Advertisement

ಭಗವದ್ಗೀ ತೆ ಅರಿತರೆ ಶಾಂತಿ-ಸಾಮರಸ್ಯ

12:59 PM Oct 31, 2019 | Naveen |

ಚಿತ್ರದುರ್ಗ: ಭಗವದ್ಗೀತೆಯ ಅಧ್ಯಯನ ಹಾಗೂ ಅದನ್ನು ಅರ್ಥ ಮಾಡಿಕೊಳ್ಳುವುದರಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ ಹಾಗೂ ರಾಷ್ಟ್ರೀಯ ಭಾವೈಕ್ಯತೆ ಮೂಡಿಸಲು ಸಾಧ್ಯ ಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಮದ್‌ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ಅಭಿಪ್ರಾಯಪಟ್ಟರು.

Advertisement

ಸರ್ವೇಜ್ನೇಂದ್ರ ಸರಸ್ವತಿ ಪ್ರತಿಷ್ಠಾನದಡಿ ಚಿತ್ರದುರ್ಗ ಜಿಲ್ಲಾ ಸಮಿತಿ ನಗರದ ವಾಸವಿ ಮಹಲ್‌ ನಲ್ಲಿ ಬುಧವಾರ ಆಯೋಜಿಸಿದ್ದ ಭಗವದ್ಗೀತಾ ಅಭಿಯಾನದ ಉದ್ಘಾಟನಾ ಸಮಾರಂಭದ ನೇತೃತ್ವ
ವಹಿಸಿ ಮಾತನಾಡಿದರು.

ಸಮಾಜದಲ್ಲಿ ಮೇಲು, ಕೀಳು ಎಂಬುದನ್ನು ತೊಡೆದು ಹಾಕಿ ಸಾಮರಸ್ಯ ಮೂಡಿಸಲು ಭಗವದ್ಗೀತೆ ಸಹಕಾರಿಯಾಗಲಿದೆ. ಜತೆಗೆ ಇತ್ತೀಚೆಗೆ ವಿದ್ಯಾವಂತರೇ ಭಯೋತ್ಪಾಧನೆಯಂತಹ ದುಷ್ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಗೀತೆಯನ್ನು ಓದಿ ಅರ್ಥ ಮಾಡಿಕೊಂಡರೆ ಇಂಥದ್ದು ಮನಸ್ಸಿಗೆ ಬರಲು ಸಾಧ್ಯವಿಲ್ಲ. ರಾಷ್ಟ್ರೀಯ ಭಾವೈಕ್ಯತೆ ಕೂಡಾ ಗೀತೆಯಿಂದ ಸಾಧ್ಯವಿದೆ ಎಂದರು.

12 ವರ್ಷದಿಂದ ನಿರಂತರವಾಗಿ ಭಗವದ್ಗೀತಾ ಅಭಿಯಾನ ನಡೆಯುತ್ತಿದ್ದು, ಈ ಮೂಲಕ ಕಾಮ, ಕ್ರೋಧ, ಲೋಭಗಳೆಂಬ ನರಕದ ಬಾಗಿಲುಗಳಿಗೆ ಉಪಸಂಹಾರ ಮಾಡುವ ಕೆಲಸ ಮಾಡುತ್ತಿದ್ದೇವೆ. ಈ ಮೂರು ಇಲ್ಲದಿದ್ದರೆ ಜಗತ್ತಿನಲ್ಲಿ ನರಕಕ್ಕೆ ಹೋಗುವ ಅವಕಾಶಗಳೇ ಇಲ್ಲವಾಗುತ್ತವೆ. ಅತಿಯಾದ ಕಾಮದಿಂದ ಅಂದರೆ ಆಸೆಯಿಂದ ಉತ್ತರ ಭಾರತದ
ಸ್ವಾಮೀಜಿಯೊಬ್ಬರು ಜೈಲು ಪಾಲಾಗಿದ್ದಾರೆ.

ಅತಿಯಾದ ಕ್ರೋಧದಿಂದ ಉಗ್ರ ಬಾಗ್ಧಾದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಅತಿಯಾದ ಲೋಭದಿಂದ ಹಣ ಸಂಪಾದಿಸಿ ಐಟಿ ರೇಡ್‌ ಮಾಡಿಸಿಕೊಳ್ಳುವ ಸುದ್ದಿಗಳು ನಮ್ಮ ಮುಂದಿವೆ ಎಂದರು.

