Advertisement
ಮೊನ್ನೆ ಊರಿಗೆ ಹೋಗಿದ್ದೆ. ನಮ್ಮೂರಲ್ಲಿ ಈ ಬೆಂಗಳೂರ ಹಾಗೆ ಅಪರೂಪಕ್ಕೆ ಕರೆಂಟು ಹೋಗಲ್ಲ. ಬದಲಾಗಿ, ಅಪರೂಪಕ್ಕೆ ಕರೆಂಟು ಇರುತ್ತೆ! ಅದೇನೋ ಪವರ್ ಕಟ… ಅಂತ ಹೇಳಿ ದಿನದ 12 ಗಂಟೆ ಕರೆಂಟ್ ತೆಗೀತಾರಪ್ಪ. ಮೊನ್ನೆಯೂ ನಾನು ಊರಿಗೆ ಹೋಗಿದ್ದಾಗ ಕರೆಂಟ್ ಇರಲಿಲ್ಲ. ಸಂಜೆ ಬರಬಹುದೇನೋ ಅನ್ಕೊಂಡಿದ್ವಿ. ಸಂಜೆನೂ ಬರಲಿಲ್ಲ. ರಾತ್ರಿ ಆಯ್ತು, ಊಹೂ… ಮಾರನೇ ದಿನವೂ ಇಲ್ಲ! ಕರೆಂಟು ಇಲ್ಲವೆಂದರೆ ನಮ್ಮೂರಿನ ಜನ ಅಡುಗೆಯನ್ನು ಹೇಗೋ ರುಬ್ಬು ಕಲ್ಲಲ್ಲಿ ರುಬ್ಬಿ ಮಾಡಿಯಾರು. ಆದರೆ, ಧಾರಾವಾಹಿ ನೋಡಲು ಆಗುವುದಿಲ್ಲ ಎಂಬುದೇ ಅವರ ಬಹು ದೊಡ್ಡ ಅಳಲು!
Related Articles
Advertisement
ಮಳೆಗಾಲ ಬಂದರಂತೂ ಇನ್ನೂ ಮಜ. ಚಿಮಣಿಯನ್ನು ನೀರಿನ ತಟ್ಟೆಯ ಮಧ್ಯವಿಟ್ಟು, ದೀಪದ ಸುತ್ತ ಬರುವ ಮಳೆಹುಳಗಳನ್ನು ನೀರಿಗೆ ಬೀಳಿಸುವುದೇ ಏನೋ ಖುಷಿ. ಚಿಮಣಿಯ ನೆರಳಲ್ಲಿ ಬೆರಳುಗಳ ಆಟ ಆಡಿ ಗೋಡೆಯ ಮೇಲೆ ಚಿತ್ರಗಳನ್ನು ಮೂಡಿಸುತ್ತಿದ್ದಾಗಿನ ಖುಷಿ ಇಂದಿನ ಯಾವ ಖುಷಿಗೂ ಸಮನಾಗದು. ಎಷ್ಟೋ ಸಲ ಚಿಮಣಿಯ ದೀಪದಿಂದ ಬಟ್ಟೆ ಸುಟ್ಟುಕೊಂಡಿದ್ದೇವೆ, ಬೇರೆ ಬೇರೆ ಅವಾಂತರ ಮಾಡಿಕೊಂಡಿದ್ದೇವೆ. ಆದರೂ ಈ ಚಿಮಣಿಯ ಬೆಳಕು ನಮ್ಮೆಲ್ಲರನ್ನೂ ಒಂದೆಡೆ ಸೇರಿಸುತಿತ್ತು. ಮನೆಯವರೆಲ್ಲಾ ಒಟ್ಟಿಗೆ ಕೂತು ಹರಟುವ ಸದಾವಕಾಶವನ್ನು ಅದು ಕಲ್ಪಿಸುತಿತ್ತು.
ಒಂದು ನಿಮಿಷ ಕರೆಂಟು ಇಲ್ಲದಿದ್ದರೂ ಓದಲಾಗುವುದಿಲ್ಲ ಎನ್ನುವ ಈಗಿನ ಪೀಳಿಗೆಯ ಮಕ್ಕಳ ನಡುವೆ ಎಷ್ಟೋ ಪರೀಕ್ಷೆಗಳನ್ನು ದೀಪದ ಬೆಳಕಲ್ಲೇ ಓದಿ ಬರೆದು ಪಾಸು ಮಾಡಿರುವ ಹೆಮ್ಮೆ ನನಗಿದೆ. ಚಿಮಣಿ ದೀಪದ ಕಲ್ಪನೆಯೇ ಇಲ್ಲದ ಜನರಿಗಿಂತ ಚಿಮಣಿ ಯ ಬೆಳಕಲ್ಲೇ ಬಾಲ್ಯದ ಸಂಜೆಗಳನ್ನು ಕಳೆದು ಬದುಕಿದರೂ, ಇಂದು ಎ.ಸಿ. ರೂಮಿನಲ್ಲಿ ಕೂತು ಕೆಲಸ ಮಾಡುವ ನಾವುಗಳು, ಎರಡು ಪೀಳಿಗೆಯ ಕೊಂಡಿಯಾಗಿದ್ದೇವೆಂದರೆ ತಪ್ಪಾಗಲಾರದು.ಮೊನ್ನೆಯೂ ಚಿಮಣಿಯ ದೀಪ ಮತ್ತೆ ನಮ್ಮೆಲ್ಲರನ್ನು ಒಟ್ಟಿಗೆ ಸೇರಿಸಿತ್ತು. ಧಾರಾವಾಹಿ- ಕ್ರಿಕೆಟ್ಟುಗಳ ಗಲಾಟೆಯಿಲ್ಲದೆ ಸಂಜೆ ಶಾಂತವಾಗಿತ್ತು. ವಿದ್ಯುದ್ದೀಪಗಳಿಂದ ಕತ್ತಲೆಯ ಬೆಲೆಯನ್ನೇ ಮರೆತ ನಮಗೆ ಮತ್ತೆ ಕತ್ತಲೆಯ ಹಿತಾನುಭವವನ್ನು ನೀಡಿತ್ತು. ಆ ಕತ್ತಲ ಆಕಾಶ ದ ಕೆಳಗೆ ನಮ್ಮ ಮನೆ ದೀಪ ಹೊತ್ತ ಪುಟ್ಟ ಗುಡಿಸಲಂತೆ ಕಾಣುತಿತ್ತು. ದೀಪದ ಹೊಗೆಯು ಬತ್ತಿ ಉರಿದು ಬೆಳಕು ಕೊಟ್ಟ ಸಾರ್ಥಕತೆಯಲ್ಲಿ ನಗುತಿತ್ತು. ಮನೆಯವರೆಲ್ಲಾ ಒಟ್ಟಿಗೆ ಕೂತು ನಗುವಾಗ ಮತ್ತೆ ನನ್ನ ಬಾಲ್ಯ ನನಗೆ ಸಿಕ್ಕಿತ್ತು. ಎಣ್ಣೆ ತೀರಿ ದೀಪ ಚಿಕ್ಕದಾಗುತ್ತಿದ್ದಂತೆ ಮತ್ತೆ ನನ್ನ ಈ ಜಗತ್ತಿಗೆ ವಾಪಸು ದೂಡುತಿತ್ತು. ಮಂದಾರ ಕೆ.ಆರ್.