Advertisement

ಚುಮು ಚುಮು ಚಳಿಗೆ ವೈನ್‌ ಕಿಕ್‌

11:43 AM Dec 06, 2018 | |

ಬೆಂಗಳೂರು: ಚಳಿ ವಾತಾವರಣಕ್ಕೆ “ವೈನ್‌’ನ ಕಿಕ್‌ಕೊಡಲು ದ್ರಾಕ್ಷಾರಸ ಮಂಡಳಿ ಸಿದ್ಧತೆ ನಡೆಸಿದ್ದು, ರಾಜ್ಯದ ನಾಲ್ಕು ಕಡೆ ಡಿಸೆಂಬರ್‌ ಹಾಗೂ ಜನವರಿಯಲ್ಲಿ ಅಂತಾರಾಷ್ಟ್ರೀಯ ವೈನ್‌ ಮೇಳವನ್ನು ಹಮ್ಮಿಕೊಂಡಿದೆ. 

Advertisement

ವೈನ್‌ ಆರೋಗ್ಯಕ್ಕೂ ಹಿತಕರ. ಹೀಗಾಗಿ, ರಾಜ್ಯ ದ್ರಾಕ್ಷಾರಸ ಮಂಡಳಿಯು ದ್ರಾಕ್ಷಿ ಬೆಳೆಯುವ ರೈತರು, ರಾಜ್ಯದ 17 ವೈನ್‌ ಕಾರ್ಖಾನೆಗಳು ಹಾಗೂ ಮಾರಾಟಗಾರರಿಗೆ ವೇದಿಕೆ ಕಲ್ಪಿಸುವ ಜತೆಗೆ ವೈನ್‌ ಪ್ರಿಯರಿಗೆ ಸ್ಥಳೀಯ ಹಾಗೂ ವಿದೇಶಿ ಬ್ರಾಂಡ್‌ ವೈನ್‌ ರುಚಿಯನ್ನು ಪರಿಚಯಿಸಲು ಕಳೆದ 11 ವರ್ಷಗಳಿಂದ ರಾಜ್ಯದ ಪ್ರಮುಖ ನಗರಗಳಲ್ಲಿ ವೈನ್‌ಮೇಳ ಆಯೋಜಿಸುತ್ತಿದೆ.

ಈ ಬಾರಿ ಕಾರವಾರ, ಮಂಗಳೂರು, ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮೇಳವನ್ನು, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿಯಲ್ಲಿ ರಾಜ್ಯಮೇಳವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಡಿ.21ರಂದು ಕಾರವಾರದಲ್ಲಿ ಮೇಳಕ್ಕೆ ಚಾಲನೆ ದೊರೆಯಲಿದೆ.

ಆ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ, ಅಬಕಾರಿ ಇಲಾಖೆ, ಪೊಲೀಸ್‌ ಇಲಾಖೆ ಒಪ್ಪಿಗೆ ಪಡೆಯಲಾಗುತ್ತಿದೆ. ಸದ್ಯ ಅಂತಾರಾಷ್ಟ್ರೀಯ ಮೇಳಗಳಗೆ  ಮಂಡಳಿ ಸಜ್ಜಾಗಿದ್ದು, ಮೊದಲ ಮೇಳ ಕಾರವಾರದ ಕೋಡಿಬಾಗದಲ್ಲಿನ ಕಾಳಿ ರಿವರ್‌ ಗಾರ್ಡನ್‌ನಲ್ಲಿ  ಡಿ.21ರಿಂದ 23 ವರೆಗೆ ನಡೆಯಲಿದೆ.

