Advertisement

ಗಾದೆ ಪುರಾಣ

04:58 PM Apr 03, 2019 | Hari Prasad |

1. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ
ಎಲ್ಲರನ್ನೂ ಸಮನಾಗಿ ಕಾಣಬೇಕು. ತನ್ನಂತೆಯೇ ಪರರನ್ನೂ ಬಗೆಯಬೇಕು ಎನ್ನುವುದು ಅನುಭವಿಗಳ ಸಲಹೆ. ಆದರೆ ಸಣ್ಣ ಮನುಷ್ಯರು ಎಲ್ಲದರಲ್ಲೂ ಭೇದಭಾವವನ್ನು ತೋರಿಸುತ್ತಾರೆ. ಸ್ವಾರ್ಥಪರರು ತಮಗೆ ಬೇಕಾದವರಿಗೆ ಬೇರೆ ರೀತಿ ನೀತಿ, ದೂರದವರಿಗೆ ಬೇರೆ ರೀತಿನೀತಿ ಅನುಸರಿಸುತ್ತಾರೆ. ಇದನ್ನೇ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುತ್ತದೆ ಈ ಗಾದೆ.

Advertisement

2. ಅನ್ನ ಆಗಿದೆಯೇ ಎಂದು ತಿಳಿಯಲು ಒಂದು ಅಗುಳೇ ಸಾಕು
ಒಬ್ಬನ ಯೋಗ್ಯತೆಯನ್ನು ತಿಳಿದುಕೊಳ್ಳಬೇಕಾದರೆ ಇಡೀ ಜೀವಮಾನವನ್ನೇ ಅವನೊಂದಿಗೆ ಕಳೆಯಬೇಕಾಗಿಲ್ಲ. ಅವನ ದೃಷ್ಟಿಕೋನ, ಮನೋಭಾವವನ್ನು ಪ್ರತಿಬಿಂಬಿಸುವ ಅವನ ಒಂದೇ ಒಂದು ನಡೆ, ಅವನ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಅನ್ನದ ಒಂದು ಅಗುಳನ್ನು ಹಿಚುಕಿನೋಡಿ ಇಡೀ ಪಾತ್ರೆಯ ಅನ್ನ ಬೆಂದಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಸಾಧ್ಯ.

3. ಹೊರಗೆ ಥಳುಕು, ಒಳಗೆ ಹುಳುಕು
ಸ್ನಾನ ಮಾಡದೆ, ಸುಗಂಧದ್ರವ್ಯಗಳನ್ನು ಪೂಸಿಕೊಳ್ಳುವುದು; ಕೂದಲನ್ನೇ ತೊಳೆದುಕೊಳ್ಳದೆ ಕೇಶಶೃಂಗಾರ ಮಾಡಿಕೊಳ್ಳುವುದು, ಓದುಬರಹ ಬಾರದಿದ್ದರೂ ಗ್ರಂಥಾಲಯಗಳಿಗೆ ಹೋಗುವುದು; ಯಾರೂ ಕರೆಯದಿದ್ದರೂ ಶ್ರೀಮಂತರ ಮನೆಗಳಲ್ಲಿ ಕಾಣಿಸಿಕೊಳ್ಳು­ವುದು ಇದೆಲ್ಲಾ ಹೊರಗೆ ಥಳುಕು, ಒಳಗೆ ಹುಳುಕು ಎನ್ನಿಸಿಕೊಳ್ಳು­ತ್ತದೆ. ನಿಜವಾದ ಯೋಗ್ಯತೆಯಿಲ್ಲದೆ ಕೇವಲ ತೋರಿಕೆಯಿಂದಲೇ ಬದುಕಲು ಪ್ರಯತ್ನಿಸಿದರೆ, ನಗೆಪಾಟಲಾಗುವುದು ಖಂಡಿತ.

4. ಕೋತಿ ತಾನು ಕೆಡುವುದಲ್ಲದೆ ವನವನ್ನೆಲ್ಲಾ ಕೆಡಿಸಿತು
ಇತರ ಪ್ರಾಣಿಗಳಂತೆಯೇ ನಾವೂ ಗುಂಪುಗಳಲ್ಲಿ ಬದುಕುತ್ತೇವೆ. ಕೂಡಿ ಬಾಳುವುದೇ ಸಹವಾಸ. ಸರಿಯಾದ ಸಹವಾಸದಿಂದ ಅಭಿವೃದ್ಧಿ, ಕೆಟ್ಟ ಸಹವಾಸದಿಂದ ನಾಶ. ಆದ್ದರಿಂದಲೇ ಸ್ನೇಹಿತರನ್ನು, ಮಾರ್ಗದರ್ಶಿಗಳನ್ನು ಆರಿಸಿಕೊಳ್ಳುವಾಗ ಎಚ್ಚರದಿಂದಿರಬೇಕು. ದುಷ್ಟರು, ಅಶಿಕ್ಷಿತರು ಕಡಿಮೆ ಸಂಖ್ಯೆಯಲ್ಲಿದ್ದರೂ, ಬಹಳ ಜನರನ್ನು ಹಾಳು ಮಾಡುತ್ತಾರೆ.

ಸಂಗ್ರಹ- ವಿವರಣೆ: ಸಂಪಟೂರು ವಿಶ್ವನಾಥ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next