ಬೀಜಿಂಗ್: ಭೂಭಾಗದ ವಿಚಾರದಲ್ಲಿ ಚೀನಾ ಮತ್ತೊಮ್ಮೆ ಭಾರತವನ್ನು ಕೆಣಕಿದ್ದು, ಇದೀಗ ಅಧಿಕೃತವಾಗಿ ಬಿಡುಗಡೆಗೊಳಿಸಿರುವ 2023ರ ಆವೃತ್ತಿಯ “ಸ್ಟ್ಯಾಂಡರ್ಡ್ ಮ್ಯಾಪ್” ನಲ್ಲಿ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಪ್ರದೇಶವನ್ನು ತನ್ನ ಭೂಭಾಗ ಎಂದು ಗುರುತಿಸಿಕೊಂಡಿದೆ.
ಇದನ್ನೂ ಓದಿ:Sunny Deol: ಪ್ರತಿಬಾರಿ ಸಿನಿಮಾ ನಿರ್ಮಾಣ ಮಾಡಿದಾಗ ದಿವಾಳಿ ಆಗುತ್ತೇನೆ.. ಸನ್ನಿ ಡಿಯೋಲ್
ಆಗಸ್ಟ್ 28ರಂದು ಚೀನಾ ಬಿಡುಗಡೆಗೊಳಿಸಿರುವ ಭೂಪಟದಲ್ಲಿ ಅರುಣಾಚಲ ಪ್ರದೇಶ ದಕ್ಷಿಣ ಟಿಬೆಟ್ ನ ಭಾಗ ಎಂಬುದಾಗಿ ತೋರಿಸಿದ್ದು, ಅಕ್ಸಾಯ್ ಚಿನ್ 1962ರ ಯುದ್ಧದ ಸಂದರ್ಭದಲ್ಲಿ ಆಕ್ರಮಿಸಿಕೊಂಡಿರುವ ಭೂಭಾಗ ಎಂದು ನಮೂದಿಸಿದೆ.
ಹೊಸ ಭೂಪಟದಲ್ಲಿ ತೈವಾನ್ ಹಾಗೂ ವಿವಾದಿತ ದಕ್ಷಿಣ ಚೀನಾ ಸಮುದ್ರ ಪ್ರದೇಶ ಕೂಡಾ ಚೀನಾದ ಭಾಗವೆಂದು ಹೇಳಿಕೊಂಡಿದೆ. ವಿಯೆಟ್ನಾಂ, ಫಿಲಿಫೈನ್ಸ್, ಮಲೇಷ್ಯಾ ಮತ್ತು ಬ್ರೂನೈ ಕೂಡಾ ದಕ್ಷಿಣ ಚೀನಾ ಸಮುದ್ರ ಪ್ರದೇಶವನ್ನು ತಮಗೆ ಸೇರಿರುವುದಾಗಿ ವಾದಿಸುತ್ತಿವೆ.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ನಡೆದಿದ್ದ ಬ್ರಿಕ್ಸ್ ಶೃಂಗಸಭೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಈ ಸಂದರ್ಭದಲ್ಲಿ ವೆಸ್ಟರ್ನ್ ಸೆಕ್ಟರ್ ನ ಭಾರತ ಮತ್ತು ಚೀನಾ ಗಡಿಭಾಗದ ಬಗೆಹರಿಯದ ವಿವಾದಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕ್ಸಿ ಜಿಂಗ್ ಪಿಂಗ್ ಜೊತೆ ಚರ್ಚೆ ನಡೆಸಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ವಿಜಯ್ ಕ್ವಾಟ್ರಾ ತಿಳಿಸಿದ್ದರು.