Advertisement

ರಾಹುಲ್‌ಗೆ “ಚೀನ’ಬಿಸಿ; ಯೋಧರ ಮೇಲೆ ಹಲ್ಲೆಯಾಗುತ್ತಿದೆ ಎಂಬ ಹೇಳಿಕೆಗೆ ಬಿಜೆಪಿ ಆಕ್ರೋಶ

09:01 PM Dec 16, 2022 | Team Udayavani |

ಜೈಪುರ/ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು “ಭಾರತ-ಚೀನ’ ಗಡಿ ಗಲಾಟೆ ಕುರಿತು ನೀಡಿರುವ ಹೇಳಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ.

Advertisement

ಭಾರತ್‌ ಜೋಡೋ ಯಾತ್ರೆ 100 ದಿನಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ರಾಜಸ್ಥಾನದ ಜೈಪುರದ ಸುದ್ದಿಗೋಷ್ಠಿ ನಡೆಸಿದ ರಾಹುಲ್‌ಗಾಂಧಿ, ಗಡಿ ವಿವಾದದ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಚೀನವು ಯುದ್ಧಕ್ಕೆ ಸಿದ್ಧವಾಗುತ್ತಿದೆ. ಆದರೆ, ಭಾರತ ಸರ್ಕಾರ ಮಾತ್ರ ನಿದ್ದೆಗೆ ಶರಣಾಗಿದೆ. ಅಪಾಯವನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ. ಚೀನವು ಈಗಾಗಲೇ ಭಾರತದ 2 ಸಾವಿರ ಚದರ ಕಿಲೋಮೀಟರ್‌ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದೆ. ಗಾಲ್ವಾನ್‌ನಲ್ಲಿ ನಮ್ಮ 20 ಯೋಧರನ್ನು ಚೀನೀ ಸೈನಿಕರು ಹತ್ಯೆಗೈದಿದ್ದಾರೆ. ಅರುಣಾಚಲ ಪ್ರದೇಶದಲ್ಲೂ ನಮ್ಮ ಯೋಧರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ’ ಎಂದು ರಾಹುಲ್‌ ಹೇಳಿದ್ದಾರೆ.

ಜತೆಗೆ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಕಾರ್ಯಕ್ರಮ ಆಧರಿತ ಕೆಲಸ ಮಾಡುತ್ತಿದೆಯೇ ಹೊರತು, ವ್ಯೂಹಾತ್ಮಕವಾಗಿ ಏನೂ ಮಾಡುತ್ತಿಲ್ಲ ಎಂದೂ ಆರೋಪಿಸಿದ್ದಾರೆ.

ಮುಗಿಬಿದ್ದ ಬಿಜೆಪಿ:
ರಾಹುಲ್‌ರಿಂದ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್‌ ಮಾಳವೀಯ ಟ್ವೀಟ್‌ ಮಾಡಿ, “ನಮ್ಮ ಯೋಧರು ಚೀನದ ಸೈನಿಕರನ್ನು ಹೊಡೆಯುತ್ತಿರುವ ವಿಡಿಯೋವನ್ನು ಪ್ರತಿಯೊಬ್ಬ ಹೆಮ್ಮೆಯ ಭಾರತೀಯನೂ ನೋಡಿದ್ದಾನೆ. ಆದರೆ, ರಾಹುಲ್‌ ಮಾತ್ರ ಇದನ್ನು ನೋಡಿಲ್ಲ. ಚೀನದೊಂದಿಗೆ ಒಪ್ಪಂದ ಮಾಡಿಕೊಂಡಿರುವ, ಚೀನದ ಆತಿಥ್ಯವನ್ನು ಸ್ವೀಕರಿಸಿರುವ, ಆರ್‌ಜಿ ಪ್ರತಿಷ್ಠಾನಕ್ಕೆ ದೇಣಿಗೆ ಪಡೆದಿರುವ ಏಕೈಕ ಕಾರಣಕ್ಕೆ ರಾಹುಲ್‌ ಗಾಂಧಿ ನಮ್ಮ ಯೋಧರ ದಿಟ್ಟತನವನ್ನೇ ಅನುಮಾನಿಸುತ್ತಿದ್ದಾರೆ’ ಎಂದು ಹರಿಹಾಯ್ದಿದ್ದಾರೆ.

Advertisement

ಗಡಿ ಭಾಗ ಸುರಕ್ಷಿತವಾಗಿದೆ:
ಇದೇ ವೇಶೆ, ಚೀನ ಮತ್ತು ನೇಪಾಳ ಗಡಿಗೆ ತಾಗಿಕೊಂಡಿರುವ ಭಾರತದ ಉತ್ತರ ಗಡಿ ಭಾಗದ ಪ್ರದೇಶಗಳು ಸುರಕ್ಷಿವಾಗಿವೆ. ಭಾರತೀಯ ಸಶಸ್ತ್ರ ಪಡೆಗಳು ಈ ಪ್ರದೇಶಗಳನ್ನು ದೃಢವಾಗಿ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿವೆ ಎಂದು ಭಾರತೀಯ ಸೇನೆಯ ಪೂರ್ವ ಸೇನಾ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಆರ್‌.ಪಿ.ಕಲಿತಾ ಶುಕ್ರವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಭಾರತ-ಚೀನ ಗಡಿಯ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ)ಯ ಕುರಿತು ಭಾರತೀಯ ಸೇನೆ ಮತ್ತು ಪೀಪಲ್ಸ್‌ ಲಿಬರೇಷನ್‌ ಆರ್ಮಿ ಎರಡೂ ಸೇನೆಗಳಿಗೆ ವಿಭಿನ್ನ ಗ್ರಹಿಕೆಗಳಿವೆ. ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ನ ಒಂದು ಪ್ರದೇಶದಲ್ಲಿ ಚೀನ ಸೇನೆ ನಿಯಮ ಮೀರಿ, ಮುಂದೆ ಬಂದಿತ್ತು. ಭಾರತೀಯ ಪಡೆಗಳು ಚೀನ ಸೇನೆಯನ್ನು ದೃಢವಾಗಿ ಹಿಮ್ಮೆಟ್ಟಿಸಿದ್ದು, ಎರಡೂ ಕಡೆಯ ಯೋಧರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ,’ ಎಂದು ವಿವರಿಸಿದರು.