ಇನ್ನು ಮೇಳಗಳ ಆಯೋಜನೆಗೆ ಇ ಟೆಂಡರ್‌ ಮೂಲಕ ಖಾಸಗಿ ಕಂಪನಿಗಳಿಗೆ ಆಹ್ವಾನಿಸಲಾಗಿತ್ತು, 36 ಲಕ್ಷ ರೂ. ಪಡೆದು “ಸೆನ್ಸಸ್‌ ಕ್ರಿಯೇಷನ್ಸ್‌’ ಎಂಬ ಖಾಸಗಿ ಇವೆಂಟ್‌ ಆರ್ಗನೈಜೇಷನ್‌ ಮೇಳಗಳನ್ನು ಆಯೋಜಿಸುತ್ತಿದೆ. ಉಳಿದಂತೆ ಜನವರಿ ಮೊದಲ ವಾರದಲ್ಲಿ ಮಂಗಳೂರು ಹಾಗೂ ಕೊನೆಯ ವಾರದಲ್ಲಿ ಬೆಂಗಳೂರಿನ ಜಯಮಹಲ್‌ನಲ್ಲಿ ಮೇಳ ನಡೆಯಲಿದೆ. 

Advertisement

ಸಾಮೂಹಿಕವಾಗಿ ದ್ರಾಕ್ಷಿ ತುಳಿಯುವ ಆಟ(ವೈನ್‌ ಸ್ಟಾಂಪಿಂಗ್‌), ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು, ಕುರುಕಲು ತಿಂಡಿ, ಆಹಾರ ಮಳಿಗೆಗಳು ಸಹ ಇರಲಿದ್ದು, ವಿವಿಧ ಕಂಪನಿಗಳಿಂದ ತಮ್ಮ ಬ್ರಾಂಡ್‌ನ‌ ರುಚಿ ನೋಡಲು ಕೊಡುವ ಉಚಿತ ವೈನ್‌ ಮೇಳದ ಮಜವನ್ನು ಹೆಚ್ಚಿಸಲಿವೆ.

ಇನ್ನು ದ್ರಾಕ್ಷಾರಸ ಮಂಡಳಿಯ ನೌಕರರು ಮೇಳದಲ್ಲಿ ಜನರಲ್ಲಿನ ವೈನ್‌ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸುವ, ಮದ್ಯದ ಬದಲು ವೈನ್‌ ಬಳಕೆ ಮಾಡುವಂತೆ ಜಾಗೃತಿ ಮೂಡಿಸುವ ಹಾಗೂ ಆರೋಗ್ಯಕ್ಕೆ ವೈನ್‌ ಯಾವ ರೀತಿ ಒಳಿತು ಎಂಬ ಅರಿವು ಮೂಡಿಸಲಿದೆ. ಜತೆಗೆ ಮನೆಯಲ್ಲಿಯೇ ವೈನ್‌ ಹೇಗೆ ತಯಾರಿಸಬೇಕು ಎಂಬುದರ ಕುರಿತು ಪ್ರಾತ್ಯಕ್ಷಿಕೆ ನೀಡಲಿದೆ.

ಈ ಬಾರಿ ಮೇಳದಲ್ಲಿ ವೈನೆರಿಗಳಿಗೆ ಒಂದಿನ ಪ್ರವಾಸ (ವೈನ್‌ ಟೂರಿಸಂ) ಕುರಿತು ಸಾಕಷ್ಟು ಪ್ರಚಾರ ನೀಡಲು ಮಂಡಳಿ ಚಿಂತನೆ ನಡೆಸಿದೆ. ಈ ಪ್ರವಾಸದಲ್ಲಿ ವೈನ್‌ದ್ರಾಕ್ಷಿ ಬೆಳೆಯುವ ಜಾಗ, ಯಾವ ರೀತಿ ವೈನ್‌ ತಯಾರಿಸುತ್ತಾರೆ, ಯಾವೆಲ್ಲ ಮಾದರಿಯ ವೈನ್‌ಗಳಿವೆ, ಯಾವ ಖಾದ್ಯಕ್ಕೆ ಯಾವ ವೈನ್‌ ಸೂಕ್ತ ಎಂಬೆಲ್ಲ ಅಂಶವನ್ನು ಖುದ್ದು ವೈನರಿಗಳಿಗೆ ಸಾರ್ವಜನಿಕರನ್ನು ಕರೆದುಕೊಂಡು ಹೋಗಿ ತೋರಿಸಲಾಗುತ್ತದೆ. 

