ಒಂದು ಊರಿನಲ್ಲಿದ ರೈತ ರಾಮ. ಅವನ ಬಳಿ ಪುಟ್ಟದೊಂದು ತಾಯಿಯನ್ನು ಕಳೆದುಕೊಂಡಿದ್ದ ಕರು ಇತ್ತು. ಆ ಕುರುವಿಗೆ ದಾಸಿ ಎಂದು ಹೆಸರಿಟ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ದಾಸಿಗೂ ರಾಮನ ಮೇಲೆ ವಿಶೇಷ ಪ್ರೀತಿಯಿತ್ತು.
ಒಂದು ದಿನ ದಾಸಿ ತೋಟದಲ್ಲಿ ಹುಲ್ಲು ತಿನ್ನುತ್ತಿದ್ದಾಗ ವಿಷದ ಹಾವೊಂದು ರಾಮನನ್ನು ಕಡಿಯಲು ಕಾಯುತ್ತಿದ್ದುದನ್ನು ನೋಡುತ್ತಾಳೆ. ಕೂಡಲೇ ಅದರ ಬಳಿ ಹೋಗಿ ಹಾವನ್ನು ತನ್ನ ಕಾಲಿನಿಂದ ಜಜ್ಜಿ ಕೊಲ್ಲುತ್ತಾಳೆ. ರಾಮನಿಗೆ ಇದರಿಂದ ದಾಸಿಯ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತದೆ. ಹೀಗೆ ದಿನ ಕಳೆದಂತೆ ದಾಸಿ ದೊಡ್ಡವಳಾಗುತ್ತಾಳೆ. ರಾಮ ಅವಳಿಗಾಗಿ ಗೌರಿ, ಕಾಶಿ ಎನ್ನುವ ಜತೆಗಾರರನ್ನೂ ತರುತ್ತಾನೆ. ಆರಂಭದಲ್ಲಿ ದಾಸಿಗೆ ಇದರಿಂದ ಬೇಸರವಾದರೂ ಮತ್ತೆ ಹೊಂದಿಕೊಳ್ಳುತ್ತಾಳೆ. ಗೌರಿ, ಕಾಶಿಗೆ ರಾಮ ಹೆಚ್ಚಾಗಿ ಪ್ರೀತಿಸುತ್ತಿದ್ದ ದಾಸಿಯ ಮೇಲೆ ವಿಪರೀತ ಅಸೂಯೆ ಮೂಡುತ್ತದೆ. ಅದನ್ನು ತೋರಿಸಿಕೊಡದಿದ್ದರೂ ಮನದೊಳಗೆ ದಾಸಿಯನ್ನು ಹೀಯಾಳಿಸುತ್ತಿರುತ್ತದೆ.
ಕಾಡಿಗೆ ಮೇಯಲು ಹೋದ ಗೌರಿ ಮತ್ತು ಕಾಶಿಯು ದಾಸಿಯ ದಾರಿ ತಪ್ಪಿಸಿ ದಟ್ಟ ಅರಣ್ಯ ಸೇರುವಂತೆ ಮಾಡುತ್ತಾರೆ. ರಾತ್ರಿಯಿಡೀ ಕಾಡಿನಲ್ಲಿ ಅಲೆದು ಸುಸ್ತಾಗಿ ಒಂದು ಮರದ ಕೆಳಗೆ ಮಲಗಿದ ದಾಸಿಗೆ ರಾಮನ ನೆನಪಾಗಿ ಅಳು ಬರುತ್ತದೆ. ಅಷ್ಟರಲ್ಲಿ ದುಷ್ಟ ಹುಲಿಯೊಂದು ದಾಸಿಯ ಎದುರು ನಿಲ್ಲುತ್ತದೆ. ಇದರಿಂದ ಭಯಭೀತಳಾದ ದಾಸಿ ಏನು ಮಾಡಬೇಕೆಂದು ತೋಚದೆ ತನ್ನ ಸಂಕಷ್ಟವನ್ನೆಲ್ಲ ಹುಲಿಯ ಮುಂದೆ ತೋಡಿಕೊಳ್ಳುತ್ತದೆ. ಆದರೆ ಅದಕ್ಕೆ ಕರುಣೆಯೇ ಬರುವುದಿಲ್ಲ. ಅಷ್ಟರಲ್ಲಿ ಬೇಟೆಗಾರರು ಹುಲಿಗೆ ಬಾಣ ಹೂಡಿರುವುದನ್ನು ನೋಡಿದ
ದಾಸಿ ಹುಲಿಗೆ ಅಡ್ಡಳಾಗಿ ನಿಂತು ಬಾಣ ತನಗೆ ನಾಟುವಂತೆ ಮಾಡುತ್ತದೆ. ಕೂಡಲೇ ಎಚ್ಚೆತ್ತುಕೊಂಡ ಹುಲಿ ಬೇಟೆಗಾರರನ್ನು ಅಲ್ಲಿಂದ ಅಟ್ಟಿಸುತ್ತದೆ. ಅನಂತರ ದಾಸಿಯ ಬಳಿ ಬಂದಾಗ ಅವಳ ಕಾಲಲ್ಲಿ ರಕ್ತ ಒಸರುವುದು ನೋಡಿ, ಛೇ ಇವಳನ್ನು ತಿನ್ನಲು ನಾನು ಬಯಸಿದೆನಲ್ಲ. ಇವಳು ತನ್ನ ಪ್ರಾಣವನ್ನು ರಕ್ಷಿಸಿದಳು ಎಂದುಕೊಂಡು ದಾಸಿಯ ಗಾಯಕ್ಕೆ ಔಷಧವನ್ನು ತಂದು ಹಚ್ಚಿ ಅವಳು ಬೇಗನೆ ಚೇತರಿಸುವಂತೆ ಮಾಡುತ್ತದೆ.
ಇತ್ತ ವಾರ ಕಳೆದರೂ ದಾಸಿ ಮನೆಗೆ ಬಾರದೆ ಇರುವುದನ್ನು ನೋಡಿ ನೊಂದಿದ್ದ ರಾಮನು ಕಾಶಿ, ಗೌರಿಗೂ ಸರಿಯಾಗಿ ಆಹಾರ, ನೀರು ಕೊಡುತ್ತಿರಲಿಲ್ಲ. ಇದರಿಂದ ತಮ್ಮ ತಪ್ಪಿನ ಅರಿವಾದ ಕಾಶಿ ಮತ್ತು ಗೌರಿ ಒಂದು ದಿನ ಕಾಡಿಗೆ ಹೋಗುತ್ತಾರೆ. ಆಗ ಅಲ್ಲಿ ದಾಸಿಯು ಹುಲಿಯೊಂದಿಗೆ ಆಟವಾಡುವುದು ನೋಡಿ ಹೆದರುತ್ತಾರೆ. ಕೂಡಲೇ ದಾಸಿ ಅವರ ಗುರುತು ಹಿಡಿದು ಹುಲಿಗೆ ಅವರನ್ನು ಪರಿಚಯಿಸುತ್ತಾರೆ. ಗೌರಿ, ಕಾಶಿಗೆ ತುಂಬಾ ದುಃಖವಾಗಿ ತಮ್ಮ ತಪ್ಪಿಗೆ ದಾಸಿಯಲ್ಲಿ ಕ್ಷಮೆ ಕೇಳಿ ಅವಳನ್ನು ಮನೆಗೆ ಕರೆದುಕೊಂಡು ಬರುತ್ತಾರೆ. ಇದರಿಂದ ರಾಮನಿಗೆ ವಿಪರೀತ ಸಂತೋಷವಾಗುತ್ತದೆ. ಅಂದಿನಿಂದ ಅವನು ದಾಸಿಯಂತೆ ಗೌರಿ, ಕಾಶಿಯನ್ನೂ ಪ್ರೀತಿಸ ತೊಡಗುತ್ತಾನೆ.
-ರಿಷಿಕಾ