ಚಿಂಚೋಳಿ: ಕೋವಿಡ್-19 ಲಾಕ್‌ಡೌನ್ ಸಮಸ್ಯೆ ಒಂದೆಡೆಯಾದರೆ ಬಿಸಿಲಿನ ತಾಪದಿಂದಾಗಿ ಬೋರವೆಲ್ ಮತ್ತು ಬಾವಿಗಳಲ್ಲಿನ ಅಂತರ್ಜಲ ದಿನೇ-ದಿನೇ ಕುಸಿಯುತ್ತಿರುವುದರಿಂದ ತಾಲೂಕಿನ ಅನೇಕ ಗ್ರಾಮಗಳಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
ತಾಲೂಕಿನಲ್ಲಿಯೇ ಅತಿ ಹಿಂದುಳಿದ ಪ್ರದೇಶವಾಗಿರುವ ಸೇರಿ ಬಡಾ ತಾಂಡಾ, ಪಾಲತ್ಯಾ ತಾಂಡಾ, ಯಲ್ಮಡಗಿ ಪುರ್ನವಸತಿ ಕೇಂದ್ರ-2, ಹೂವಿನಹಳ್ಳಿ, ನಾಗಾಇದಲಾಯಿ, ಫತ್ತು ನಾಯಕ ತಾಂಡಾ, ಮೋನು ನಾಯಕ ತಾಂಡಾ, ಬೆನಕೆಪಳ್ಳಿ, ರಾಮನಗರ ತಾಂಡಾ ಕೊರವಿ, ಚಿಂದಾನೂರ ತಾಂಡಾಗಳಲ್ಲಿ ಬೇಸಿಗೆ ದಿನಗಳಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಚಂದನಕೇರಾ, ಐನಾಪುರ, ಬಸಂತಪುರ, ಗಡಿಲಿಂಗದಳ್ಳಿ, ಚೆಂಗಟಾ, ಚಿಮ್ಮನಚೋಡ, ಹಸರಗುಂಡಗಿ, ಸಾಲೇಬೀರನಳ್ಳಿ ಸುತ್ತಲಿನ ತಾಂಡಾಗಳಲ್ಲಿ ಕುಡಿಯುವ ನೀರಿನ ಸಮಸ್ಯೆಹೆಚ್ಚಿದೆ.
ಬತ್ತಿದ ಕೊಳವೆ ಬಾವಿಗಳು: ನಾಲ್ಕು ನಾಗಾಇದಲಾಯಿ, ಎರಡು ಫತ್ತು ನಾಯಕ ತಾಂಡಾ, ನಾಲ್ಕು ಮೋನುನಾಯಕ ತಾಂಡಾ, ಎಂಟು ಬೆನಕೆಪಳ್ಳಿ, ಒಂದು ರಾಮನಗರ ತಾಂಡಾ ಕೊರವಿ, ಎರಡು ಸೇರಿ ಬಡಾ ತಾಂಡಾ, ಒಂದು ಪಾಲತ್ಯಾ ತಾಂಡಾ, ಒಂದು ಯಲ್ಮಡಗಿ ಪುರ್ನವಸತಿ ಕೇಂದ್ರ, ಒಂದು ಹೂವಿನ ಹಳ್ಳಿ ಗ್ರಾಮಗಳಲ್ಲಿ ಕೊಳವೆಬಾವಿಗಳು ಕೆಟ್ಟುಹೋಗಿವೆ.
ಬತ್ತಿದ ತೆರೆದ ಬಾವಿ: ರಾಮನಗರ ಕೊರವಿ ತಾಂಡಾದಲ್ಲಿ ಒಂದು, ಬೆನಕೆಪಳ್ಳಿ ಗ್ರಾಮದಲ್ಲಿ ಒಂದು ತೆರೆದ ಬಾವಿಗಳು ಸಂಪೂರ್ಣ ಬತ್ತಿವೆ. ಇದರಿಂದ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಅಸಮಾಧಾನ: ಒಂದೆಡೆ ಕೋವಿಡ್ ಲಾಕ್ ಡೌನ್ ಇನ್ನೊಂದೆಡೆ ಅನೇಕ ಹಳ್ಳಿಯಲ್ಲಿ ಜನರು, ದನಕರುಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಆದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಸಿಪಿಐ (ಎಂ) ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಎಂಪಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕಿನಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಗ್ರಾಮ ಮತ್ತು ತಾಂಡಾಗಳಿಗೆ ಪ್ರತಿನಿತ್ಯ ನಾಲ್ಕೈದು ಟ್ರಿಪ್ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಯಾವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಎಂದು ಜನರು ತಿಳಿಸಿದರೆ ತಕ್ಷಣ ಸ್ಪಂದಿಸಲಾಗುತ್ತದೆ.
ಬಸವರಾಜ ನೇಕಾರ, ಎಇಇ,
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