ಚಿತ್ರದುರ್ಗ: ಶ್ರಮ ಹಾಗೂ ಕಸುಬು ಆಧಾರಿತವಾಗಿ ಪ್ರವರ್ಗ 2ಎ ಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಆದರೆ ಕೆಲ ಪ್ರಭಾವಿ ಸಮುದಾಯಗಳು ಈ ಮೀಸಲಾತಿಗೆ ಸೇರಲು ಒತ್ತಡ ಹಾಕುತ್ತಿವೆ ಎಂದು ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆತಂಕ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1931ರ ನಂತರ ದೇಶದಲ್ಲಿ ಜಾತಿ ಗಣತಿ ನಡೆದಿಲ್ಲ. ಕಾಲ್ಪನಿಕವಾಗಿ ಮೀಸಲಾತಿ ಪ್ರಮಾಣ ಏರಿಸಿಕೊಂಡು ಹೋಗುತ್ತಿರುವುದು ಅವೈಜ್ಞಾನಿಕ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ನೀಡಿರುವ ಜಾತಿ ಗಣತಿ ವರದಿಯನ್ನು ಸರ್ಕಾರ ಸದನದಲ್ಲಿ ಮಂಡಿಸಬೇಕು ಎಂದು ಒತ್ತಾಯಿಸಿದರು.
ಪ್ರವರ್ಗ 1 ರಲ್ಲಿ 95 ಜಾತಿಗಳಿದ್ದು ಶೇ. 4 ರಷ್ಟು ಮೀಸಲಾತಿ ಇದೆ. ಪ್ರವರ್ಗ 2ಎನಲ್ಲಿ 102 ಜಾತಿಗಳಿದ್ದು ಶೇ.15 ರಷ್ಟು ಮೀಸಲಾತಿ ಇದೆ. ಆದರೆ, ಈ ಎರಡೂ ಪಟ್ಟಿಯಲ್ಲಿರುವ ಶೇ. 70 ರಷ್ಟು ಜನರಿಗೆ ಈವರೆಗೆ ಮೀಸಲಾತಿಯ ಒಂದೂ ಹುದ್ದೆ ಸಿಕ್ಕಿಲ್ಲ, ಒಂದೇ ಒಂದು ಶೈಕ್ಷಣಿಕ ಅವಕಾಶವೂ ಸಿಕ್ಕಿಲ್ಲ. ಪರಿಸ್ಥಿತಿ ಹೀಗಿರುವಾಗ ಶೈಕ್ಷಣಿಕ, ರಾಜಕೀಯ, ಸಾಮಾಜಿಕವಾಗಿ ಪ್ರಬಲವಾಗಿರುವ ಜಾತಿಗಳು ಮೀಸಲಾತಿ ಪಟ್ಟಿಯಲ್ಲಿ ಸೇರಿಕೊಳ್ಳಲು ಹವಣಿಸುತ್ತಾ ಶಕ್ತಿ ಪ್ರದರ್ಶನ ಮಾಡುತ್ತಿವೆ ಎಂದರು.
ಪ್ರಬಲ ಸಮುದಾಯಗಳು ನಮ್ಮ ಪಾಲಿನ ಹಕ್ಕುಗಳಿಗೆ ಕೈ ಹಾಕುವುದನ್ನು ನೋಡಿಕೊಂಡು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಪ್ರಬಲ ಜಾತಿಗಳಿಗೆ ದೊಡ್ಡ ಶಕ್ತಿಯಿದ್ದರೂ 2ಎ ಮೀಸಲಾತಿಗೆ ಕೈ ಹಾಕುತ್ತಿರುವುದು ನ್ಯಾಯವಲ್ಲ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ತಳ ಸಮುದಾಯಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ| ಸಿ.ಎಸ್. ದ್ವಾರಕಾನಾಥ್ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದನ್ವಯ ಮೀಸಲಾತಿಯ ಮಿತಿ ಶೇ. 50 ರಷ್ಟನ್ನು ಮೀರಬಾರದು ಎಂದಿದೆ. ಆದರೆ ತಮಿಳುನಾಡಲ್ಲಿ ಶೇ. 69ಕ್ಕೆ ತಲುಪಿದೆ. ಈ ಆಧಾರದಲ್ಲಿ ಕರ್ನಾಟಕಕ್ಕೆ ಶೇ. 73 ರಷ್ಟು ಮೀಸಲಾತಿ ಬೇಕಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯ್ಲಿ ಅವರು ಮೀಸಲಾತಿ ಹೆಚ್ಚಳಕ್ಕೆ ಬಿಲ್ ಪಾಸು ಮಾಡಿದ್ದರು.
ಆದರೆ ಪ್ರಬಲ ಸಮುದಾಯಗಳು ಇದನ್ನು ತಡೆದಿದ್ದವು. ಆಗ ನ್ಯಾಯಾಲಯ ಯಾವ ಆಧಾರದಲ್ಲಿ ಇಷ್ಟು ಪ್ರಮಾಣದ ಮೀಸಲಾತಿ ಕೇಳುತ್ತಿರಿ ಎಂದು ಪ್ರಶ್ನೆ ಮಾಡಿತ್ತು. ಆಗ ಸರ್ಕಾರದ ಬಳಿ ಯಾವುದೇ ಆಧಾರ ಇರಲಿಲ್ಲ. ಈಗ ಜಾತಿ ಗಣತಿ ವರದಿ ನಮ್ಮ ಬಳಿ ಇದೆ. ಅದನ್ನು ಕೋರ್ಟ್‌ಗೆ ಸಲ್ಲಿಸಿ ಶೇ. 73 ರಷ್ಟು ಮೀಸಲಾತಿ ಪ್ರಮಾಣ ಹೆಚ್ಚಿಸಿಕೊಳ್ಳಲು ಇದು ಸಕಾಲ ಎಂದು ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಅತಿ ಹಿಂದುಳಿದ ವರ್ಗಗಳ ಜಾಗತ ವೇದಿಕೆ ಉಪಾಧ್ಯಕ್ಷ ಪಿ.ಆರ್. ರಮೇಶ್, ಪ್ರಧಾನ ಕಾರ್ಯದರ್ಶಿ ಎಸ್.ಆರ್. ಯಲ್ಲಪ್ಪ, ಎಚ್.ಸಿ. ರುದ್ರಪ್ಪ ಮತ್ತಿತರರು ಇದ್ದರು.