Advertisement

G-20 ಸಮ್ಮೇಳನಕ್ಕೆ ಜಿನ್‌ಪಿಂಗ್‌ ಗೈರು?- ಗೈರು ಹಾಜರಿಯ ಬಗ್ಗೆ ಚೀನಾ ಮೌನ

08:24 PM Aug 31, 2023 | Team Udayavani |

ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ಸೆ.9,10ರಂದು ನಡೆಯಲಿರುವ ಬಹುನಿರೀಕ್ಷಿತ ಜಿ20 ರಾಷ್ಟ್ರಗಳ ಸಮ್ಮೇಳನಕ್ಕೆ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್‌ ಬರುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ. ಅವರ ಸ್ಥಾನದಲ್ಲಿ ಪ್ರಧಾನಿ ಲಿ ಖೀಯಾಂಗ್‌ ಉಪಸ್ಥಿತರಿರಲಿದ್ದಾರೆ ಎಂದು ಹೇಳಲಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಗೈರುಹಾಜರಾಗುವ ಬಗ್ಗೆ ಅಲ್ಲಿನ ಸಂಸತ್ತು, ಕ್ಲೆಮ್ಲಿನ್‌ ದೃಢೀಕರಿಸಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

ಪೂರ್ವ ಲಡಾಖ್‌ನ ಗಾಲ್ವಾನ್‌ನಲ್ಲಿ ಮೂರು ವರ್ಷಗಳ ಹಿಂದೆ ಗಡಿ ಅತಿಕ್ರಮಣಕ್ಕೆ ಬಂದು ಪೆಟ್ಟು ತಿಂದ ಮೇಲೆ ಭಾರತ ಮತ್ತು ಚೀನಾ ನಡುವೆ ಬಾಂಧವ್ಯ ಮುರಿದುಬಿದ್ದಿದೆ. ಇದರ ಜತೆಗೆ ಅರುಣಾಚಲ ಪ್ರದೇಶದ ಕೆಲವು ಭಾಗಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿರುವ ಭೂಪಟ ಬಿಡುಗಡೆ ಮಾಡಿದ್ದಕ್ಕೆ, ಕೇಂದ್ರ ಸರ್ಕಾರದ ವತಿಯಿಂದ ತೀವ್ರ ಆಕ್ಷೇಪವನ್ನೂ ನವದೆಹಲಿಯಲ್ಲಿ ಇರುವ ಚೀನಾ ರಾಯಭಾರ ಕಚೇರಿಗೆ ಸಲ್ಲಿಕೆ ಮಾಡಲಾಗಿತ್ತು.

ಚೀನಾ ಅಧ್ಯಕ್ಷರು ಯಾವ ಕಾರಣಕ್ಕಾಗಿ ಸಮ್ಮೇಳನಕ್ಕೆ ಬರುತ್ತಿಲ್ಲ ಎಂಬ ಬಗ್ಗೆ ಅಲ್ಲಿನ ಸರ್ಕಾರ ಯಾವುದೇ ಕಾರಣ ನೀಡಿಲ್ಲ. ಈ ಬಗ್ಗೆ ನವದೆಹಲಿಯಲ್ಲಿ ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವಾಲಯ “ಚೀನಾ ಅಧ್ಯಕ್ಷರು ಭಾಗವಹಿಸುವ ಬಗ್ಗೆ ಇನ್ನೂ ಖಚಿತಪಡಿಸಿಲ್ಲ’ ಎಂದು ಹೇಳಿದೆ. ಇದೇ ವೇಳೆ, ಬೀಜಿಂಗ್‌ನಲ್ಲಿ ಮಾತನಾಡಿದ ಚೀನಾ ವಿದೇಶಾಂಗ ಇಲಾಖೆಯ ವಕ್ತಾರರು “ನವದೆಹಲಿಯಲ್ಲಿನ ಜಿ20 ಸಮ್ಮೇಳನಕ್ಕೆ ನಮ್ಮ ದೇಶದ ಪ್ರತಿನಿಧಿಗಳು ತೆರಳಲಿದ್ದಾರೆ. ಇದಕ್ಕಿಂತ ಹೆಚ್ಚು ಹೇಳುವುದೇನೂ ಇಲ್ಲ’ ಎಂದು ಹೇಳಿದ್ದಾರೆ.

