ಕುಂದಾಪುರ: ವಿಶ್ವದಲ್ಲಿಯೇ ಅತಿ ಹೆಚ್ಚು ಕಾಳಿಂಗ ಸರ್ಪಗಳ ವಾಸಸ್ಥಾನ ಪಶ್ಚಿಮಘಟ್ಟ. ಆಗುಂಬೆಯಲ್ಲಿ ಅವುಗಳ ಸಮಗ್ರ ಅಧ್ಯಯನಕ್ಕಾಗಿ 2 ಗಂಡು ಕಾಳಿಂಗ ಸರ್ಪಗಳಿಗೆ ಜಿಪಿಎಸ್ ಮಾದರಿಯ ಚಿಪ್ ಅಳವಡಿಸಲಾಗಿದೆ. ಆಗುಂಬೆ ಮಳೆಕಾಡು ಅಧ್ಯಯನ (ರೇನ್ ಫಾರೆಸ್ಟ್ ರಿಸರ್ಚ್ ಸೆಂಟರ್) ಕೇಂದ್ರ ಈ ಸಂಶೋಧನೆ ಕೈಗೊಂಡಿದ್ದು, 20 ಗ್ರಾಂ ತೂಕದ ಚಿಪ್ ಅಳವಡಿಸಲಾಗಿದೆ.
ವಿಶ್ವದ ಅತ್ಯಂತ ಉದ್ದದ, ಹೆಚ್ಚು ವಿಷಪೂರಿತ ಮಾತ್ರವಲ್ಲದೆ ಆಗ್ನೇಯ ಏಷ್ಯಾ ಮತ್ತು ಭಾರತದಲ್ಲಿ ಮಾತ್ರ ಹೆಚ್ಚಾಗಿ ಕಾಣಸಿಗುವ ಕಾಳಿಂಗಗಳ ಜೀವನ ಕ್ರಮ, ಆಹಾರ ಪದ್ಧತಿ, ಚಲನವಲನ, ಸಂತಾನಾಭಿವೃದ್ಧಿ ಸಹಿತ ಸಮಗ್ರ ಮಾಹಿತಿ ಕಲೆ ಹಾಕುವುದು ಮುಖ್ಯ ಉದ್ದೇಶ.
ಏನಿದು ಚಿಪ್?: ಸುಮಾರು 20 ಗ್ರಾಂ. ತೂಕದ ಜಿಪಿಎಸ್ ಮಾದರಿಯ ಚಿಪ್ ಇದು. ಆರು ತಿಂಗಳ ಹಿಂದೆ ಕಾಳಿಂಗಗಳನ್ನು ಸೆರೆಹಿಡಿದು, ಪ್ರಜ್ಞೆ ತಪ್ಪಿಸಿ ಬೆನ್ನಿನ ಮೇಲೆ ಚಿಪ್ ಅಳವಡಿಸಿದ ಬಳಿಕ ಅವುಗಳನ್ನು ಆಗುಂಬೆ ಆಸುಪಾಸಿನ ಮೇಗರವಳ್ಳಿ ಮತ್ತು ತಲ್ಲೂರಂಗಡಿಯಲ್ಲಿ ಅರಣ್ಯಕ್ಕೆ ಬಿಡಲಾಗಿದೆ. ಮುಂದಿನ 3 ವರ್ಷದವರೆಗೆ ಈ ಚಿಪ್ ಅಳವಡಿಸಿದ ಹಾವಿನ ಚಲನವಲನ ತಿಳಿಯಬಹುದು. ತಲಾ ಇಬ್ಬರಿಂದ ಪ್ರತಿದಿನ ಬೆಳಗ್ಗೆ 7.30ರಿಂದ ಸಂಜೆ 6 ಗಂಟೆಯವರೆಗೆ ಹಾವಿನ ದಿನಚರಿಯ ಮಾಹಿತಿ ಸಂಗ್ರಹ ಮತ್ತು ಸಂಶೋಧನೆ ನಡೆಯಲಿದೆ.
