Advertisement

ಬಿಆರ್‌ಟಿಎಸ್‌ನಿಂದ ಮಕ್ಕಳ ಟ್ರಾಫಿಕ್‌ ಪಾರ್ಕ್‌

04:08 PM Dec 16, 2022 | Team Udayavani |

ಹುಬ್ಬಳ್ಳಿ: ವರ್ಷದಿಂದ ವರ್ಷಕ್ಕೆ ಮಹಾನಗರದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆಯಾದರೂ ಸಂಚಾರ ನಿಯಮಗಳ ಪಾಲನೆ ಅಷ್ಟಕ್ಕಷ್ಟೇ. ಆಗಾಗ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರೂ ಫಲಿತಾಂಶ ಕಡಿಮೆ. ಹೀಗಾಗಿ ವಿದ್ಯಾರ್ಥಿ ಹಂತದಲ್ಲಿಯೇ ರಸ್ತೆ ಸುರಕ್ಷತಾ ಕ್ರಮಗಳು, ಸಂಚಾರ ನಿಯಮಗಳ ಬಗ್ಗೆ ಪ್ರಾತ್ಯಕ್ಷಿಕೆವಾಗಿ ತಿಳಿಸುವ ಉದ್ದೇಶದಿಂದ ಹು-ಧಾ ಬಿಆರ್‌ಟಿಎಸ್‌ ಕಂಪನಿ ಮಕ್ಕಳ ಟ್ರಾಫಿಕ್‌ ಪಾರ್ಕ್‌ ಒಳಗೊಂಡ ಬಹು ಉದ್ದೇಶಿತ ಉದ್ಯಾನ ನಿರ್ಮಾಣಕ್ಕೆ ಮುಂದಾಗಿದೆ.

Advertisement

ರಸ್ತೆ ಸುರಕ್ಷತಾ ಕ್ರಮಗಳು, ಸಂಚಾರ ನಿಯಮಗಳನ್ನು ತರಗತಿ ಕೊಠಡಿಯಲ್ಲಿ ಮಕ್ಕಳಿಗೆ ತಿಳಿಸಲಾಗುತ್ತಿದೆಯಾದರೂ ಅಷ್ಟೊಂದು ಪರಿಣಾಮಕಾರಿಯಲ್ಲ. ಹೀಗಾಗಿಯೇ ರಾಜ್ಯದ ಕೆಲ ನಗರಗಳಲ್ಲಿ ಈ ಟ್ರಾಫಿಕ್‌ ಪಾರ್ಕ್‌ಗಳನ್ನು ನಿರ್ಮಿಸಿ ಆ ಮೂಲಕ ಮಕ್ಕಳಿಗೆ ಅರಿವು ಮೂಡಿಸಲಾಗುತ್ತಿದೆ. ಆದರೆ ನವನಗರದಲ್ಲಿ ನಿರ್ಮಾಣವಾಗುತ್ತಿರುವ ಮಕ್ಕಳ ಟ್ರಾಫಿಕ್‌ ಉದ್ಯಾನ ರಾಜ್ಯದಲ್ಲೇ ಮೊದಲನೆ ಯದಾಗಿದೆ. ಈ ಉದ್ಯಾನ ನೈಜತೆಯ ಪ್ರತಿರೂಪದ ಮಾದರಿಯಾಗಿರುತ್ತದೆ. ಪಾಲಿಕೆ ಒಡೆತನದಲ್ಲಿರುವ ಜಾಗದಲ್ಲಿ ಈ ಟ್ರಾಫಿಕ್‌ ಪಾರ್ಕ್‌ ತಲೆ ಎತ್ತಲಿದೆ. ನವನಗರದ ಬಿಆರ್‌ಟಿಎಸ್‌ ಪಾದಚಾರಿ ಮೇಲ್ಸೇತುವೆಗೆ ಹೊಂದಿಕೊಂಡು ಈ ಉದ್ಯಾನ ನಿರ್ಮಾಣವಾಗಲಿದೆ. ಅಂದಾಜು 1.50 ಕೋಟಿ ರೂ. ವೆಚ್ಚದಲ್ಲಿ ಈ ಪಾರ್ಕ್‌ ನಿರ್ಮಾಣಗೊಳ್ಳಲಿದೆ.

