ಮೈಸೂರು: ದಸರಾ ಮಹೋತ್ಸವದಲ್ಲಿ ಚಿಣ್ಣರ ಸಂಭ್ರಮಕ್ಕೆ ವೇದಿಕೆ ಸಜ್ಜುಗೊಂಡಿದ್ದು, ಸೆ.29 ಮತ್ತು 30ರಂದು ಜಗನ್ಮೋಹನ ಅರಮನೆ ಆವರಣದಲ್ಲಿ ಮಕ್ಕಳ ದಸರಾ ಆಯೋಜಿಸಲಾಗಿದೆ. ನಾಡಹಬ್ಬದಲ್ಲಿ ಮಕ್ಕಳನ್ನು ಭಾಗಿಯಾಗಿಸುವ ಉದ್ದೇಶ ದೊಂದಿಗೆ ಮಕ್ಕಳ ದಸರಾ ಆಯೋಜಿಸಲಾಗಿದ್ದು, ಹಲವು ಸ್ಪರ್ಧೆ ನಡೆಸಿ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಗುತ್ತಿದೆ.
ನವರಾತ್ರಿಯಲ್ಲಿ ಮಕ್ಕಳ ರಂಜನೆಗೆ ಕಾರ್ಯಕ್ರಮಗಳು ರೂಪುಗೊಂಡಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿರುವ ಮಕ್ಕಳ ದಸರಾಗೆ ಸೆ.29ರಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಚಾಲನೆ ನೀಡಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಮೇಯರ್ ಶಿವಕುಮಾರ್ ಭಾಗವಹಿಸಲಿದ್ದಾರೆ.
ಜಿಲ್ಲೆಯ 1 ಸಾವಿರ ಮಕ್ಕಳು, 200 ಶಿಕ್ಷಕರು ಸಾಂಸ್ಕೃತಿಕ ಸ್ಪರ್ಧೆ, ದೇಸಿ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಚಿತ್ರಕಲೆ, ವೇಷಭೂಷಣ, ಪ್ರಬಂಧ ರಚನೆ, ಆಶುಭಾಷಣ ಸೇರಿ 18 ಸ್ಪರ್ಧೆ ಸಂಘಟಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ತಿಳಿಸಿದರು. ಈವೇಳೆ ಮಕ್ಕಳೇ ಆಕರ್ಷಕ ವಸ್ತುಪ್ರದರ್ಶನ ಏರ್ಪಡಿಸಲು ಅವಕಾಶ ಕಲ್ಪಿಸಲಾಗಿದ್ದು, ಪ್ರತಿ ತಾಲೂಕಿಗೆ ಒಂದೊಂದು ಮಳಿಗೆ ನೀಡಲಾಗಿದೆ. ವಸ್ತು ಪ್ರದರ್ಶನದಲ್ಲಿ ಕಲೆ, ಸಾಹಿತ್ಯ, ವಿಜ್ಞಾನ ಮತ್ತು ಕರಕುಶಲ ಕಲೆಗಳು ಅನಾವರಣಗೊಳ್ಳಲಿವೆ.
ಮಕ್ಕಳ ದಸರಾ ದರ್ಶನ: ಸೆ.26ರಿಂದ ಅ.1ರವರೆಗೆ ಶಾಲಾ ಮಕ್ಕಳ ದಸರಾ ದರ್ಶನ ನಡೆಯಲಿದ್ದು, 7, 8 ಮತ್ತು 9ನೇ ತರಗತಿಯ ಸರ್ಕಾರಿ ಶಾಲೆಯ ಪ್ರತಿಭಾವಂತ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಎಲ್ಲಾ 33 ಹೋಬಳಿಯಲ್ಲಿ ತಲಾ ಒಂದು ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಬಸ್ಸಿನಲ್ಲಿ 50 ಮಕ್ಕಳು, ಮೂವರು ಮಾರ್ಗದರ್ಶಕ ಶಿಕ್ಷಕರು ಆಗಮಿಸಲಿದ್ದು, ಮೃಗಾಲಯ, ಅರಮನೆ, ಜಗನ್ಮೋಹನ ಅರಮನೆ ಮುಂತಾದ ಸ್ಥಳಗಳನ್ನು ವೀಕ್ಷಣೆ ಮಾಡಲಿದ್ದಾರೆ. ಒಟ್ಟು 1650 ವಿದ್ಯಾರ್ಥಿಗಳು ದಸರಾ ವೇಳೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.
ಸೆ.26ರಂದು ಎಚ್.ಡಿ.ಕೋಟೆ, ಸರಗೂರು ತಾಲೂಕುಗಳ 5 ಹೋಬಳಿ, ಸೆ. 27ರಂದು ಹುಣಸೂರು ತಾಲೂಕಿನ 4 ಹೋಬಳಿ, ಸೆ. 28ರಂದು ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ 6 ಹೋಬಳಿ, ಸೆ. 29ರಂದು ಮೈಸೂರು ತಾಲೂಕಿನ 4 ಹೋಬಳಿ, ನಂಜನಗೂಡು ತಾಲೂಕಿನ 5 ಹೋಬಳಿ, ಅ. 1ರಂದು ಪಿರಿಯಾಪಟ್ಟಣ ತಾಲೂಕಿನ 4 ಹೋಬಳಿ ಹಾಗೂ ತಿ.ನರಸೀಪುರ ತಾಲೂಕಿನ 5 ಹೋಬಳಿಯ ಮಕ್ಕಳು ದಸರಾ ದರ್ಶನದಲ್ಲಿ ಭಾಗವಹಿಸಲಿದ್ದಾರೆ.
ಸೆಲಿಬ್ರಿಟಿ ಮಕ್ಕಳಿಗೆ ಆಹ್ವಾನವಿಲ್ಲ: 2019ಕ್ಕೂ ಮೊದಲು ಮಕ್ಕಳ ದಸರಾಗೆ ಸೆಲಿಬ್ರಿಟಿ ಮಕ್ಕಳನ್ನು ಆಹ್ವಾನಿಸಲಾಗುತ್ತಿತ್ತು. ಸಿನಿಮಾ ಮತ್ತು ಕಿರುತೆರೆಯಲ್ಲಿ ಮಿಂಚಿದ ಮಕ್ಕಳ ಆಹ್ವಾನದಿಂದ ಉಳಿದ ಮಕ್ಕಳಿಗೆ ಸ್ಫೂರ್ತಿ ಬರುತ್ತಿತ್ತು. ಈ ವರ್ಷ ಅದ್ಧೂರಿ ದಸರಾ ಆಚರಣೆಯಾದರೂ ಅನುದಾನದ ಕೊರತೆಯಿಂದ ಸೆಲಬ್ರಿಟಿ ಮಕ್ಕಳನ್ನು ಆಹ್ವಾನಿಸುತ್ತಿಲ್ಲ. ಜಿಲ್ಲಾ ಮಟ್ಟದ ಬಾಲಶ್ರೀ ಪ್ರಶಸ್ತಿ ಪಡೆದ ಮಕ್ಕಳನ್ನು ಆಹ್ವಾನಿಸಲು ಮಕ್ಕಳ ದಸರಾ ಸಮಿತಿ ಚಿಂತನೆ ನಡೆಸಿದೆ.