Advertisement

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

11:16 AM Mar 29, 2024 | Team Udayavani |

ಮಂಗಳೂರು/ಉಡುಪಿ/ ಬೆಳ್ತಂಗಡಿ: ಕ್ರೈಸ್ತರು ಮಾ. 28ರಂದು ಪವಿತ್ರ ಗುರುವಾರ ಆಚರಿಸಿ ಯೇಸು ಕ್ರಿಸ್ತರ ಕೊನೆಯ ಭೋಜನದ ದಿನವನ್ನು ಸ್ಮರಿಸಿದರು. ಚರ್ಚ್‌ಗಳಲ್ಲಿ ಮತ್ತು ಇತರ ಕ್ರೈಸ್ತ ಪ್ರಾರ್ಥನ ಮಂದಿರಗಳಲ್ಲಿ ಗುರುವಾರ ಸಂಜೆ ಬಲಿಪೂಜೆ ಮತ್ತು ವಿಶೇಷ ಪ್ರಾರ್ಥನೆ ನಡೆದವು.

Advertisement

ಮಂಗಳೂರು ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ಬೆಳ್ಳಾರೆ ಹೋಲಿ ಕ್ರಾಸ್‌ ಚರ್ಚ್‌ನಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿದರು. ಏಸು ಕ್ರಿಸ್ತರು ತನ್ನ ಶಿಷ್ಯರ ಪಾದ ತೊಳೆದ ಆಚರಣೆಯ ಸ್ಮರಣಾರ್ಥವಾಗಿ ಬಿಷಪ್‌ ಅವರು 12 ಮಂದಿ ಕ್ರಿಸ್ತ ಅನುಯಾಯಿಗಳ ಪಾದ ತೊಳೆದರು.

ಬಳಿಕ ವಿಶೇಷ ಪ್ರವಚನ ನೀಡಿ, ಯೇಸು ತನ್ನ ಶಿಷ್ಯರ ಪಾದ ತೊಳೆಯುವ ಮೂಲಕ ಸಾಮಾಜಿಕ ಪ್ರೀತಿಯ ಸಂದೇಶ ನೀಡಿದರು. ತನ್ನನ್ನು ಪ್ರೀತಿಸಿದ, ವಿರೋಧಿಸಿದವರ ಪಾದ ತೊಳೆಯುವ ಮೂಲಕ ಕ್ಷಮಾದಾನದ ಸಂದೇಶ ಸಾರಿದರು. ಎಲ್ಲರನ್ನು ತನ್ನ ಭೋಜನದಲ್ಲಿ ಭಾಗವಹಿಸುವ ಮೂಲಕ ದೇವರು ಮೆಚ್ಚುವ ಜೀವನ ನಡೆಸುವಂತೆ ಕರೆ ನೀಡಿದರು. ‌

ಅವರ ಭೋಜನದಲ್ಲಿ ಸಹಭಾಗಿಗಳಾಗುವವರಿಗೆ ಕ್ರಿಸ್ತರ ಆಶೀರ್ವಾದ ಸದಾ ಇರಲಿದೆ. ಕ್ರಿಸ್ತರ ಕೊನೆ ಭೋಜನವು ಕ್ರೆçಸ್ತರ ಜೀವನಕ್ಕೆ ಹೊಸ ಅರ್ಥ ನೀಡಲಿದೆ ಎಂದರು.

ಬೆಳ್ಳಾರೆಯ ಹೋಲಿ ಕ್ರಾಸ್‌ ಚರ್ಚ್‌ನ ಧರ್ಮಗುರು ವಂ| ಆ್ಯಂಟನಿ ಪ್ರಕಾಶ್‌ ಮೊಂತೇರೊ ಉಪಸ್ಥಿತರಿದ್ದರು.

Advertisement

ಇದೇ ರೀತಿ ಎಲ್ಲ ಚರ್ಚ್‌ಗಳಲ್ಲಿ ಹಾಗೂ ಸಿಎಸ್‌ಐ, ಪ್ರೊಟೆಸ್ಟೆಂಟ್‌ ಸಭೆಯ ಚರ್ಚ್‌ಗಳಲ್ಲಿ ಸಂಜೆ ಹೊತ್ತು ಪವಿತ್ರ ಗುರುವಾರದ ಆಚರಣೆಯಲ್ಲಿ ಯೇಸುವಿನ ಕೊನೆಯ ಭೋಜನದ ವಿಧಿವಿಧಾನ ನಡೆಯಿತು.