ಎರಡು ಕೋಟಿ ರೂ. ವಹಿವಾಟು ನಿರೀಕ್ಷೆ: ಕಳೆದ ವರ್ಷದ ಮೇಳಕ್ಕೆ 10 ಸಾವಿರ ಜನ ಭೇಟಿ ನೀಡಿದ್ದು, 1.4 ಕೋಟಿ ರೂ. ವಹಿವಾಟು ನಡೆದಿತ್ತು. ಈ ಬಾರಿ ಮೇಳದಲ್ಲಿ 15 ಸಾವಿರ ಜನರನ್ನು ನಿರೀಕ್ಷಿಸಿದ್ದು, 2 ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಿದ್ದೇವೆ.

ಪ್ರಸ್ತುತ ರಾಜ್ಯದಲ್ಲಿ 20,253 ಹೆಕ್ಟೇರ್‌ ಪ್ರದೇಶದಲ್ಲಿ ರಾಜ್ಯದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ವಾರ್ಷಿಕ ಸುಮಾರು 4 ಲಕ್ಷ ಟನ್‌ ವೈನ್‌ದ್ರಾಕ್ಷಿ, 80 ಲಕ್ಷ ಲೀಟರ್‌ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದೆ. 17 ವೈನರಿಗಳು, 190 ವೈನ್‌ ಟಾವರಿನ್‌, 40 ವೈನ್‌ ಬೋಟಿಕ್‌ಗಳು ರಾಜ್ಯದಲ್ಲಿವೆ ಎಂದು ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ. ಸೋಮು ತಿಳಿಸಿದ್ದಾರೆ.

ಮೇಳದಲ್ಲಿ ಏನೆಲ್ಲಾ ಇರುತ್ತೆ?: ಮೂರು ದಿನ ನಡೆಯುವ ಮೇಳದಲ್ಲಿ ರಾಜ್ಯದ 17 ವೈನರಿಗಳು, ಅಮೆರಿಕ, ಆಸ್ಟ್ರೇಲಿಯ, ನೂಜಿಲೆಂಡ್‌ ಸೇರಿ ವಿವಿಧ ದೇಶಗಳ 12 ಕಂಪನಿಗಳು ತಮ್ಮ ಉತ್ಪನ್ನಗಳೊಂದಿಗೆ ಭಾಗವಹಿಸಲಿವೆ. ನಿತ್ಯ ಬೆಳಗ್ಗೆ 11 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮೇಳಕ್ಕೆ ಸಾರ್ವಜನಿಕರಿಗೆ ಪ್ರವೇಶವಿದ್ದು, ದಿನದ ಪ್ರವೇಶ ಶುಲ್ಕ 20 ರೂ. ನಿಗದಿ ಪಡಿಸಲಾಗಿದೆ.

ಮೇಳದಲ್ಲಿ ಗ್ರಾಹಕರು ಕೊಂಡುಕೊಳ್ಳುವ ವೈನ್‌ ದರದಲ್ಲಿ ಶೇ.10ರಿಂದ 15ರಷ್ಟು ರಿಯಾಯಿತಿ ನೀಡಲಾಗುತ್ತದೆ. ಪ್ರಮುಖವಾಗಿ ರೆಡ್‌ ವೈನ್‌, ವೈಟ್‌ ವೈನ್‌, ಫಾಕ್ಲಿಂಗ್‌ ವೈನ್‌, ಡೆಸೆರ್ಟ್‌ ವೈನ್‌, ಪ್ರೂಟ್‌ ವೈನ್‌ ಮಾದರಿಯ 150ಕ್ಕೂ ಹೆಚ್ಚು ಬ್ರಾಂಡ್‌ನ‌ ವೈನ್‌ಗಳು ಮೇಳದಲ್ಲಿರಲಿವೆ. ಕನಿಷ್ಠ 200 ರೂ. ನಿಂದ ಗರಿಷ್ಠ 50,000 ಬೆಲೆಯ ವೈನ್‌ ಮಾರಾಟಕ್ಕೆ ಉಂಟು ಎಂದು ದ್ರಾಕ್ಷಾರಸ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದರು.

* ಜಯಪ್ರಕಾಶ್‌ ಬಿರಾದಾರ್‌ 

Advertisement

Udayavani is now on Telegram. Click here to join our channel and stay updated with the latest news.

Next