ಕಾಂಗ್ರೆಸ್‌ನಲ್ಲಿ ಪ್ರತಿರೋಧಕ್ಕೆ ಅವಕಾಶವಿದೆ
ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್‌ ಪೈಲಟ್‌ ನಡುವಿನ ಗುದ್ದಾಟದ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ರಾಹುಲ್‌ ಗಾಂಧಿ, “ಇದರಲ್ಲಿ ತಪ್ಪೇನಿಲ್ಲ. ಕಾಂಗ್ರೆಸ್‌ನಲ್ಲಿ ಪ್ರತಿರೋಧಕ್ಕೆ ಅವಕಾಶವಿದೆ. ಇದು ಆಂತರಿಕ ಪ್ರಜಾಪ್ರಭುತ್ವದ ಲಕ್ಷಣ. ನಮ್ಮಲ್ಲಿ ಸರ್ವಾಧಿಕಾರಿ ನಡವಳಿಕೆಯಿಲ್ಲ. ಇದುವೇ ಕಾಂಗ್ರೆಸ್‌ನ ಸೌಂದರ್ಯ’ ಎಂದಿದ್ದಾರೆ. ಇದೇ ವೇಳೆ, ರಾಜಸ್ಥಾನ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯಲಿದೆ ಎಂಬ ಪ್ರಶ್ನೆಗೆ ರಾಹುಲ್‌, “ಈ ಪ್ರಶ್ನೆಯನ್ನು ಮಲ್ಲಿಕಾರ್ಜುನ ಖರ್ಗೆಯವರಿಗೆ ಕೇಳಬೇಕು. ಅವರೇ ಪಕ್ಷದ ಅಧ್ಯಕ್ಷರು’ ಎಂದಿದ್ದಾರೆ. ಇನ್ನು, ಗುಜರಾತ್‌ನಲ್ಲಿ ಆಪ್‌ ಸ್ಪರ್ಧಿಸದೇ ಇರುತ್ತಿದ್ದರೆ, ನಾವು ಬಿಜೆಪಿಯನ್ನು ಸೋಲಿಸುತ್ತಿದ್ದೆವು ಎಂದೂ ರಾಹುಲ್‌ ಹೇಳಿದ್ದಾರೆ.

ಪ್ರಧಾನಿ ಮೋದಿಯವರು ಚೀನ ಅಧ್ಯಕ್ಷರನ್ನು 18 ಬಾರಿ ಭೇಟಿಯಾಗಿದ್ದಾರೆ. ಗಾಲ್ವಾನ್‌ ಘರ್ಷಣೆ ಬಳಿಕವೂ ಚೀನದೊಂದಿಗೆ ನಮ್ಮ ದೇಶ ನಡೆಸುತ್ತಿರುವ ವ್ಯಾಪಾರ, ಆಮದು ಮತ್ತಷ್ಟು ಹೆಚ್ಚಾಗಿದೆ. ವ್ಯಾಪಾರ-ವಹಿವಾಟು ಸಹಜವಾಗಿದೆ, ಗಡಿಯಲ್ಲಿ ಮಾತ್ರ ಅಸಹಜ ಸ್ಥಿತಿ ಇದೆ. ಇದರ ಬಗ್ಗೆ ಏನನ್ನುತ್ತೀರಿ?
– ಜೈರಾಂ ರಮೇಶ್‌, ಕಾಂಗ್ರೆಸ್‌ ನಾಯಕ

ಇದು ಮೋದಿಯವರ ನವ ಭಾರತ. ನೆಹರೂ ಅವರ ಭಾರತವಲ್ಲ. ಈಗ ನಮ್ಮ ದೇಶವನ್ನು ಯಾರಾದರೂ ಕಣ್ಣೆತ್ತಿ ನೋಡಿದರೆ ಸಾಕು, ತಕ್ಕ ಪ್ರತ್ಯುತ್ತರ ನೀಡಲಾಗುತ್ತಿದೆ. ರಾಹುಲ್‌ ಸುಖಾಸುಮ್ಮನೆ ಗೊಂದಲ ಉಂಟುಮಾಡುತ್ತಾ, ಯೋಧರ ನೈತಿಕ ಬಲವನ್ನು ಕುಗ್ಗಿಸುತ್ತಿದ್ದಾರೆ.
– ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌, ಬಿಜೆಪಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next