ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮೇಲೆ ಈಚೆಗೆ ನಡೆದ ಖಾರ ಪುಡಿ ದಾಳಿ ಪ್ರಕರಣದ ಆಮೂಲಾಗ್ರ ತನಿಖೆ ಆಗಬೇಕು ಎಂದು ಭಾರತೀಯ ಜನತಾ ಪಕ್ಷ ಆಗ್ರಹಿಸಿದೆ.
ಈ ಪ್ರಕರಣವು ಆಮ್ ಆದ್ಮಿ ಪಕ್ಷವೇ ರೂಪಿಸಿರುವ ಸಂಚಾಗಿದ್ದು ಜನರ ‘ಸಹಾನುಭೂತಿ’ ಪಡೆಯುವ ರಾಜಕೀಯ ಉದ್ದೇಶ ಇದರಲ್ಲಿ ಅಡಗಿದೆ ಎಂದು ಬಿಜೆಪಿ ಆರೋಪಿಸಿದೆ.
ಕೇಜ್ರಿವಾಲ್ ಮೇಲೆ ಖಾರ ಪುಡಿ ದಾಳಿ ನಡೆಸಿದ ವ್ಯಕ್ತಿಗೆ ಒಳ ಪ್ರವೇಶಿಸಲು ಅವಕಾಶ ನೀಡಿದ್ದ ಕೇಜ್ರಿವಾಲ್ ಸಹಾಯಕನನ್ನು ಬಂಧಿಸಿ ಪ್ರಕರಣದ ಆಮೂಲಾಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ಶಾಸಕರು ದಿಲ್ಲಿ ಪೊಲೀಸ್ ಕಮಿಷನರ್ ಅಮೂಲ್ಯ ಪಟ್ನಾಯಕ್ ಅವರನ್ನು ಭೇಟಿಯಾಗಿ ಒತ್ತಾಯಿಸಿದರು.
ಖಾರ ಪುಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಕಾರ್ಯಾಲಯವಾಗಲೀ ಆಮ್ ಆದ್ಮಿ ಪಕ್ಷವಾಗಲೀ ಪೊಲೀಸರಿಗೆ ದೂರು ನೀಡದಿರುವುದು ಅಚ್ಚರಿಯ ವಿಷಯವಾಗಿದೆ ಎಂದವರು ಹೇಳಿದರು.