ಬೀಜಿಂಗ್:ಕೋವಿಡ್ 19 ವೈರಸ್ ವಿಚಾರದಲ್ಲಿ ಅಮೆರಿಕ ಮತ್ತು ಚೀನಾ ನಡುವಿನ ವಾಕ್ಸಮರ ಇದೀಗ ಶೀತಲ ಯುದ್ಧದತ್ತ ವಾಲಿದೆ. ಅಮೆರಿಕ ರಾಜಕೀಯದ ವೈರಸ್ ಅನ್ನು ಹರಡುತ್ತಿದೆ. ವೈರಸ್ ಮೂಲ ಎಲ್ಲಿ ಎಂದು ಕಂಡುಹಿಡಿಯುವ ಅಂತಾರಾಷ್ಟ್ರೀಯ ಪ್ರಯತ್ನಕ್ಕೆ ಚೀನಾ ಮುಕ್ತವಾಗಿದೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ನೂತನ ಕೋವಿಡ್ 19 ವೈರಸ್ ನಿಂದ ಜಾಗತಿಕ ಆರ್ಥಿಕತೆ ಮೇಲಾಗುವ ನೆಗೆಟಿವ್ ಪರಿಣಾಮವನ್ನು ಶಮನಗೊಳಿಸಲು ಅಮೆರಿಕ ಸಹಕಾರ ನೀಡಬೇಕು ಎಂದು ಚೀನಾ ವಿನಂತಿಸಿಕೊಂಡಿದೆ ಎಂದು ವರದಿ ವಿವರಿಸಿದೆ.
ಹೊಸ ಕೋವಿಡ್ ವೈರಸ್ ವಿಚಾರದಲ್ಲಿ ದುರದೃಷ್ಟ ಎಂಬಂತೆ ಅಮೆರಿಕ ರಾಜಕೀಯ ವೈರಸ್ ಅನ್ನು ಕೂಡಾ ಹರಡತೊಡಗಿದೆ. ಪ್ರತಿ ಅವಕಾಶವನ್ನು ರಾಜಕೀಯ ವೈರಸ್ ಆಗಿ ಬಳಸಿಕೊಂಡು ಅಮೆರಿಕ ದಾಳಿ ನಡೆಸುವ ಮೂಲಕ ಚೀನಾವನ್ನು ಅವಿಶ್ವಾಸಕ್ಕೆ ದೂಡಿದೆ ಎಂದು ವಾಂಗ್ ಆರೋಪಿಸಿದ್ದಾರೆ.
ಈ ತಿಕ್ಕಾಟವನ್ನು ದೂರ ಮಾಡಿಕೊಳ್ಳಬೇಕು ಎಂದು ಕರೆ ನೀಡಿದ್ದು, ಚೀನಾ ಮತ್ತು ಅಮೆರಿಕ ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ. ಇದರೊಂದಿಗೆ ಉಭಯ ದೇಶಗಳ ಆರ್ಥಿಕತೆ ಸುಧಾರಣೆ ಜತೆಗೆ ಜಾಗತಿಕ ಆರ್ಥಿಕತೆಯತ್ತ ಗಮನಹರಿಸಬೇಕು ಎಂದು ವಾಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾವು ಚೀನಾದೊಂದಿಗೆ ಎಲ್ಲಾ ರೀತಿಯ ಬಾಂಧವ್ಯ ಕಡಿದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದರು. ಚೀನಾದ ವುಹಾನ್ ನಗರದಿಂದ ಇಡೀ ವಿಶ್ವಕ್ಕೆ ವೈರಸ್ ಹರಡಿದೆ ಎಂದು ಹಲವು ದೇಶಗಳು ಆರೋಪಿಸಿದ್ದವು. ಈ ಹಿನ್ನೆಲೆಯಲ್ಲಿ ಸೋಂಕಿನ ಮೂಲದ ಬಗ್ಗೆ ತನಿಖೆ ನಡೆಸಲು ವುಹಾನ್ ನಗರದ ಪ್ರಯೋಗಾಲಯಕ್ಕೆ ಅಂತಾರಾಷ್ಟ್ರೀಯ ಸಮುದಾಯದ ತಜ್ಞರನ್ನು ಕಳುಹಿಸಿಕೊಡಲು ಅವಕಾಶ ನೀಡಬೇಕೆಂದು ಅಮೆರಿಕ ಹಲವು ಬಾರಿ ಚೀನಾವನ್ನು ಒತ್ತಾಯಿಸಿತ್ತು. ಆದರೆ ಅದಕ್ಕೆ ಅವಕಾಶ ನೀಡಿರಲಿಲ್ಲವಾಗಿತ್ತು. ಇದರಿಂದ ಅಮೆರಿಕ ಮತ್ತು ಚೀನಾ ನಡುವೆ ಶೀತಲ ಸಮರ ಆರಂಭವಾಗಿದೆ ಎಂದು ವರದಿ ವಿವರಿಸಿದೆ.