ಸುರತ್ಕಲ್: ಮಂಗಳೂರು ಹೊರವಲಯದ ಚಿತ್ರಾಪುರದಲ್ಲಿ ಸಮುದ್ರ ಕೊರೆತ ತಡೆಗೆ ಕಲ್ಲಿನ ತಡೆಗೋಡೆ ನಿರ್ಮಿಸುವ ಕಾಮಗಾರಿ ಹಗಲು ರಾತ್ರಿ ನಡೆಯುತ್ತಿದ್ದು, ಈ ಬಾರಿಯೂ ಸಮುದ್ರ ಕೊರೆತ ಆತಂಕ ಎದುರಿಸುತ್ತಿದ್ದ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ. ಎರಡು ಜೆಸಿಬಿಗಳನ್ನು ಬಳಸಿ ಕಾಮಗಾರಿ ನಡೆಯುತ್ತಿದ್ದು, ಒಂದೆರಡು ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
ಜ. 18ರಂದು ಶಾಸಕ ಡಾ| ಭರತ್ ಶೆಟ್ಟಿ ವೈ. ಚಾಲನೆ ನೀಡಿದ ಬಳಿಕ ಕಾಮಗಾರಿ ಅಡೆತಡೆಯಿಲ್ಲದೆ ಸಾಗಿದೆ. ಮರಳಿನಲ್ಲಿ ಆಳಕ್ಕೆ ಗುಂಡಿ ತೆಗೆದು ನೂತನ ತಂತ್ರಜ್ಞಾನದ ಮೂಲಕ ಯಾವುದೇ ದೊಡ್ಡ ತೆರೆಗಳಿಗೂ ಅಲುಗಾಡದಂತೆ ಕಲ್ಲಿನ ತಡೆಗೋಡೆ ನಿರ್ಮಾಣವಾಗುತ್ತಿದೆ.
5.60 ಕೋ.ರೂ.ಅನುದಾನ ಬಿಡುಗಡೆಯಾಗಿ ಒಟ್ಟು 460 ಮೀ. ತಡೆಗೋಡೆ ಕಾಮಗಾರಿ ಈ ಭಾಗದಲ್ಲಿ ಹಾಗೂ ಮೀನಕಳಿಯದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಉಳಿದ ಭಾಗದಲ್ಲಿ ಮುಂದುವರಿಸಲು ಅನುದಾನ ಮೀಸಲಿ ಡಬೇಕಾಗಿದೆ. ಪಣಂಬೂರು ಮೊಗವೀರ ಮಹಾ ಸಭಾ ವ್ಯಾಪ್ತಿಯ ರಂಗ ಮಂದಿರದ ಕಡೆಯಿಂದ ಚಿತ್ರಾಪುರ ಬೀಚ್‌ವರೆಗೆ ಕಾಮಗಾರಿ ನಡೆಯಲಿದೆ. ಮಳೆಗಾಲಕ್ಕೆ ಇನ್ನೇನು ಒಂದೆರಡು ತಿಂಗಳು ಮಾತ್ರವಿದ್ದು, ಕಾಮಗಾರಿ ಪೂರ್ಣಕ್ಕೆ ಆದ್ಯತೆ ನೀಡಲಾಗಿದೆ.
