ವಾಷಿಂಗ್ಟನ್: ಜಾಗತಿಕ ಶಕ್ತಿಕೇಂದ್ರ ಎನಿಸಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿರುವ ಚೀನ, ಕಾಂಬೋಡಿಯಾದಲ್ಲಿ ಪ್ರಬಲ ನೌಕಾಪಡೆಯೊಂದನ್ನು ಬೆಳೆಸುತ್ತಿದೆಯೇ? ಹೌದು ಎಂದು ಅಮೆರಿಕದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
2019ರಲ್ಲೇ ಈ ಬಗ್ಗೆ ಅದು ಮಾಡಿದ್ದ ವರದಿಯೊಂದರಲ್ಲಿ, ಚೀನ ರಹಸ್ಯವಾಗಿ ಕೆಲವು ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದಿತ್ತು. ಈಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ವರದಿ ಮಾಡಿದೆ.
ಪತ್ರಿಕೆಯ ಪ್ರಕಾರ, ಇಂಡೋ-ಪೆಸಿಫಿಕ್ ವಲಯ ಚೀನಕ್ಕೆ ಅತ್ಯಂತ ಮಹತ್ವದ ಜಾಗ. ಅಲ್ಲಿ ನಿಯಂತ್ರಣ ಸಾಧಿಸುವುದರಿಂದ ಅಮೆರಿಕದ ಮೇಲೆ ನಿಯಂತ್ರಣ ಸಾಧಿಸಬಹುದು. ಅಮೆರಿಕದ ಸೇನಾ ಚಟುವಟಿಕೆಗಳ ಮೇಲೆ ನಿಗಾ ಇಡಬಹುದು.
ಹೀಗಾಗಿ ಅದು ಕಾಂಬೋಡಿಯದ ರೀಮ್ ನೌಕಾನೆಲೆಯಲ್ಲಿ ತನ್ನ ಪಡೆಯನ್ನು ಸಜ್ಜು ಮಾಡುತ್ತಿದೆ. ಜೊತೆಗೆ ಬೃಹತ್ ನೌಕೆಗಳನ್ನು ಜಮಾ ಮಾಡುತ್ತಿದೆ ಎಂದು ಹೇಳಲಾಗಿದೆ.
ಒಟ್ಟಾರೆಯಾಗಿ ಚೀನ ಹೊರದೇಶಗಳಲ್ಲಿ ಎರಡನೇ ಮತ್ತು ವ್ಯೂಹಾತ್ಮಕ ದೃಷ್ಟಿಯಿಂದ ಮೊದಲನೇ ಸೇನಾನೆಲೆಯನ್ನು ಕಾಂಬೋಡಿಯದಲ್ಲಿ ಸಜ್ಜು ಮಾಡುತ್ತಿದೆ. ಇದಕ್ಕೂ ಮುನ್ನ ಪೂರ್ವ ಆಫ್ರಿಕಾ ದೇಶದ ಡಿಜಿಬೌಟಿಯಲ್ಲಿ ತನ್ನ ನೌಕಾಸೇನೆಯನ್ನು ನೆಲೆಗೊಳಿಸಿದೆ.
ಇಂಡೋ-ಪೆಸಿಫಿಕ್ ವಲಯ ತನ್ನ ಅಧಿಕೃತ ಮತ್ತು ಐತಿಹಾಸಿಕ ಪ್ರಭಾವ ಕೇಂದ್ರ ಎಂದೇ ಚೀನ ನಾಯಕರು ಭಾವಿಸುತ್ತಾರೆಂದು ಪಾಶ್ಚಿಮಾತ್ಯ ದೇಶದ ಅಧಿಕಾರಿಯೊಬ್ಬರು ಹೇಳಿದ್ದಾರೆ.