Advertisement

ಚೀನ ಅಧ್ಯಕ್ಷರ ಯುದ್ಧ ವ್ಯಾಮೋಹ ಬಯಲು!

12:07 PM Nov 03, 2015 | mahesh |

ಬೀಜಿಂಗ್‌: ಎರಡು ನಾಲಗೆಯ ಚೀನವು ಮತ್ತೆ ಯುದ್ದೋನ್ಮಾದದ ವಿಷ ಕಾರಿದೆ. ಲಡಾಖ್‌ ಗಡಿಯಲ್ಲಿ ಶಾಂತಿ ಸ್ಥಾಪನೆಯ ಮಾತುಗಳನ್ನಾಡಿದ ಬೆನ್ನಿಗೇ “ಯುದ್ಧಕ್ಕೆ ಸಿದ್ಧ ರಾಗಿರಿ’ ಎಂದು ಸೇನೆಗೆ ಆದೇಶಿಸುವ ಮೂಲಕ ಬೀಜಿಂಗ್‌ “ನಂಬಿಕೆದ್ರೋಹಿ’ ಪದಕ್ಕೆ ಅನ್ವರ್ಥವಾಗಿ ವರ್ತಿಸಿದೆ.

Advertisement

ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮಿಲಿಟರಿಯನ್ನು ಛೂ ಬಿಡುವ ಕೆಲಸ ಮಾಡಿದ್ದಾರೆ. ಗ್ವಾಂಗ್ಡಾಗ್‌ನ ಸೇನಾ ನೆಲೆಗೆ ಮಂಗಳವಾರ ಭೇಟಿ ನೀಡಿದ್ದ ಅವರು, ನಿಮ್ಮ ಎಲ್ಲ ಬುದ್ಧಿ ಮತ್ತು ಶಕ್ತಿಯನ್ನು ಸಮರಕ್ಕಾಗಿ ಸಿದ್ಧಪಡಿಸಿಕೊಳ್ಳಿ. ಅಷ್ಟೇ ಜಾಗ್ರತೆಯನ್ನೂ ಕಾಪಾಡಿಕೊಳ್ಳಿ ಎಂದು ಪಿಎಲ್‌ಎ ತುಕಡಿಗಳನ್ನು ಉದ್ದೇಶಿಸಿ ಹೇಳಿದ್ದಾರೆ.

ಸೋಮವಾರವಷ್ಟೇ ಚುಶುಲ್‌ ಗಡಿಪೋಸ್ಟ್‌ ನಲ್ಲಿ ಎರಡೂ ದೇಶಗಳ ಕಾರ್ಪ್ಸ್ ಕಮಾಂಡರ್‌ಗಳು 7ನೇ ಸುತ್ತಿನ ಮಾತುಕತೆ ಮುಗಿಸಿದ್ದಾರೆ. ಶಾಂತಿ- ಸುವ್ಯವಸ್ಥೆಗೆ ಎರಡೂ ದೇಶಗಳು ಬದ್ಧ ಎಂದು ಮಿಲಿಟರಿ ಸಭೆ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದರೂ ಮರುದಿನವೇ ಬೀಜಿಂಗ್‌ ಇದಕ್ಕೆ ತದ್ವಿರುದ್ಧವಾಗಿ ಗೋಸುಂಬೆತನ ಪ್ರದರ್ಶಿಸಿದೆ.