ಅನುದಾನ ಒದಗಿಸಲು ಕೇಂದ್ರಕ್ಕೆ ಪ್ರಸ್ತಾವನೆ
ಕಳೆದ ಬಾರಿ ಈ ಭಾಗದಲ್ಲಿ ಮೀನುಗಾರಿಕೆ ರಸ್ತೆ, ಕಡಲ ಕಿನಾರೆಯ ಭೂಮಿ, ಹಲವಾರು ತೆಂಗಿನ ಮರಗಳು ಸಮುದ್ರ ಪಾಲಾಗಿದ್ದು, ಹಲವು ಮನೆಗಳು ಅಪಾಯಕ್ಕೆ ಸಿಲುಕಿದ್ದವು. ತತ್‌ಕ್ಷಣ ತಾತ್ಕಾಲಿಕ ಕಾಮಗಾರಿ ನಡೆಸಿ ಮನೆಗೆ ಹಾನಿಯಾಗದಂತೆ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಈಗಾಗಲೇ ಕೇಂದ್ರದ ಕ್ರಿಯಾ ಸಮಿತಿಗೆ ರಾಜ್ಯ ಯಾವ ಭಾಗದಲ್ಲಿ ಕಡಲ್ಕೊರೆತ ಹೆಚ್ಚಿದೆ ಎಂಬುದರ ಬಗ್ಗೆ ಮಾಹಿತಿ ನೀಡಿ, ಅನುದಾನಕ್ಕೆ ಮನವಿ ಮಾಡಿತ್ತು. ಅದರಂತೆ ರಾಜ್ಯಕ್ಕೆ ಒಟ್ಟು 100 ಕೋಟಿ ರೂ.ಗಳ ಅಗತ್ಯವಿದೆ ಎಂಬ ಬಗ್ಗೆ ರಾಜ್ಯದ ಅಧಿಕಾರಿಗಳು ಅಂದಾಜು ಪಟ್ಟಿ ತಯಾರಿಸಿ ಕೇಂದ್ರದ 15ನೇ ಹಣಕಾಸು ಯೋಜನೆಯಲ್ಲಿ ಅನುದಾನ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆ ಜಾರಿಯಾದಲ್ಲಿ ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದ ಮೀನಕಳಿಯ, ಮುಕ್ಕ, ಸುರತ್ಕಲ್ ಲೈಟ್‌ಹೌಸ್, ತಣ್ಣೀರುಬಾವಿ, ಚಿತ್ರಾಪುರದ ಉಳಿದ ಭಾಗದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ ಸಾಧ್ಯವಾಗಲಿದೆ.
ಭರವಸೆ ಈಡೇರಿದೆ
ಈ ಬಾರಿ ಸಮುದ್ರ ಕೊರೆತ ತಡೆಗೆ ತಡೆಗೋಡೆ ನಿರ್ಮಾಣ ಪೂರ್ಣಗೊಳ್ಳುತ್ತಿದ್ದು, ಪಣಂಬೂರು ಮೊಗವೀರ ಮಹಾಸಭಾ ವ್ಯಾಪ್ತಿಯಲ್ಲಿ ನಮಗೆ ಸುರಕ್ಷೆ ಸಿಕ್ಕಿದೆ. ಶಾಸಕರು ನೀಡಿದ ಭರವಸೆ ಈಡೇರಿದೆ. ಕಳೆದ ಬಾರಿ ಕಡಲ್ಕೊರೆತಕ್ಕೆ ರಂಗ ಮಂದಿರದ ದರೆ ಸಮುದ್ರಪಾಲಾಗಿತ್ತು. ಕಳೆದ ಮಳೆಗಾಲಕ್ಕೆ ಮಹಾ ಸಭಾದ ವತಿಯಿಂದ 10 ಲ.ರೂ. ಖರ್ಚು ಮಾಡಿ ತಾತ್ಕಾಲಿಕ ಮರಳು ಚೀಲ ಇಟ್ಟು ಭೂಮಿ ರಕ್ಷಣೆಗೆ ಕ್ರಮ ಕೈಗೊಂಡಿದ್ದೆವು. ಶಾಸಕರು ಈ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಮಹಾಸಭಾ ಅಧ್ಯಕ್ಷ ಮಾಧವ ಸುವರ್ಣ ತಿಳಿಸಿದ್ದಾರೆ.
ಬಹುದಿನಗಳ ಬೇಡಿಕೆ
ರಾಜ್ಯದ ಬಂದರು ಇಲಾಖೆಯಿಂದ ಈ ಬಾರಿ ಚಿತ್ರಾಪುರದಲ್ಲಿ ಕಡಲ್ಕೊರೆತ ತಡೆಗೆ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುತ್ತಿದೆ. ಸ್ಥಳೀಯರ ಬಹುದಿನಗಳ ಬೇಡಿಕೆ ಈಡೇರಿಸಲಾಗಿದೆ. ಉತ್ತರ ಕ್ಷೇತ್ರದ 5 ಕಡೆಗಳಲ್ಲಿ ಶಾಶ್ವತ ತಡೆಗೋಡೆ ರಚೆನೆ ಕೇಂದ್ರದ ಎನ್‌ಡಿಆರ್ ಎಂಎಫ್ ಯೋಜನೆಯಲ್ಲಿ ಅನುದಾನ ಒದಗಿದಲ್ಲಿ ಮತ್ತಷ್ಟು ಕಾಮಗಾರಿ ಕೈಗೊಂಡು ಆಸ್ತಿ, ಮನೆಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು.
– ಡಾ| ಭರತ್ ಶೆಟ್ಟಿ ವೈ.,ಶಾಸಕರು, ಮಂಗಳೂರು ನಗರ ಉತ್ತರ.