ಹೊಸದಿಲ್ಲಿ: ಇತ್ತೀಚೆಗಷ್ಟೇ ಸಿಕ್ಕಿಂನಲ್ಲಿ ಭಾರತೀಯ ಯೋಧರ ಜತೆಗೆ ಕೈ ಮಿಲಾಯಿಸಿದ್ದ ಚೀನದ ಪೀಪಲ್ಸ್ ಲಿಬರೇಷನ್ ಆರ್ಮಿ, ಅದೇ ದಿನ ಲಡಾಖ್‌ನಲ್ಲಿರುವ ಎರಡೂ ದೇಶಗಳ ನೈಜ ಗಡಿ ರೇಖೆ(ಎಲ್‌ಎಸಿ)ಗೆ ತೀರಾ ಸಮೀಪದಲ್ಲಿ ತನ್ನ ಯುದ್ಧ ವಿಮಾನಗಳ ಹಾರಾಟ ನಡೆಸಿ ಆತಂಕಕಾರಿ ವಾತಾವರಣ ಸೃಷ್ಟಿ ಮಾಡಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಮೇ 5ರಂದು ಚೀನ ಈ ಚಟುವಟಿಕೆ ನಡೆಸಿದ್ದು, ಇದನ್ನು ಗ್ರಹಿಸಿದ ಭಾರತೀಯ ವಾಯುಪಡೆ, ಲೇಹ್‌ನಲ್ಲಿರುವ ತನ್ನ ವಾಯು ನೆಲೆಯಲ್ಲಿದ್ದ ಎರಡು ಸುಖೋಯ್ ಯುದ್ಧ ವಿಮಾನಗಳನ್ನು ಎಲ್‌ಎಸಿ ಬಳಿಯ ವಾಯುಗಡಿಯ ಸಮೀಪಕ್ಕೆ ಕಳುಹಿಸಿ ಗಸ್ತಿಗೆ ನಿಯೋಜಿಸಿದೆ. ಸ್ವಲ್ಪ ಹೊತ್ತಿನಲ್ಲಿಯೇ ಉದ್ವಿಗ್ನ ಪರಿಸ್ಥಿತಿ ನಿವಾರಣೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಐಎಎಫ್ ನಿರಾಕರಣೆ: ಈ ನಡುವೆ, ಚೀನದ ಯುದ್ಧ ವಿಮಾನಗಳು ಭಾರತದ ಗಡಿ ದಾಟಿ ಬಂದಿದ್ದವು ಎಂಬ ವದಂತಿಗಳನ್ನು ಭಾರತೀಯ ವಾಯುಪಡೆ ನಿರಾಕರಿಸಿದೆ. ಅಲ್ಲದೆ, “ಮೇ 5ರ ಮಧ್ಯಾಹ್ನ ಎಲ್‌ಎಸಿಯಲ್ಲಿ ಭಾರತದ ಎರಡು ಸುಖೋಯ್ ವಿಮಾನಗಳು ಹಾರಾಟ ನಡೆಸಿದ್ದು, ಎಂದಿನ ಅಭ್ಯಾಸದ ಭಾಗ ವಾಗಿತ್ತು’ ಎಂದು ಹೇಳಿದೆ.
ಪರಿಸ್ಥಿತಿ ಒಪ್ಪಿಕೊಂಡ ಸರಕಾರ?: ಎಎನ್‌ಐ ಸುದ್ದಿಸಂಸ್ಥೆ, ವಾಯುಗಡಿಯ ಬಳಿ ಚೀನ ಯುದ್ಧ ವಿಮಾನಗಳು ಹಾರಾಟ ನಡೆಸಿದ್ದನ್ನು ಸರಕಾರಿ ಮೂಲಗಳು ಸ್ಪಷ್ಟಪಡಿಸಿರುವುದಾಗಿ ತನ್ನ ವರದಿಯಲ್ಲಿ ತಿಳಿಸಿದೆ. ಚೀನದ ಯುದ್ಧ ವಿಮಾನಗಳು ಎಲ್‌ಎಸಿಗೆ ತೀರಾ ಸಮೀಪದಲ್ಲಿ ಹಾರಾಟ ನಡೆಸಿದ್ದವು. ಇದಕ್ಕೆ ಪ್ರತಿಯಾಗಿ ಭಾರತೀಯ ಯುದ್ಧ ವಿಮಾನಗಳನ್ನು ಆ ಪ್ರಾಂತ್ಯದಲ್ಲಿ ಗಸ್ತು ತಿರುಗಲು ನಿಯೋಜಿಸಲಾಯಿತು. ಆದರೆ, ಚೀನದ ಯುದ್ಧ ವಿಮಾನಗಳು ಭಾರತದ ಗಡಿ ದಾಟಿಲ್ಲ ಎಂದು ಹೆಸರನ್ನೇಳಲು ಇಚ್ಛಿಸದ ಸರಕಾರಿ ಮೂಲಗಳು ತಿಳಿಸಿವೆ ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ.
ಪಾಕ್-ಚೀನ ಜೊತೆಯಾಟ?: ಭಾರತದ ಗಡಿಯ ಪಶ್ಚಿಮಕ್ಕಿರುವ ಪಾಕಿಸ್ಥಾನವು, ಗಡಿಯಲ್ಲಿ ಇತ್ತೀಚೆಗೆ ಎಫ್-16ಎಸ್ ಹಾಗೂ ಜೆಎಫ್-17 ಯುದ್ಧ ವಿಮಾನಗಳ ಗಸ್ತನ್ನು ಇತ್ತೀಚೆಗೆ ಹೆಚ್ಚು ಮಾಡಿದ್ದು, ಅದರ ಬೆನ್ನಲ್ಲೇ ಸಿಕ್ಕಿಂನಲ್ಲಿ ಚೀನ ಸೈನಿಕರು ಭಾರತೀಯ ಸೈನಿಕರ ಮೇಲೆ ಹಲ್ಲೆ ಮಾಡಿದ್ದಾರೆ. ಅದಾದ ಅನಂತರ, ಚೀನದ ಯುದ್ಧ ವಿಮಾನಗಳು ಎಲ್‌ಎಸಿ ಬಳಿ ಜಮಾವಣೆಗೊಂಡ ಘಟನೆ ಜರುಗಿದೆ ಎಂದು ಹೇಳಲಾಗಿದೆ.