ಬಲಿಷ್ಠವಾಗಿ ಬೆಳೆಯುತ್ತಿದೆ. ಆದರೆ ಉಸ್ತುವಾರಿ ವಹಿಸಿಕೊಂಡವರು ಆರು ತಿಂಗಳಿಗೋ, ಮೂರು ತಿಂಗಳಿಗೋ ಬಂದು ಹೋದರೆ ಹೇಗೆ ಎಂದು ಪ್ರಶ್ನಿಸಿದರು. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿ ಹೋದರೆ, 6 ತಿಂಗಳಿಗೊಂದು ಕೆಡಿಪಿ ಸಭೆ ಮಾಡಿದರೆ ಇಲ್ಲಿನ ಸಮಸ್ಯೆಗಳು ಬಗೆಹರಿಯುವುದಿಲ್ಲ. ಎಲ್ಲ ಶಾಸಕರು ಕೂಡಾ ಸುದೀರ್ಘ‌ವಾಗಿ ಚರ್ಚಿಸಿದ ಉದಾಹರಣೆಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2013ರಲ್ಲಿ ಜಿಲ್ಲೆಗೆ ಮೆಡಿಕಲ್‌ ಕಾಲೇಜು ಮಂಜೂರಾಗಿದೆ. ಆದರೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಆಕ್ಷೇಪಿಸಿದರು. ಶೇ. 80 ರಷ್ಟು ಹಿಂದುಳಿದ, ದಲಿತರಿರುವ ಜಿಲ್ಲೆಯಾಗಿದೆ. 2008ರಲ್ಲಿ ಬಿಎಸ್‌ವೈ ಮುಖ್ಯಮಂತ್ರಿ ಆಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿದರು. ಅಂದು ವಿವಿ ಸಾಗರಕ್ಕೆ 5 ಟಿಎಂಸಿ ನೀರು ಹಂಚಿಕೆ ಮಾಡಲಾಗಿತ್ತು. ಆದರೆ ನಂತರ ಬಂದ ಕಾಂಗ್ರೆಸ್‌ ಸರ್ಕಾರ ಅದನ್ನು 2 ಟಿಎಂಸಿಗೆ ಇಳಿಸಿದೆ. ಭದ್ರಾದಿಂದ 5 ಟಿಎಂಸಿ, ಎತ್ತಿನಹೊಳೆ ಯೋಜನೆಯಿಂದ 5 ಸೇರಿ ವಿವಿ ಸಾಗರಕ್ಕೆ 10 ಟಿಎಂಸಿ ನೀರು ಹರಿಸಿದರೆ ಮಾತ್ರ ಜಿಲ್ಲೆಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸಮರ್ಥವಾಗಿ ಹೋರಾಡಲು ಪ್ರತಿನಿಧಿ ಬೇಕು. ಈ ಭಾಗದ ಎಲ್ಲಾ ಸಂಘಟನೆಗಳು, ರೈತರು ಸೇರಿ ಹೋರಾಡಿದರಷ್ಟೇ ಸಾಧ್ಯ. ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದುಳಿದಿರುವ ಜಿಲ್ಲೆಗೆ ಅವರಿಂದ ಸಕಾರಾತ್ಮಕ ಫಲಿತಾಂಶ ಸಿಗುವ ನಿರೀಕ್ಷೆಯಲ್ಲಿದ್ದೇವೆ. ಈ ಬಗ್ಗೆ ಸಿಎಂ ಭೇಟಿ ಮಾಡಲಿದ್ದೇವೆ ಎಂದರು.

ಕಾಂಗ್ರೆಸ್ಸಿನಿಂದ ಬಂದವರಿಗೆ ಸಚಿವ ಸ್ಥಾನ ಕೊಟ್ಟಿದ್ದರ ಬಗ್ಗೆ ಅಸಮಾಧಾನ ಇಲ್ಲ. ಅವರಿಂದಲೇ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಾಗಾಗಿ ಅವರಿಗೆ ಮೊದಲ ಆದ್ಯತೆ ಸಿಗಬೇಕು. ಕೋವಿಡ್ ಸಂದರ್ಭದಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ ವಯಸ್ಸಿಗೆ ಮೀರಿ ಕೆಲಸ ಮಾಡಿದ್ದಾರೆ. ಅವರ ಕೆಲಸದ ಬಗ್ಗೆ ತೃಪ್ತಿ ಇದೆ. ಆದರೆ ಕೆಲ ಸಚಿವರು ಅಭಿವೃದ್ಧಿ ಬಗ್ಗೆ ಗಮನ ಹರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಬದಲಾವಣೆ ಮಾಡುವುದು ಸೂಕ್ತ.
ಜಿ.ಎಚ್‌. ತಿಪ್ಪಾರೆಡ್ಡಿ,
ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next