ಕೋಲಾರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಸರ್ಕಾರ ಸೂಕ್ತ ಕ್ರಮವನ್ನು ತೆಗೆದುಕೊಂಡಿದ್ದು, ಮಕ್ಕಳು ಯಾವುದೇ ಆತಂಕ ಪಡುವುದು ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ತಿಳಿಸಿದರು. ತಾಲೂಕಿನ ವಡಗೂರು ಗ್ರಾಮದಲ್ಲಿ ಪಂಚಾಯ್ತಿಯಿಂದ ನಿರ್ಮಿಸಿರುವ ರಾಜೀವ್ ಗಾಂಧಿ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ತಜ್ಞರ ಅಭಿಪ್ರಾಯ ಪಡೆದು ಎಲ್ಲರ ವಿಶ್ವಾಸ ಪಡೆದು, ಸರ್ಕಾರ ಪರೀಕ್ಷೆ ನಡೆಸುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಎರಡು ಗಂಟೆಗಳ ಮುಂಚಿತವಾಗಿ ಕಳುಹಿಸಬೇಕೆಂದು ಅವರು ವಿನಂತಿಸಿದರು.
ವಿದ್ಯಾರ್ಥಿಗಳೊಂದಿಗೆ ಆಗಮಿಸುವ ಪೋಷಕರು 200 ಮೀಟರ್ ದೂರದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಇರಲು ಅವಕಾಶ ಕಲ್ಪಿಸಿದೆ. ಪ್ರತಿ ವಿದ್ಯಾರ್ಥಿಯನ್ನು ಥರ್ಮಲ್ ಪರೀಕ್ಷೆಗೆ ಒಳಪಡಿಸಿ ಪರೀಕ್ಷಾ ಕೇಂದ್ರ ಒಳಗೆ ಕಳುಹಿಸಲಾಗುವುದು, ಪ್ರತಿ ವಿದ್ಯಾರ್ಥಿಗೆ ಎರಡು ಮಾಸ್ಕ್ ವಿತರಿಸಲಾಗುತ್ತದೆ ಎಂದು ಅವರು ವಿವರಿಸಿದರು. ಎಸ್‌ಎಸ್ ಎಲ್‌ಸಿ ಪರೀಕ್ಷೆ ಸೂಕ್ತವಾಗಿ ನಡೆಸಲು ನಿರ್ಧಾರ ತೆಗೆದುಕೊಂಡಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಬರೆಯಲಿ, ಆತಂಕವಿಲ್ಲದೆ ಪರೀ ಕ್ಷೆ ಬರೆಯಲು ಪೋಷಕರು ಮಕ್ಕಳಿಗೆ ಧೈರ್ಯ ತುಂಬಿ ಎಂದು ಕಿವಿಮಾತು ಹೇಳಿದರು.
ಬಿಸಿ ನೀರು ವ್ಯವಸ್ಥೆ: ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಸರ್ ಮಾಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸೆಂಟರ್ ಗಳಿಗೆ ಬರಲು ಉಚಿತ ಸಾರಿಗೆ ವ್ಯವಸ್ಥೆ ಮಾಡಿದ್ದು, ಮಾಸ್ಕ್ ನೀಡಲಾಗುವುದು ಹಾಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ವಿದ್ಯಾರ್ಥಿಗಳು ಮರೆಯದೆ ಬಿಸಿ ನೀರು ತಂದು ಆಗಾಗ ಕುಡಿಯಿರಿ, ಪರೀಕ್ಷಾ ಕೇಂದ್ರಗಳಲ್ಲಿಯೂ ಬಿಸಿನೀರು ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸಲಹೆ ನೀಡಿದರು.
ಜಾಲಪ್ಪ ಆಸ್ಪತ್ರೆಯ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಕೋವಿಡ್ 19 ವೈರಸ್ ತಗುಲಿದ್ದು, ಇಲ್ಲಿನ ವಾತಾವರಣವು ಭಯಭೀತವಾಗಿದೆ. ಆದ್ದರಿಂದ ವೈರಾಣುವನ್ನು ನಿಯಂತ್ರಿಸಲು ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಧಿ ಕಾರಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಇಲಾಖೆಯಲ್ಲಿ ನಡೆದಿರುವ ವರ್ಗಾವಣೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಕೆಲವರ ವರ್ಗಾವಣೆ ವಿಚಾರವಾಗಿ ನನ್ನ ಮತ್ತು ನನ್ನ ಮಗನ ಹೆಸರು ಕೇಳಿ ಬರುತ್ತಿರುವುದು ಸತ್ಯಕ್ಕೆ ದೂರವಾದ ಮಾತಾಗಿದೆ ಎಂದು ಸ್ಪಷ್ಟನೆ ನೀಡಿದರು. ತಾನು ಯಾವುದೇ ವರ್ಗಾವಣೆ ಮಾಡಿಲ್ಲ, ಅದರಲ್ಲಿ ನಮ್ಮ ಪಾತ್ರವಿಲ್ಲ.
ಮುಖ್ಯಮಂತ್ರಿಯವರ ಆದೇಶದ ಮೇರೆಗೆ ಅವಶ್ಯಕತೆ ಇರುವ ಸ್ಥಳಗಳಿಗೆ ವರ್ಗಾಯಿಸಲಾಗಿದೆ ಎಂದು ಸಮರ್ಥಿಸಿಕೊಂಡರು. ಈ ವೇಳೆ ವಡಗೂರು ಗ್ರಾಮದ ಕೋವಿಡ್ 19 ವಾರಿಯರ್ಸ್ ಗಳಾದ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ತಾಪಂ ಅಧ್ಯಕ್ಷ ಸೂಲೂರು ಆಂಜನಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ವಡಗೂರು ಡಿ.ಎಲ್.ನಾಗರಾಜ್, ವಡಗೂರು ಗ್ರಾಪಂ ಅಧ್ಯಕ್ಷೆ ಪದ್ಮಾವತಿ ಆನಂದ್, ಸದಸ್ಯರು ಉಪಸ್ಥಿತರಿದ್ದರು.