ಚಿತ್ರದುರ್ಗ: ಲಾಕ್‌ಡೌನ್ ಸಡಿಲಿಕೆ ಕಾರಣಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ ಆರ್‌ಟಿಸಿ) ಜಿಲ್ಲೆ, ಅಂತರ್ ಜಿಲ್ಲೆಗೆ ಬಸ್ ಸಂಚಾರ ಆರಂಭಿಸಿದ್ದು, ಬೆಂಗಳೂರಿಗೆ ಅತಿ ಹೆಚ್ಚು ಬಸ್ ಸಂಚರಿಸಿದವು.
ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗದಿಂದ ಮಂಗಳವಾರ ಲಾಕ್‌ಡೌನ್ ಸಡಿಲಿಕೆಯ ಮೊದಲ ದಿನವೇ 67 ಬಸ್‌ಗಳು ಕಾರ್ಯಾಚರಣೆ ನಡೆಸಿದವು. ಇದರಲ್ಲಿ ಬೆಂಗಳೂರಿಗೆ 55ಕ್ಕೂ ಹೆಚ್ಚು ಬಸ್ ಸಂಚಾರ ಮಾಡಿವೆ ಎಂದು ಕೆಎಸ್ ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್ ಮಾಹಿತಿ ನೀಡಿದ್ದಾರೆ.
ಬೆಳಗ್ಗೆ 7 ಗಂಟೆಗೆ ಆರಂಭವಾದ ಬಸ್ ಸಂಚಾರ ಸಂಜೆ 5 ಗಂಟೆಗೆ ಮುಕ್ತಾಯವಾಯಿತು. ರಾತ್ರಿ 7 ಗಂಟೆಯೊಳಗೆ ಕಾರ್ಯಾಚರಣೆ ನಿಲ್ಲಿಸುವ ಸೂಚನೆ ಇರುವುದರಿಂದ ಚಿತ್ರದುರ್ಗದಿಂದ ಹೊರಟು ನಿಗಧಿತ ಸ್ಥಳವನ್ನು 7 ಗಂಟೆಗೆ ತಲುಪುವಂತೆ ನೋಡಿಕೊಂಡು ಸಂಜೆ 5 ಗಂಟೆಗೆ ಕೊನೆಯ ಬಸ್ ತೆರಳಿತು. ಬೆಂಗಳೂರು ಮಾರ್ಗವಾಗಿ ಸಾಗುವ ಬಸ್‌ಗಳ ಸೇವೆ ಮಧ್ಯಾಹ್ನ 2:30ಕ್ಕೆ ಕೊನೆಗೊಂಡಿತು.
ಚಿತ್ರದುರ್ಗ ವಿಭಾಗ ವ್ಯಾಪ್ತಿಗೆ ಸೇರಿದ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಮತ್ತು ಪಾವಗಡ ಘಟಕಗಳಿಂದ ಕೆಎಸ್‌ಆರ್‌ಟಿಸಿ ಬಸ್ಸುಗಳು ಸೇವೆ ಒದಗಿಸಿದವು. ಇದರಲ್ಲಿ ಶಿವಮೊಗ್ಗ, ದಾವಣಗೆರೆಗೆ ತಲಾ 2, ಹೊಸಪೇಟೆ, ಹಾಸಕ್ಕೆ ತಲಾ ಒಂದು ಬಸ್ ಸಂಚರಿಸಿವೆ. ಇನ್ನೂ ಸಾಮಾಜಿಕ ಅಂತರ ಕಾಪಾಸಿಕೊಳ್ಳುವ ಕಾರಣಕ್ಕೆ ಒಂದು ಬಸ್‌ನಲ್ಲಿ 28ರಿಂದ 30 ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು. 50 ವರ್ಷ ಮೀರದ ಕೆಎಸ್‌ಆರ್‌ಟಿಸಿ ನೌಕರರನ್ನು ಮಾತ್ರ ಕೆಲಸಕ್ಕೆ ಕರೆಸಿಕೊಂಡಿದ್ದು, ಬಸ್ ಪ್ರಯಾಣ ಮುಗಿಸಿ ಬಂದಾಗ ರಾಸಾಯನಿಕ ಬಳಸಿ ಸ್ವಚ್ಛಗೊಳಿಸಲಾಯಿತು.
