ಬೀಜಿಂಗ್ : “ಲಡಾಕ್ ವಲಯದಲ್ಲಿ ಭಾರತ ಮತ್ತು ನಮ್ಮ ಸೇನೆ ನಡುವೆ ಜಟಾಪಟಿ ನಡೆದಿದೆ ಎಂಬ ವಿಷಯ ನಮಗೆ ಗೊತ್ತೇ ಇಲ್ಲ” ಎಂದು ಹೇಳಿರುವ ಚೀನ, ವಿವಾದಿತ ಡೋಕ್‌ಲಾಂ ನಿಂದ ಭಾರತ ತನ್ನ ಸೇನೆಯನ್ನು ತತ್‌ಕ್ಷಣ ಹಿಂದೆಗೆಯಬೇಕು ಎಂದು ಮತ್ತೆ ಅಪ್ಪಣೆ ಮಾಡಿದೆ.
ಲಡಾಕ್‌ನಲ್ಲಿನ ಪಾಂಗೋಂಗ್ ಸರೋವರ ಸಮೀಪ ಭಾರತ ಮತ್ತು ಚೀನ ಸೈನಿಕರು ಇಂದು ಬೆಳಗ್ಗೆ ಮಾತಿನ ಜಗಳ ನಡೆಸಿ, ಪರಸ್ಪರರ ಮೇಲೆ ಕಲ್ಲೆಸೆದುಕೊಂಡು, ಕೆಲವು ಸೈನಿಕರು ಗಾಯಗೊಂಡ ಜಟಾಪಟಿಯು ನಡೆದಿರುವುದಾಗಿ ಕೆಲವು ಮಾಧ್ಯಮ ವರದಿಗಳು ತಿಳಿಸಿದ್ದವು.
ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಚೀನ ವಿದೇಶ ಸಚಿವಾಲಯದ ವಕ್ತಾರ ಹು ಶುನ್ಯಾಂಗ್ “ಆ ಬಗ್ಗೆ ನಮಗೇನೂ ಮಾಹಿತಿ ಇಲ್ಲ. ಗಡಿಯಲ್ಲಿನ ಚೀನೀ ಪಡೆಗಳು ಶಾಂತಿ ಕಾಯ್ದುಕೊಳ್ಳುವುದಕ್ಕೆ ಬದ್ಧವಾಗಿವೆ’ ಎಂದು ಹೇಳಿದರು.
ಚೀನೀ ಪಡೆಗಳು ಲಡಾಕ್‌ನಲ್ಲಿ ಭಾರತದ ಗಡಿಯೊಳಗೆ ಅತಿಕ್ರಮಣ ನಡೆಸಿರುವುದನ್ನು ಭಾರತೀಯ ಯೋಧರು ಪರಿಣಾಮಕಾರಿಯಾಗಿ ತಡೆದಿದ್ದಾರೆ ಎಂಬ ವರದಿಗಳು ಇಂದು ಬೆಳಗ್ಗೆ ಬಂದಿದ್ದವು.
ಲಡಾಕ್ ಗಡಿಯನ್ನು ಅತಿಕ್ರಮಿಸಿ ಭಾರತದೊಳಗೆ ಬಂದ ಚೀನೀ ಸೈನಿಕರು ತಮ್ಮೊಂದಿಗೆ ಕಬ್ಬಿಣದ ರಾಡ್‌ಗಳನ್ನು, ಕಲ್ಲುಗಳನ್ನು ಹೊಂದಿದ್ದರು. ಭಾರತೀಯ ಸೈನಿಕರು ಚೀನೀಯರ ಈ ಅತಿಕ್ರಮಣವನ್ನು ತಡೆದಾಗ ಅವರು ಕಲ್ಲು ತೂರಲು ಆರಂಭಿಸಿದರು. ಭಾರತೀಯ ಸೈನಿಕರು ತಕ್ಕುದಾದ ರೀತಿಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಿ ಚೀನೀಯರ ಅತಿಕ್ರಮಣ ಯತ್ನವನ್ನು ವಿಫಲಗೊಳಿಸಿದರು ಎಂದು ವರದಿಗಳು ಹೇಳಿದ್ದವು.