ಬೀಜಿಂಗ್: ಬಾಹ್ಯಾಕಾಶದಲ್ಲಿ ಚೀನ ಸ್ವತಂತ್ರವಾಗಿ ನಿರ್ಮಿಸುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕಾಗಿ (ಐಎಸ್‌ಎಸ್) ಸಾಮಗ್ರಿಗಳನ್ನು ಕಳುಹಿಸಲಾಗಿದ್ದ ಲಾಂಗ್ ಮಾರ್ಚ್ ರಾಕೆಟ್, ತನ್ನ ಅವಧಿ ಮುಗಿದಿದ್ದರಿಂದ ಅಸ್ವಿತ್ವ ಕಳೆದುಕೊಂಡು ಬಾಹ್ಯಾಕಾಶದಿಂದ ಕೆಳಕ್ಕೆ ಬೀಳಲಾರಂಭಿಸಿದೆ.
ಬಾಹ್ಯಾಕಾಶ ತಜ್ಞರ ಪ್ರಕಾರ, ಈ ರಾಕೆಟ್ ಶನಿವಾರ ಅಥವಾ ಭಾನುವಾರ ಬೆಳಗ್ಗೆ 5.54ಕ್ಕೆ ಭೂಮಿಗೆ ಅಪ್ಪಳಿಸಲಿದೆ.
ಬರೋಬ್ಬರಿ 22 ಟನ್‌ನಷ್ಟು ತೂಕ, 100 ಅಡಿ ಉದ್ದವಿರುವ ಈ ರಾಕೆಟ್ ಯಾವ ದೇಶದ ಮೇಲೆ ಬಂದು ಬೀಳಲಿದೆಯೋ ಎಂಬ ಆತಂಕವನ್ನು ಸೃಷ್ಟಿಸಿದೆ.
ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಹೊತ್ತೂಯ್ಯುವ ರಾಕೆಟ್‌ಗಳು ಸಾಮಾನ್ಯವಾಗಿ ಭೂಮಿಗೆ ಮರಳುವುದರೊಳಗೇ ಸಂಪೂರ್ಣವಾಗಿ ಸುಟ್ಟು ಹೋಗುತ್ತವೆ. ಹಾಗೆಯೇ ಅದು ಮರಳಿ ಎಲ್ಲಿಗೆ ಬಂದು ಬೀಳಬೇಕು ಎನ್ನುವುದನ್ನೂ ಮೊದಲೇ ಯೋಜನೆ ಹಾಕಿ, ಸಮುದ್ರದೊಳಗೇ ರಾಕೆಟ್ ಬೀಳುವಂತೆ ಅವುಗಳನ್ನು ಸಿದ್ಧಪಡಿಸಿರಲಾಗುತ್ತದೆ. ಈ ರಾಕೆಟ್ ಬಗ್ಗೆಯೂ ಇದೇ ರೀತಿಯ ಯೋಜನೆ ಮಾಡಲಾಗಿತ್ತಾದರೂ ಆ ಯೋಜನೆ ಕೈ ಕೊಟ್ಟಿದೆ.
ಈ ಹಿಂದೆಯೂ ಇದೇ ತಪ್ಪು ಮಾಡಿದ್ದ ಚೀನ:
ಚೀನ ಈ ರೀತಿ ರಾಕೆಟ್ ಬಗ್ಗೆ ನಿಗಾ ವಹಿಸದಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2020ರಲ್ಲಿ ಚೀನಾದ ಲಾಂಗ್ ಮಾರ್ಚ್ 5ಬಿ ರಾಕೆಟ್‌ನ ಭಾಗವೊಂದು ಪಶ್ಚಿಮ ಆಫ್ರಿಕಾದ ಕರಾವಳಿ ಭಾಗದಲ್ಲಿ ಬಿದ್ದು, ಅನೇಕ ಕಟ್ಟಡಗಳನ್ನು ಹಾಳುಗೆಡವಿತ್ತು. ಹಾಗೆಯೇ 2021ರಲ್ಲಿಯೂ ಲಾಂಗ್ ಮಾರ್ಚ್ 5ಬಿ ರಾಕೆಟ್‌ನ ದೊಡ್ಡ ಭಾಗವೊಂದು ಭೂಮಿಗೆ ಮರಳಿತ್ತು. ಅದೃಷ್ಟವಶಾತ್ ಅದು ಹಿಂದೂ ಮಹಾಸಾಗರದಲ್ಲಿ ಬಿದ್ದಿತ್ತು.