ಮಾಸ್ಕ್ ಇಲ್ಲದವರಿಗೆ ಪ್ರವೇಶ ಇಲ್ಲ: ಮನೆಯಿಂದ ಹೊರ ಬರುವಾಗ ಮಾಸ್ಕ್ ಧರಿಸುವುದು ಕಡ್ಡಾಯ. ಬಸ್‌ನಲ್ಲಿ ಪ್ರಯಾಣಿಸುವಾಗ ಮಾಸ್ಕ್ ಧರಿಸಲೇಬೇಕು ಎಂದು ಸರ್ಕಾರ ನಿಯಮ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಬಸ್ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಬಸ್ ಹತ್ತುವಂತೆ ವ್ಯವಸ್ಥೆ ಮಾಡಲಾಗಿತ್ತು. ಜನದಟ್ಟಣೆ ನಿಯಂತ್ರಣಕ್ಕಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ವೇಳೆ ಮಾಸ್ಕ್ ಇಲ್ಲದೆ ಬಸ್ ಪ್ರಯಾಣಕ್ಕೆ ಬರುವವರನ್ನು ಕೆಎಸ್‌ಆರ್‌ಟಿಸಿ ಸಿಬ್ಬಂದಿ ವಾಪಸ್ ಕಳಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಸ್ಯಾನಿಟೈಸರ್ ಬಳಕೆ ಮಾಡುವುದು, ಹತ್ತು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ವೃದ್ಧರಿಗೆ ಸಂಚಾರ ಮಾಡದಂತೆ ಸೂಚನೆ ನೀಡಲಾಗುತ್ತಿತ್ತು.
ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್: ಸರತಿ ಸಾಲಿನಲ್ಲಿ ಬಸ್ ಹತ್ತಲು ಆಗಮಿಸುತ್ತಿದ್ದ ಪ್ರಯಾಣಿಕರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಇದ್ದು, ಥರ್ಮಲ್ ಸ್ಕ್ರೀನಿಂಗ್ ಮೂಲಕ ದೇಹದ ಉಷ್ಣ ತಪಾಸಣೆ ಮಾಡುತ್ತಿದ್ದರು. 98 ಡಿಗ್ರಿಗಿಂತ ಕಡಿಮೆ ಉಷ್ಣಾಂಶ ಇರುವ ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಯಿತು. ಬಸ್‌ನಲ್ಲಿ ತೆರಳುವ ಪ್ರತಿ ಪ್ರಯಾಣಿಕರ ವಿವರವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ದಾಖಲಿಸಿಕೊಳ್ಳುತ್ತಿದ್ದರು. ಆಧಾರ್, ಮತದಾರರ ಚೀಟಿ, ಚಾಲನಾ ಪರವಾನಗಿ ಸೇರಿ ಗುರುತಿನ ಚೀಟಿಯನ್ನು ಪರಿಶೀಲಿಸಲಾಯಿತು.
ಚಿತ್ರದುರ್ಗ ವಿಭಾಗಕ್ಕೆ 17 ಕೋಟಿ ರೂ. ನಷ್ಟ ಕೋವಿಡ್ ನಿಯಂತ್ರಣದ ಲಾಕ್‌ಡೌನ್ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಸೇವೆ ಸಂಪೂರ್ಣ ಬಂದ್ ಮಾಡಿದ್ದರಿಂದ ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗಕ್ಕೆ ಇದುವರೆಗೆ ಒಟ್ಟು 17 ಕೋಟಿ ರೂ. ನಷ್ಟವಾಗಿದೆ. ಬಸ್ ಸಾಮರ್ಥ್ಯದ ಅರ್ಧದಷ್ಟು ಜನರನ್ನು ಮಾತ್ರ ಸಾಮಾಜಿಕ ಅಂತರದಲ್ಲಿ ಕರೆದೊಯ್ಯುವುದರಿಂದ ಈ ನಷ್ಟ ಮುಂದುವರೆಯಲಿದೆ. ಒಂದು ಬಸ್ ಒಂದು ಕಿಮೀ ಸಂಚರಿಸಲು 36 ರೂ. ವೆಚ್ಚವಾಗಲಿದ್ದು, ಈಗ 20 ರೂ. ಮಾತ್ರ ಆದಾಯ ಸಿಗುತ್ತಿದೆ. ಇನ್ನೂ 16 ರೂ. ನಷ್ಟವಾಗುತ್ತದೆ ಕೆಎಸ್ ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್ ತಿಳಿಸಿದರು.