Advertisement

ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಭಗವದ್ಗೀತಾ ಅಭಿಯಾನದಲ್ಲಿ ಕೈ ಜೋಡಿಸಬೇಕು. ಕನಿಷ್ಠ ಒಂದಾದರೂ ಶ್ಲೋಕ ಹೇಳಬೇಕು. ಅರ್ಥ ಮಾಡಿಕೊಳ್ಳಬೇಕು. ಭಗವದ್ಗೀತೆಯ ಕೃತಿಗಳನ್ನು ಹಂಚಬೇಕು. ಜನ ಸೇರುವ ಸ್ಥಳಗಳಲ್ಲಿ ಗೀತೆಯ ಬಗ್ಗೆ ಉಪನ್ಯಾಸ, ಅಭ್ಯಾಸ ಮಾಡಿಸುವ ಮೂಲಕ ಕೈ ಜೋಡಿಸಿ. ಡಿಸೆಂಬರ್‌ 7ರಂದು ಚಿತ್ರದುರ್ಗದಲ್ಲಿ ನಡೆಯುವ ಅಭಿಯಾನದ ಸಮಾರೋಪದಲ್ಲಿ ಕನಿಷ್ಠ 15 ಸಾವಿರ ಜನ ಶ್ಲೋಕಗಳನ್ನು ಹೇಳಬೇಕು ಎಂದು ತಿಳಿಸಿದರು.

ಸದ್ಗುರು ಕಬೀರಾನಂದ ಮಠದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ನಮ್ಮ
ಮನದ ಮಾತುಗಳನ್ನೇ ಶ್ರೀ ಕೃಷ್ಣ ಪರಮಾತ್ಮ ರಣರಂಗದಲ್ಲಿ ಭಗವದ್ಗೀತೆಯ ರೂಪದಲ್ಲಿ ಹೇಳಿದ್ದಾನೆ.

ಇಂದು ಎಲ್ಲೆಲ್ಲೂ ಗೊಂದಲದ ವಾತಾವರಣವಿದೆ. ಮಕ್ಕಳು ವಚನ ಕಲಿಯಲಿ, ಗೀತೆ ಕಲಿಯಲಿ ಎಂದು ಹೇಳುತ್ತಾ ಯಾವುದೂ ಪಠ್ಯದಲ್ಲಿ ಇಲ್ಲದಂತಾಗಿದೆ. ಇಂಗ್ಲಿಷ್‌ ವ್ಯಾಮೋಹಕ್ಕೆ ಬಿದ್ದು ಮಕ್ಕಳಲ್ಲಿ ಗೊಂದಲ ಮೂಡಿಸಲಾಗಿದೆ ಎಂದು ಹೇಳಿದರು.

ನ್ಯಾಯಾಲಯ ಕೂಡಾ ಭಗವದ್ಗೀತೆಗೆ ಮಾನ್ಯತೆ ನೀಡಿದೆ. ಅದೊಂದು ವಿಶ್ವಮಾನ್ಯವಾದ ಗ್ರಂಥ. ಕಲ್ಲು ಸಕ್ಕರೆಯಷ್ಟೇ ಸಿಹಿಯಾಗಿದೆ. ಆದ್ದರಿಂದ ಮಕ್ಕಳು ಅಭ್ಯಾಸ ಮಾಡಬೇಕು. ಮೊಬೈಲ್‌ ನೊಡುವುದರಿಂದ ಕಣ್ಣುಗಳ ಹಾಳಾಗುತ್ತವೆ. ಗೀತೆ ಓದುವುದರಿಂದ ಕಣ್ಣು ಪಾವನವಾಗುತ್ತವೆ ಎಂದರು.

ಶಾರದಾ ರಾಮಕೃಷ್ಣಾಶ್ರಮದ ಶ್ರೀ ಬ್ರಹ್ಮನಿಷ್ಠಾನಂದ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಬೈಬಲ್‌ ಬಿಟ್ಟರೆ
ಅತೀ ಹೆಚ್ಚು ಭಾಷೆಗಳಲ್ಲಿ ಮುದ್ರಣ ಆಗಿರುವ ಗ್ರಂಥ
ಭಗವದ್ಗೀತೆ. ಶ್ರೀ ಕೃಷ್ಣನನ್ನು ಸರಿಯಾಗಿ ಅರ್ಥ
ಮಾಡಿಕೊಳ್ಳಬೇಕಾದರೆ ಭಗವದ್ಗೀತೆ ಅರ್ಥವಾಗಬೇಕು ಎಂದು ತಿಳಿಸಿದರು.

