ಗದಗ: ಸ್ಥಳೀಯ ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿಯ ಧಾರವಾಡದ ಬಾಲವಿಕಾಸ ಅಕಾಡೆಮಿ ಮತ್ತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಬಾರಿಗೆ ನಡೆಸಿದ ರಾಜ್ಯಮಟ್ಟದ “ಮಕ್ಕಳ ಚಿತ್ರ ಕಲೋತ್ಸವ’ (ಚಿಣ್ಣರ ಚಿತ್ರ ಚಿತ್ತಾರ)ದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಸಮಾರಂಭ ಡಿ. 5ರಂದು ನಗರದಲ್ಲಿ ನಡೆಯಲಿದೆ ಎಂದು ಸಮಿತಿ ಗೌರವ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಎಪಿಎಂಸಿ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಕಳೆದ ಅ.14ರಂದು ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಆಯಾ ಶಾಲಾ ಮಟ್ಟ, ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಈ ಚಿತ್ರ ಸ್ಪರ್ಧೆ ನಡೆಸಲಾಗಿದ್ದು, ಇದೀಗ ಅವುಗಳ ಮೌಲ್ಯಮಾಪನ ನಡೆಯುತ್ತಿದೆ ಎಂದರು.
ಎಲ್.ಕೆ.ಜಿ.ಯಿಂದ 2ನೇ ತರಗತಿ, ಮೂರರಿಂದ 5ನೇ ತರಗತಿ, 6ರಿಂದ 8ನೇ ತರಗತಿ ಮತ್ತು 9ರಿಂದ 12ನೇ ತರಗತಿ ಹೀಗೆ ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗಿದೆ. ಪ್ರತಿ ವಿಭಾಗದಲ್ಲೂ 75 ಬಹುಮಾನಗಳಂತೆ ಒಟ್ಟು 300 ಮಕ್ಕಳಿಗೆ ಪ್ರಶಸ್ತಿ ಸಿಗಲಿದೆ. ಪ್ರತಿ ಪ್ರಶಸ್ತಿಯು 3 ಸಾವಿರ ರೂ. ನಗದು, 3 ಸಾವಿರ ರೂ. ಮೌಲ್ಯದ ವಿಶಿಷ್ಟ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಅಷ್ಟೇ ಅಲ್ಲ, ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿ ಮಗುವಿಗೂ ಭಾಗವಹಿಸಿದ ಪ್ರಮಾಣ ಪತ್ರ ಹಾಗೂ ಒಂದು ಸ್ಮರಣಿಕೆ ಸಿಗಲಿದೆ ಎಂದು ವಿವರಿಸಿದರು.
ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಸಂಸ್ಥಾಪಕ ಅಧ್ಯಕ್ಷ ವಿಜಯ ಕಿರೇಸೂರ ಮಾತನಾಡಿ, ಸ್ಪರ್ಧೆಯಲ್ಲಿ ರಾಜ್ಯಾದ್ಯಂತ 41,436 ಜನ ಮಕ್ಕಳು ಭಾಗವಹಿಸಿದ್ದರು.
ಸ್ಪರ್ಧೆ ವಿಜೇತ 300 ಜನ ಮಕ್ಕಳಿಗೆ ಖ್ಯಾತ ಕಲಾವಿದರಾದ ಮೈಕೆಲ್ ಎಂಜಿಲೋ, ರವಿವರ್ಮ, ಎಸ್.ಕೆ. ಚಟ್ಟಿ, ಟಿ.ಪಿ. ಅಕ್ಕಿ ಸೇರಿದಂತೆ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಇದರ ಮತ್ತೂಂದು ವಿಶೇಷ ಎಂದರು.
ಡಿ. 5ರಂದು ನಡೆಯುವ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ, ಶಾಸಕ ಎಚ್.ಕೆ. ಪಾಟೀಲ ಸೇರಿ ಹಲವರು ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೂ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.
ಮಕ್ಕಳ ಕಲಿಕೆ ಆರಂಭವಾಗುವುದೇ ಚಿತ್ರಗಳ ಮೂಲಕ. ಮಕ್ಕಳಲ್ಲಿ ಚಿತ್ರಕಲೆ ಪ್ರೋತ್ಸಾಹಿಸುವ ಉದ್ದೇಶದಿಂದ ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆಯ ಈ ಯತ್ನ ಇತರರಿಗೂ ಮಾದರಿ.
-ಎಸ್.ವಿ. ಸಂಕನೂರ, ವಿಪ ಸದಸ್ಯರು
“ಮಕ್ಕಳ ಚಿತ್ರ ಕಲೋತ್ಸವ’ ಸ್ಪರ್ಧೆಯಲ್ಲಿ ವಿಜೇತ 300 ಮಕ್ಕಳ ಕಲಾಕೃತಿಗಳನ್ನು ಮಳಿಗೆಗಳಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಅವರ ಪರಿಚಯ ಕೂಡ ಅದರಲ್ಲಿ ಒಳಗೊಂಡಿರುತ್ತದೆ. –
ವಿಜಯ ಕಿರೇಸೂರ, ಸಂಸ್ಥಾಪಕ ಅಧ್ಯಕ್ಷ, ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