ಅಲಂಕಾರಕ್ಕಾಗಿ 7 ಲಕ್ಷ ಹೂಗಿಡ ನೆಟ್ಟ ಸರ್ಕಾರ
-ಕೋತಿಗಳನ್ನು ಓಡಿಸಲು ಲಂಗೂರ್‌ ಧ್ವನಿಯಲ್ಲಿ ಗುರುಗುಟ್ಟುವವರ ನೇಮಕ!
ನವದೆಹಲಿಯಲ್ಲಿ ಜಿ20 ಸಮ್ಮೇಳನಕ್ಕೆ ಬೇಕಾಗಿರುವ ಸಿದ್ಧತೆಗಳು ಮುಂದುವರಿದಿವೆ. ಇಡೀ ದೆಹಲಿಯನ್ನು ಶೃಂಗರಿಸಲು 7 ಲಕ್ಷ ಹೂಗಿಡಗಳನ್ನು ನೆಡಲಾಗಿದೆ. ದೆಹಲಿ ಮತ್ತು ಕೇಂದ್ರ ಸರ್ಕಾರಗಳು ಸೇರಿಕೊಂಡು ಇದನ್ನು ಮಾಡಿವೆ. ಕೋತಿಗಳನ್ನು ಓಡಿಸಲು ಲಂಗೂರ್‌ಗಳಂತೆಯೇ ಧ್ವನಿಯನ್ನು ಅನುಕರಿಸುವವರನ್ನೂ ತಾತ್ಕಾಲಿಕ ನೆಲೆಯಲ್ಲಿ ನೇಮಿಸಲಾಗಿದೆ. ಚಾಂದಿನಿ ಚೌಕ್‌ ಪ್ರದೇಶದಲ್ಲಿ ಇರುವ ಬೀದಿಬದಿ ಮತ್ತು ಇತರ ಮಳಿಗೆಗಳ ಮಾಲಿಕರು ಇಂಗ್ಲಿಷ್‌ ಮಾತಾಡುವ ವ್ಯಕ್ತಿಗಳನ್ನೇ ಸೆ.8,9,10ರ ಮಟ್ಟಿಗೆ ನೇಮಕ ಮಾಡಿಕೊಳ್ಳುತ್ತಿದ್ದಾರೆ. ವಿದೇಶಿ ಪ್ರತಿನಿಧಿಗಳು ಬರುತ್ತಿರುವುದರಿಂದ ಅವರ ಜೊತೆಗೆ ವ್ಯವಹರಿಸಲು ಅನುಕೂಲವಾಗಲಿ ಎನ್ನುವುದು ಇದರ ಹಿಂದಿನ ಉದ್ದೇಶ.

ಶಿವಲಿಂಗ ಕಾರಂಜಿಗೆ ಟೀಕೆ:
ರಾಷ್ಟ್ರ ರಾಜಧಾನಿಯ ಧೌಲಾ ಕುವಾನ್‌ ಎಂಬಲ್ಲಿ ಅಲಂಕಾರಿಕವಾಗಿ ಇರಿಸಲಾಗಿರುವ ಶಿವಲಿಂಗ ಮಾದರಿಯ ಕೃತಕ ಕಾರಂಜಿಯ ಬಗ್ಗೆ ಆಮ್‌ ಆದ್ಮಿ ಪಕ್ಷ ಆಕ್ಷೇಪ ಮಾಡಿದೆ. ಆಪ್‌ನ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್‌ ಟ್ವೀಟ್‌ ಮಾಡಿ, ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಶಿವಲಿಂಗ ಮಾದರಿಯ ಕಾರಂಜಿ ಅಳವಡಿಸುವಂತೆ ಮಾಡಿ, ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರಿದ್ದಾರೆ.

Advertisement

ಇದು ನವದೆಹಲಿಯೇ ಹೊರತು, ಜ್ಞಾನವಾಪಿ ಅಲ್ಲ. ಶಿವಲಿಂಗ ಅಲಂಕಾರಕ್ಕೆ ಇರುವ ವಸ್ತು ಅಲ್ಲವೆಂದು ಬಿಜೆಪಿ ನಾಯಕಿ ಚಾರು ಪ್ರಜ್ಞಾ ಟೀಕಿಸಿದ್ದಾರೆ. ಬಿಆರ್‌ಎಸ್‌, ವೈಎಸ್‌ಆರ್‌ ಕಾಂಗ್ರೆಸ್‌ ಕೂಡ ಶಿವಲಿಂಗ ಮಾದರಿ ಇರಿಸಿದ ಬಗ್ಗೆ ಟೀಕೆ ಮಾಡಿವೆ. ಜಾಲತಾಣಗಳಲ್ಲಿಯೂ ಹಲವು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next