ಯಾರ ಮೇಲೆ ಯುದ್ಧ?
ಇದೇ ಯಕ್ಷ ಪ್ರಶ್ನೆ. ಕ್ಸಿ ಜಿನ್‌ಪಿಂಗ್‌ ಲಡಾಖ್‌ ಬಿಕ್ಕಟ್ಟು ಉದ್ದೇಶಿಸಿ ಹೇಳಿದ್ದಾರೆಯೇ ಅಥವಾ ಚುನಾವಣೆ ಹೊಸ್ತಿಲಿನಲ್ಲಿರುವ ಅಮೆರಿಕಕ್ಕೆ ಚುರುಕು ಮುಟ್ಟಿಸಲು ಹೊರಟಿದ್ದಾರೆಯೇ, ಇತ್ತ ಜಪಾನ್‌- ಅತ್ತ ಆಸ್ಟ್ರೇಲಿಯಾದ ವಿರುದ್ಧ ಗುಟುರು ಹಾಕಿದ್ದಾರೆಯೇ ಎಂಬುದು ಸ್ಪಷ್ಟ ವಾಗಿಲ್ಲ. ತೈವಾನ್‌ ವಿರುದ್ಧ ಪೌರುಷ ತೋರಲು ಮುಂದಾಗಿದ್ದಾರೆಯೇ ಎಂಬುದೂ ತಿಳಿದು ಬಂದಿಲ್ಲ. ಆದರೆ ಚೀನವು ಯಾರ ತಂಟೆಗೆ ಹೋದರೂ ಮೇಲಿನ ಎಲ್ಲ ರಾಷ್ಟ್ರಗಳು ಸಮರ್ಥ ವಾಗಿ ಪ್ರತ್ಯಾಘಾತ ನೀಡಲು ಸಿದ್ಧವಾಗಿವೆ ಎನ್ನುತ್ತಾರೆ ರಕ್ಷಣ ವಿಶ್ಲೇಷಕರು.

ಛೂ ಬಿಟ್ಟ ಕ್ಸಿ
ಮಿಲಿಟರಿ ನೆಲೆಗಳ ಅಭಿವೃದ್ಧಿ- ರೂಪಾಂತರ ವೇಗಗೊಳಿಸಿ, ಯುದ್ಧ ಸಾಮರ್ಥ್ಯ ಹೆಚ್ಚಿಸುವ ಕೆಲಸ ಮಾಡಿ, ಗಡಿಯುದ್ದಕ್ಕೂ ಬಹುಸಾಮರ್ಥ್ಯದ ಮತ್ತು ಕ್ಷಿಪ್ರ ಪ್ರತಿಕ್ರಿಯೆಗೆ ಪೂರಕವಾಗಿ ಸೇನೆ ಗಟ್ಟಿಗೊಳಿಸಿ ಎಂದು ಕ್ಸಿ ಕರೆಕೊಟ್ಟಿದ್ದಾರೆ. ರಾಷ್ಟ್ರದ ವಿಚಾರ ಬಂದಾಗ ಸಂಪೂರ್ಣ ನಿಷ್ಠರಾಗಿರಿ, ಸಂಪೂರ್ಣ ಪರಿಶುದ್ಧರಾಗಿರಿ, ಸಂಪೂರ್ಣ ವಿಶ್ವಾಸಾರ್ಹತೆ ಕಾಪಾಡಿಕೊಳ್ಳಿ ಎನ್ನುವ ಮೂಲಕ ಸೇನೆಗೆ ರಾಷ್ಟ್ರೀಯತೆಯ ಅಮಲು ಕುಡಿಸಿದ್ದಾರೆ.

Advertisement

ಚೀನಕ್ಕೆ ತಿರುಗೇಟು
ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಚೀನದ ಕ್ಯಾತೆಯನ್ನು ಭಾರತ ತಿರಸ್ಕರಿಸಿದೆ. ಸೋಮವಾರವಷ್ಟೇ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅಲ್ಲಿ 44 ಸೇತುವೆಗಳನ್ನು ಉದ್ಘಾಟಿಸಿದ್ದರು. ಈ ಎಲ್ಲ ಸೇತುವೆಗಳು ಭಾರತದ ಸೇನೆ ಗಡಿಯತ್ತ ಮುನ್ನುಗ್ಗಲು ಅನುಕೂಲ ಮಾಡಿಕೊಡುವಂತಿವೆ. ಇದರಿಂದ ಬೆದರಿದ ಚೀನವು ಆಕ್ಷೇಪ ವ್ಯಕ್ತಪಡಿಸಿತ್ತಲ್ಲದೆ, ಭಾರತದ ಈ ಕ್ರಮದಿಂದ ಘರ್ಷಣೆಯಾಗುತ್ತಿದೆ ಎಂದಿತ್ತು. ಈ ಬಗ್ಗೆ ತಿರುಗೇಟು ನೀಡಿರುವ ಭಾರತವು ಗಡಿಯಲ್ಲಿ ನಾವಷ್ಟೇ ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತಿಲ್ಲ. ಈಗಾಗಲೇ ಚೀನದ ಸೇನೆ ಅತ್ತ ಕಡೆ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮುಗಿಸಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next