ಗಣತಿಗೆ ಪಿಟ್‌ಟ್ಯಾಗ್: ಹಾವುಗಳ ಗಣತಿ ಮಾಡುವ ಸಲುವಾಗಿ ಆಗುಂಬೆ ಸುತ್ತಮುತ್ತ ಹಿಡಿದ 183 ಹಾವುಗಳಿಗೆ ಕಳೆದ ಒಂದು ವರ್ಷದಿಂದ ಆಧಾರ್ ಕಾರ್ಡ್ ಮಾದರಿಯಲ್ಲಿ ಬಾಲದ ಮೇಲ್ಮೆ„ ಭಾಗಕ್ಕೆ ಸಿರಿಂಜ್ ಮೂಲಕ ಪಿಟ್ ಟ್ಯಾಗ್ ಅಳವಡಿಸಲಾಗಿದೆ. ಪಿಟ್‌ಟ್ಯಾಗ್ ಅಳವಡಿಸಲಾದ ಹಾವಿಗೆ ಪ್ರತ್ಯೇಕ ಯೂನಿಕ್ ಐಡೆಂಟಿಟಿ ನಂಬರ್ ಇರುತ್ತದೆ. ಇದರಿಂದ ಈ ಭಾಗದಲ್ಲಿ ಎಲ್ಲೇ ಕಾಳಿಂಗ ಸರ್ಪ ಹಿಡಿದರೂ ಕೇಂದ್ರದ ತಂಡ ಬಂದು ಸ್ಕ್ಯಾನ್ ಮಾಡಿದಾಗ ಪಿಟ್ ಟ್ಯಾಗ್ ಅಳವಡಿಸಿದ್ದರೆ, ಯೂನಿಕ್ ನಂಬರ್ ತೋರಿಸುತ್ತದೆ.
ಇದರ ಹಿಂದೆ 7 ಜನರ ತಂಡ ಅಧ್ಯಯನ ನಡೆಸುತ್ತಿದೆ. ಸಾಮಾನ್ಯವಾಗಿ ಕಾಳಿಂಗಗಳು 12.5 ಅಡಿ ಉದ್ದವಿದ್ದು, 8 ರಿಂದ 9 ಕೆ.ಜಿ. ತೂಕವಿರುತ್ತವೆ. ಗರಿಷ್ಠ 16 ಕೆ.ಜಿ. ತೂಕದ ಹಾವುಗಳು ಕೂಡ ಪಿಟ್‌ಟ್ಯಾಗ್ ಮೂಲಕ ಪತ್ತೆಯಾಗಿವೆ ಎನ್ನುವುದಾಗಿ ಆಗುಂಬೆ ಮಳೆಕಾಡು ಅಧ್ಯಯನ ಕೇಂದ್ರದ ಬೇಸ್ ಮ್ಯಾನೇಜರ್ ಜೈಕುಮಾರ್ ಮಾಹಿತಿ ನೀಡುತ್ತಾರೆ.
ಪಿಟ್ ಟ್ಯಾಗ್ ಅಧ್ಯಯನದಿಂದ ಗಂಡಿಗಿಂತ ಹೆಣ್ಣು ಕಾಳಿಂಗಗಳ ಸಂಖ್ಯೆ ತುಂಬಾ ಕಡಿಮೆಯಿದೆ ಎಂದು ತಿಳಿದು ಬಂದಿದೆ. ಈಗಿನ ಪ್ರಕಾರ 100 ಗಂಡು ಹಾವಿಗೆ ಕೇವಲ 3 ಹೆಣ್ಣು ಕಾಳಿಂಗಗಳು ಮಾತ್ರ ಇವೆ. ಲಿಂಗಾನುಪಾತ ದಲ್ಲಿ ಇಷ್ಟು ವ್ಯತ್ಯಾಸಕ್ಕೆ ಕಾರಣವೇನು ಎಂಬುದನ್ನು ಚಿಪ್ ಮೂಲಕ ಅಧ್ಯಯನ ಮಾಡಲಾಗುತ್ತಿದೆ.
-ಅಜಯ್‌ಗಿರಿ, ಸಂಶೋಧನಾ ನಿರ್ದೇಶಕ, ಆಗುಂಬೆ ಮಳೆಕಾಡು ಅಧ್ಯಯನ ಕೇಂದ್ರ