ರಣರಂಗದಲ್ಲಿ ಅರ್ಜುನನ್ನು ನೆಪ ಮಾಡಿಕೊಂಡು ಶ್ರೀ ಕೃಷ್ಣ ಗೀತೋಪದೇಶ ಮಾಡಿದ್ದಾನೆ. ಯುದ್ಧದ ಅಂಜಿಕೆಯಲ್ಲಿದ್ದ ಅರ್ಜುನನಿಗೆ ಧೈರ್ಯ ತುಂಬುತ್ತಾನೆ. ಅದೇ ರೀತಿ ಪರೀಕ್ಷಾ ಭಯದಲ್ಲಿರುವ ಮಕ್ಕಳು ಗೀತೆ ಓದುವುದರಿಂದ ಏಕಾಗ್ರತೆ, ಆತ್ಮಸ್ಟೈರ್ಯ  ಮೂಡಿ ಪರೀಕ್ಷೆಯ ಭಯ ದೂರವಾಗುತ್ತದೆ ಎಂದರು.

ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮಾತನಾಡಿ, ಭಗವದ್ಗೀತೆ ಒಂದು ಧರ್ಮಕ್ಕೆ ಸೀಮಿತವಾದ ಗ್ರಂಥವಲ್ಲ. ಅದೊಂದು ನೀತಿ, ಬದುಕುವ ಪದ್ಧತಿ ಹೇಳುವ ಗ್ರಂಥ. ಎಲ್ಲ ಧರ್ಮಿಯರು ಓದಿ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಶೇ.90ರಷ್ಟು ಕೂಲಿ ಕಾರ್ಮಿಕರೇ ಇರುವ ಹಿಂದುಳಿದ ಚಿತ್ರದುರ್ಗ ಜಿಲ್ಲೆಯಲ್ಲಿ ಭಗವದ್ಗೀತೆ ಅಭಿಯಾನ ಬಹಳ ಉಪಯೋಗವಾಗಲಿದೆ. ಡಿಸೆಂಬರ್‌ 7ರಂದು ನಡೆಯುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಆಗಮಿಸಿದಾಗ ಅವರಿಗೆ ಅಭಿಯಾನದ ಉದ್ದೇಶ ಹೇಳಬಹುದು. ಈ ಮೂಲಕ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗಲಿದೆ ಎಂದರು.

ದೇಶ ಕಟ್ಟುವ ಕೆಲಸಕ್ಕೆ ಗೀತೆಯ ಅಧ್ಯಯನ ಬಹಳ ಉಪಯೋಗವಾಗಲಿದೆ. ದೇಶ ಮೊದಲು ನಂತರ ನಾನು ಎಂಬ ಭಾವನೆ ಎನ್ನುವ ಭಾವ ಬರಬೇಕು. 2ರಿಂದ 3 ವರ್ಷ ಮಕ್ಕಳಿಗೆ ಶಾಲೆಯಲ್ಲಿ ಭಗವದ್ಗೀತೆ
ಹೇಳಿಕೊಟ್ಟರೆ ಬದುಕುವ ರೀತಿ, ನೀತಿಗಳು ತಿಳಿಯುತ್ತವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಭಿಯಾನ ಯಶಸ್ವಿಯಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಬಿಇಒ ಬಿ. ಸಿದ್ದಪ್ಪ, ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಕಾಶಿ ವಿಶ್ವನಾಥ ಶೆಟ್ಟಿ, ಪ್ರಧಾನ ಸಂಚಾಲಕ ನಾಗರಾಜ್‌ ಭಟ್‌, ಪ್ರಧಾನ ಕಾರ್ಯದರ್ಶಿಗಳಾದ ಡಾ| ಕೆ. ರಾಜೀವ್‌ಲೋಚನ,
ಟಿ.ಎನ್‌. ಮಾರುತಿ ಮೋಹನ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next