ನವದೆಹಲಿ: ಭಾರತೀಯರಿಗೆ ಮತ್ತು ಭಾರತದಲ್ಲಿ ನೆಲೆಸಿರುವಂತಹ ವಿದೇಶಿಯರಿಗೆ, ಚೀನಾ ತಾತ್ಕಲಿಕವಾಗಿ ವಿಮಾನ ಸೇವೆಯನ್ನು ನಿರ್ಬಂಧಿಸಿದೆ. ಈ ಆದೇಶವು ಚೀನಾ ವೀಸಾ ಮತ್ತು ರಸಿಡೆನ್ಸ್ ಪರ್ಮಿಟ್ಸ್ ಹೊಂದಿರುವ ವಿದೇಶಿಗರಿಗೆ ಅನ್ವಯವಾಗುತ್ತದೆ ಎಂದು ಚೀನಾ ತಿಳಿಸಿದೆ.
ವಂದೇ ಭಾರತ್ ಮಿಷನ್ ವಿಮಾನದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಈ ನಿರ್ಧಾರ ತಳೆಯಲಾಗಿದ್ದು, ಈವರೆಗೂ ಏರ್ ಇಂಡಿಯಾ ವಿಶೇಷ ವಿಮಾನಗಳು ಚೀನಾಕ್ಕೆ ಪ್ರಯಾಣಿಸುತ್ತಿದ್ದವು.
ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿ, ಯಾವುದೇ ರೀತಿಯಲ್ಲೂ ಚೀನಾ ವೀಸಾ ಮತ್ತು ರಸಿಡೆನ್ಸ್ ಪರ್ಮಿಟ್ಸ್ ಹೊಂದಿರುವವರ ಆರೋಗ್ಯ ದೃಢಿಕರಣ ಪತ್ರಕ್ಕೆ ಸಹಿ ಹಾಕುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಅದಾಗ್ಯೂ, ವಾಣಿಜ್ಯ, ರಾಜತಾಂತ್ರಿಕ ಮತ್ತು ಸಿ ವೀಸಾ ವಿಮಾನ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿಲ್ಲ. ಮಾತ್ರವಲ್ಲದೆ ತುರ್ತು ಮತ್ತು ಮಾನವೀಯ ನೆಲೆಯಲ್ಲಿ ಚೀನಾಕ್ಕೆ ಪ್ರಯಾಣಿಸಬೇಕಿರುವವರು ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿಯಲ್ಲಿ ವೀಸಾ ಅರ್ಜಿ ಸಲ್ಲಿಸಬಹುದು.
ಕೋವಿಡ್ ಹಿನ್ನಲೆಯಲ್ಲಿ ಈ ನಿರ್ಬಂಧ ತಾತ್ಕಲಿಕವಾಗಿರಲಿದ್ದು, ಪರಿಸ್ಥಿತಿ ಸುಧಾರಿಸಿದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಚೀನಾ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಭಾರತ ಮಾತ್ರವಲ್ಲದೆ, ಬ್ರಿಟನ್, ಬೆಲ್ಜಿಯಂ, ಫಿಲಿಫೈನ್ಸ್ ದೇಶಿಯರಿಗೂ ಚೀನಾ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.