ಪಾರ್ಕ್‌ನ ವಿಶೇಷವೇನು: ನವನಗರದಲ್ಲಿ ಬಿಆರ್‌ ಟಿಸ್‌ ನಿರ್ಮಿಸಲು ಮುಂದಾಗಿರುವ ಟ್ರಾಫಿಕ್‌ ಪಾರ್ಕ್‌ ಪುಣೆ, ಮುಂಬೈ ಮಹಾನಗರದಲ್ಲಿ ಕಾಣಬಹುದಾಗಿದೆ. ಅದೇ ಮಾದರಿಯಲ್ಲಿಯೇ ಇಲ್ಲಿನ ನಿರ್ಮಿಸಲು ಉದ್ದೇಶಿಸಲಾಗಿದೆ. ಮಕ್ಕಳಿಗೆ ಮನಮುಟ್ಟುವಂತೆ ರಸ್ತೆಗಳ ಸುರಕ್ಷತೆ ಕ್ರಮ ತಿಳಿಸುವ ಕಾರಣಕ್ಕೆ ವಾಸ್ತವ ರಸ್ತೆ, ಪಾದಚಾರಿ ಮಾರ್ಗ, ಟ್ರಾಫಿಕ್‌ ಸಿಗ್ನಲ್‌, ಜೀಬ್ರಾ ಕ್ರಾಸಿಂಗ್‌, ಸೈಕಲ್‌ ಮಾರ್ಗ, ಏಕ ಮುಖ ಸಂಚಾರ, ಜಂಕ್ಷನ್‌ ಸೇರಿದಂತೆ ಸಂಪೂರ್ಣ ಸಂಚಾರ ನಿಯಮಗಳನ್ನು ಒಳಗೊಂಡಿರುತ್ತದೆ. ಶಾಲೆ ವಿದ್ಯಾರ್ಥಿಗಳು ಹಾಗೂ ಉದ್ಯಾನಕ್ಕೆ ಬರುವವರು ತಮ್ಮ ಮಕ್ಕಳಿಗೆ ಈ ಸಂಚಾರ ನಿಯಮಗಳನ್ನು ಮಕ್ಕಳಿಗೆ ಕಲಿಸಬಹುದಾಗಿದೆ. ಇನ್ನು ಮಕ್ಕಳು ಈ ರಸ್ತೆಯಲ್ಲಿ ಓಡಾಡಿಕೊಂಡೇ ರಸ್ತೆ ನಿಯಮಗಳನ್ನು ಕಲಿಯಬಹುದಾಗಿದೆ.

ಆಟದ ಉದ್ಯಾನವೂ ಹೌದು: ಪ್ರಮುಖವಾಗಿ ಮಕ್ಕಳ ಟ್ರಾಫಿಕ್‌ ಪಾರ್ಕ್‌ ಆಗಿದ್ದರೂ ಅಲ್ಲಿ ಆಟದ ಉದ್ಯಾನವೂ ಆಗಲಿದೆ. ಪೋಷಕರು-ಮಕ್ಕಳಿಗಾಗಿ ಉತ್ತಮ ಸ್ಥಳವಾಗಿ ನಿರ್ಮಾಣವಾಗಲಿದೆ. ವಯಸ್ಕರರು ಮನಶಾಂತಿಗಾಗಿ ಈ ಉದ್ಯಾನ ಬಯಸಿದರೆ ಮಕ್ಕಳಿಗೆ ಆಟದ ಉದ್ಯಾನವಾಗಿಯೂ ರೂಪಗೊಳ್ಳಲಿದೆ. ಮಕ್ಕಳ ಕ್ರೀಡೆ-ದೈಹಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೆಲ ಆಟಿಕೆ ಸಾಮಗ್ರಿ ಇರಲಿವೆ. ವಯಸ್ಸಿಗೆ ಅನುಗುಣವಾಗಿ ಆಟದ ಸ್ಥಳಗಳು ನಿರ್ಮಾಣವಾಗಲಿವೆ. ಅಂಗವಿಕಲ ಮಕ್ಕಳಿಗೆಗಾಗಿಯೇ ಪ್ರತ್ಯೇಕ ಆಟದ ಸ್ಥಳ ಇರಲಿದೆ.