ಇಂದು “ಗುಡ್‌ ಫ್ರೈಡೇ

ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಪ್ರಯುಕ್ತ ಮಾ. 29ರಂದು “ಗುಡ್‌ ಫ್ರೈಡೆ’ ಆಚರಿಸಲಾಗುತ್ತದೆ. ಚರ್ಚ್‌ ಗಳಲ್ಲಿ ಶಿಲುಬೆ ಹಾದಿ, ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆ ನಡೆಸಲಾಗುತ್ತದೆ. ಈ ದಿನ ಕ್ರೈಸ್ತರು ಉಪವಾಸ ವ್ರತ ಆಚರಿಸುತ್ತಾರೆ. ಇಂದು ಪವಿತ್ರ ಸಭೆಯಲ್ಲಿ ಬಲಿಪೂಜೆಗಳು ನಡೆಯುತ್ತಿಲ್ಲ.ಮಂಗಳೂರಿನ ಬಿಷಪ್‌ ಅವರು ಬಿಷಪ್ಸ್‌ ಹೌಸ್‌ನ ಚಾಪೆಲ್‌ನಲ್ಲಿ ಪ್ರಾರ್ಥನೆ ಮತ್ತು ಪ್ರವಚನ ನೀಡಲಿದ್ದಾರೆ. ಮಾ. 29ರಂದು ಪವಿತ್ರ ಸಭೆಯಲ್ಲಿ ಬಲಿಪೂಜೆಗಳು ಇರುವುದಿಲ್ಲ. ಮಾ. 30ರಂದು ಈಸ್ಟರ್‌ ಜಾಗರಣೆಯ ಬಲಿಪೂಜೆಯನ್ನು ನಗರದ ರೊಸಾರಿಯೋ ಕೆಥೆಡ್ರಲ್‌ನಲ್ಲಿ ನಡೆಸಿಕೊಡಲಿದ್ದಾರೆ.

ಉಡುಪಿಯಲ್ಲಿ ಆಚರಣೆ

ಉಡುಪಿ: ಉಡುಪಿ ಧರ್ಮಪ್ರಾಂತದ ಪ್ರಧಾನ ಧಾರ್ಮಿಕ ಕಾರ್ಯಕ್ರಮ ಕಲ್ಯಾಣಪುರ ಮಿಲಾಗ್ರಿಸ್‌ ಕೆಥೆಡ್ರಲ್‌ ನಲ್ಲಿ ಧರ್ಮಾಧ್ಯಕ್ಷ ರ| ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ ನೇತೃತ್ವದಲ್ಲಿ ನಡೆಯಿತು. ಧರ್ಮಾಧ್ಯಕ್ಷರು 12 ಮಂದಿ ಪ್ರೇಷಿತರ (ವಿಶ್ವಾಸಿಗಳು) ಪಾದಗಳನ್ನು ತೊಳೆಯುವ ಮೂಲಕ ಏಸುಕ್ರಿಸ್ತರು ಸಾರಿದ ದೀನತೆ ಹಾಗೂ ಪ್ರೀತಿಯ ಸಂದೇಶ ನೀಡಿ, ಯೇಸು ಸ್ವಾಮಿ ಲೋಕಕಲ್ಯಾಣಕ್ಕಾಗಿ ತನ್ನನ್ನು ತಾನೇ ಈ ಲೋಕಕ್ಕೆ ಅರ್ಪಿಸಿದರು.

ಅಂತೆಯೇ ನಾವು ನಮ್ಮ ಜೀವನವನ್ನು ಪರರ ಒಳಿತಿಗಾಗಿ ಜೀವಿಸುವ ಮೂಲಕ ಮಾದರಿಯಾಗಬೇಕು ಎಂದರು. ಕೆಥೆಡ್ರಲ್‌ನ ಪ್ರಧಾನ ಧರ್ಮಗುರು ವಂ| ವಲೇರಿಯನ್‌ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ| ಜೋಯ್‌ ಅಂದ್ರಾದೆ, ನಿವೃತ್ತ ಧರ್ಮಗುರು ವಂ| ಲಾರೆನ್ಸ್‌ ರಾಡ್ರಿಗಸ್‌ ಉಪಸ್ಥಿತರಿದ್ದರು.

ಬೆಳ್ತಂಗಡಿಯಲ್ಲಿ ಆಚರಣೆ

ಬೆಳ್ತಂಗಡಿ: ಯೇಸುವಿನ ಪ್ರೀತಿಯ ಸ್ಮರಣೆಯ ಅನುಷ್ಠಾನವಾದ ಪಾಸ್ಕ ಹಬ್ಬದ ಆಚರಣೆಯ ಪ್ರಯುಕ್ತ ಬೆಳ್ತಂಗಡಿ ಸಂತ ಲಾರೆನ್ಸ್‌ರ ಪ್ರಧಾನ ದೇವಾಲಯದಲ್ಲಿ ಧರ್ಮಾಧ್ಯಕ್ಷರಾದ ರೈ| ರೆ| ಡಾ| ಲಾರೆನ್ಸ್‌ ಮುಕ್ಕುಯಿ ಅವರು 12 ಮಂದಿ ವಿಶ್ವಾಸಿಗಳ ಪಾದಗಳನ್ನು ತೊಳೆಯುವ ಮೂಲಕ ಹಬ್ಬಕ್ಕೆ ವಿಶೇಷ ಮಹತ್ವ ನೀಡಿದರು. ಬಳಿಕ ಬಲಿಪೂಜೆ ನೆರವೇರಿಸಿ ಸಂದೇಶ ನೀಡಿದರು. ಮಹಾದೇವಾಲಯದ ವಿಕಾರ್‌ ವಂ| ಥಾಮಸ್‌, ವಂ| ಕುರಿಯಾಕೋಸ್‌, ವಂ| ಟೋಮಿ, ಹೆಚ್ಚಿನ ಸಂಖ್ಯೆಯಲ್ಲಿ ಧರ್ಮ ಭಗಿನಿಯರು ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next