Advertisement

ಚಿಂಚೋಳಿ ಉಪ ಚುನಾವಣೆ: ಇವಿಎಂ ಹಂಚಿಕೆಗೆ ರ್‍ಯಾಂಡಮೈಸೇಶನ್‌

05:20 PM May 09, 2019 | Naveen |

ಕಲಬುರಗಿ: ಮೇ 19ರಂದು ನಡೆಯಲಿರುವ 42-ಚಿಂಚೋಳಿ ಮೀಸಲು (ಎಸ್‌ಸಿ) ವಿಧಾನಸಭೆ ಉಪ ಚುನಾವಣೆಗೆ ಸಿದ್ಧತೆ ಭರದಿಂದ ಸಾಗಿದ್ದು, ಬುಧವಾರ ಜಿಲ್ಲಾ ಚುನಾವಣಾಧಿಕಾರಿಗಳಾದ ಆರ್‌. ವೆಂಕಟೇಶಕುಮಾರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇವಿಎಂ ಹಂಚಿಕೆ ಹಾಗೂ ಸಿಬ್ಬಂದಿ ನಿಯೋಜನೆ ಕುರಿತಂತೆ ರ್‍ಯಾಂಡಮೈಸೇಶನ್‌ (ಯಾದೃಚ್ಛೀಕರಣ) ನಡೆಸಲಾಯಿತು.

Advertisement

42-ಚಿಂಚೋಳಿ ಮೀಸಲು (ಎಸ್‌.ಸಿ.) ವಿಧಾನಸಭೆ ಉಪ ಚುನಾವಣೆಗೆ ನೇಮಕವಾಗಿರುವ ಸಾಮಾನ್ಯ ವೀಕ್ಷಕ ಬಿ. ರಾಮರಾವ್‌ ಹಾಗೂ ಕಣದಲ್ಲಿರುವ ಅಭ್ಯರ್ಥಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್ವರ್‌ ನಿಯೋಜನೆ ಕುರಿತು ಮೊದಲ ಹಂತದ ರ್‍ಯಾಂಡಮೈಸೇಶನ್‌ ಹಾಗೂ ಮತಗಟ್ಟೆಗಳಿಗೆ ಚುನಾವಣಾ ಸಿಬ್ಬಂದಿ, ಇವಿಎಂಗಳ ಹಂಚಿಕೆ ಕುರಿತು 2ನೇ ಹಂತದ ರ್‍ಯಾಂಡಮೈಸೇಶನ್‌ ನಡೆಸಲಾಯಿತು.

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಒಟ್ಟು 241 ಮತಕೇಂದ್ರಗಳ ಪೈಕಿ, 60 ಸಂದಿಗ್ದ (ಅತಿ ಸೂಕ್ಷ್ಮ) ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಕೇಂದ್ರ ಪ್ಯಾರಾ ಮಿಲಿಟರಿ ಪಡೆ ನಿಯೋಜಿಸಲಾಗುತ್ತಿದೆ. ಈ ಪೈಕಿ 25 ಮತಕೇಂದ್ರಗಳಲ್ಲಿ ವೆಬ್‌ ಕ್ಯಾಮೆರಾ ಅಳವಡಿಸಲಾಗಿದೆ. ಉಳಿದ 35 ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್ವರ್‌ ನೇಮಿಸುವ ರ್‍ಯಾಂಡಮೈಸೇಶನ್‌ ಪ್ರಕ್ರಿಯೆ ಕೈಗೊಳ್ಳಲಾಯಿತು.

ಚಿಂಚೋಳಿ ವಿಧಾನಸಭೆ ಉಪ ಚುನಾವಣೆ ಚುನಾವಣಾಧಿಕಾರಿ ಸೋಮಶೇಖರ ಎಸ್‌.ಜಿ., ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ, ವೆಬ್‌ ಕ್ಯಾಸ್ಟಿಂಗ್‌ ಮತ್ತು ಮೈಕ್ರೋ ಅಬ್ಸರ್ವರ್‌ ನೋಡಲ್ ಅಧಿಕಾರಿ ಕೆ. ರಾಮೇಶ್ವರಪ್ಪ, ಎನ್‌ಐಸಿ ಕೇಂದ್ರದ ಅಧಿಕಾರಿ ಸುಧೀಂದ್ರ ಅವಧಾನಿ ಇದ್ದರು.

ಸಿಬ್ಬಂದಿ ವಿರುದ್ಧ ಕ್ರಮ
ಕಲಬುರಗಿ ಲೋಕಸಭೆ ಚುನಾವಣೆ ಕರ್ತವ್ಯಕ್ಕೆ ಗೈರು ಹಾಜರಾದ ಸಿಬ್ಬಂದಿ ವಿರುದ್ಧ ಕಾರಣ ಕೇಳಿ ನೋಟಿಸ್‌ ನೀಡಲಾಗಿತ್ತು. ಇದೀಗ ಕರ್ತವ್ಯ ಲೋಪ ಎಸಗಿರುವಂತ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಚಿಂಚೋಳಿ ವಿಧಾನಸಭೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಮೇ 3ರಂದು ಕರೆದಿದ್ದ ತರಬೇತಿಗೆ ಗೈರು ಹಾಜರಾದ‌ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್‌ ನೀಡುವಂತೆ ಸೂಚಿಸಲಾಗಿದೆ.
ಆರ್‌. ವೆಂಕಟೇಶಕುಮಾರ, ಜಿಲ್ಲಾಧಿಕಾರಿ
Advertisement

Udayavani is now on Telegram. Click here to join our channel and stay updated with the latest news.

Next