ಟ್ರಾಫಿಕ್‌ ಪಾರ್ಕ್‌ ನಿರ್ಮಿಸಲು ಉದ್ದೇಶಿಸಿರುವ ಸ್ಥಳಕ್ಕೆ ಹೊಂದಿಕೊಂಡು ಮಹಾನಗರ ಪಾಲಿಕೆ ಈಗಾಗಲೇ ಉದ್ಯಾನವೊಂದನ್ನು ಅಭಿವೃದ್ಧಿಗೊಳಿಸಿದೆ. ಇದೀಗ ಉಳಿದಿರುವ ದೊಡ್ಡ ಜಾಗದಲ್ಲಿ ಬಿಆರ್‌ ಟಿಎಸ್‌ ಉದ್ಯಾನ ನಿರ್ಮಿಸಲಿದೆ. ಈಗಿರುವ ಬೃಹದಾಕಾರದ ಮರಗಳನ್ನು ಉಳಿಸಿಕೊಂಡು ನೀಲನಕ್ಷೆ ಸಿದ್ಧವಾಗುತ್ತಿದೆ. ವೀಕ್ಷಣಾ ಸ್ಥಳ, ತೆರೆದ ಜಿಮ್‌, ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ವೇದಿಕೆ, ವಾಯು ವಿಹಾರ ಮಾರ್ಗ, ಮಳೆ ನೀರು ಕೋಯ್ಲು, ವಿವಿಧ ಉದ್ದೇಶಕ್ಕಾಗಿ ತೆರೆದ ಸಭಾಂಗಣ, ವಾಹನ ಪಾರ್ಕಿಂಗ್‌, ಶೌಚಾಲಯ ಸೇರಿದಂತೆ ಹಲವು ಸೌಲಭ್ಯ ಹೊಂದಿರುತ್ತದೆ. ಪ್ರಮುಖವಾಗಿ ಔಷಧಿ ಉದ್ಯಾನ ನಿರ್ಮಾಣ ಸೇರಿದಂತೆ ಒಟ್ಟು ಮೂರು ಭಾಗದಲ್ಲಿ ಈ ಉದ್ಯಾನ ಸಿದ್ಧವಾಗಲಿದೆ.

Advertisement

ಉದ್ಯಾನ ನಿರ್ಮಾಣಕ್ಕಾಗಿ ಈಗಾಗಲೇ ಮಹಾನಗರ ಪಾಲಿಕೆಯೊಂದಿಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಬಿಆರ್‌ಟಿಎಸ್‌ ಭರಿಸಲಿದೆ. ಬಿಆರ್‌ಟಿಎಸ್‌ ಮಾರ್ಗಕ್ಕೆ ಹೊಂದಿಕೊಂಡಿರುವ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಒಂದು ತಿಂಗಳಲ್ಲಿ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ. ನಿರ್ಮಾಣ ನಂತರ ಉದ್ಯಾನ ನಿರ್ವಹಣೆ, ಪ್ರವೇಶ ಶುಲ್ಕ ಸೇರಿದಂತೆ ಇತರೆ ಅಂಶಗಳ ಬಗ್ಗೆ ನಿರ್ಧರವಾಗಲಿವೆ. ಸಂಚಾರ ನಿಯಮಗಳ ಉಲ್ಲಂಘನೆ, ರಸ್ತೆ ಅಪಘಾತಗಳಲ್ಲಿ ಸಾವು-ನೋವು ಸಂಭವಿಸುತ್ತಿ ರುವ ವಯೋಮಾನ ನೋಡಿದಾಗ 18-25 ವರ್ಷದೊಳಗಿನವರು ಹೆಚ್ಚು. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಂತಹ ಉದ್ಯಾನ ಅಗತ್ಯವಾಗಿದ್ದು, ಅಂದುಕೊಂಡಂತೆ ವಿವಿಧೋದ್ದೇಶ ಉದ್ಯಾನ ನಿರ್ಮಾಣವಾದರೆ ಇದೊಂದು ವಿಶೇಷ ತಾಣವಾಗಲಿದೆ.

ವಿವಿಧ ಉದ್ದೇಶ ಹೊಂದಿರುವ ಉದ್ಯಾನ ನಿರ್ಮಾಣಕ್ಕೆ ಬಿಆರ್‌ ಟಿಎಸ್‌ ಮುಂದಾಗಿದೆ. ಪ್ರಮುಖವಾಗಿ ಮಕ್ಕಳ ಟ್ರಾಫಿಕ್‌ ಪಾರ್ಕ್‌ ಆಗಿದ್ದು, ಇದರಿಂದ ಮಕ್ಕಳ ಹಂತದಿಂದಲೇ ರಸ್ತೆ ಸುರಕ್ಷತಾ ನಿಯಮ ಕಲಿಸಬಹುದಾಗಿದೆ. ಈ ಉದ್ಯಾನ ನಿರ್ಮಾಣಕ್ಕೆ ಬೇಕಾದ ಅನುದಾನ ಹಂಚಿಕೆಯಾಗಿದೆ. ಬಿಆರ್‌ ಟಿಎಸ್‌ ಕಾರಿಡಾರ್‌ಗೆ ಹೊಂದಿಕೊಂಡು ಇರುವುದರಿಂದ ಇದೊಂದು ವಿಶೇಷ ತಾಣವಾಗಿ ಮಾರ್ಪಾಡಲಾಗಿದೆ.  -ಎಸ್‌.ಭರತ, ವ್ಯವಸ್ಥಾಪಕ ನಿರ್ದೇಶಕ, ಹು-ಧಾ ಬಿಆರ್‌ಟಿಎಸ್‌

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next