Advertisement

ಕಲಬುರಗಿಯಲ್ಲಿ ಶಾಲೆ ಬಿಟ್ಟು ಕೂಲಿಗೆ ಹೊರಟ ಮಕ್ಕಳು

06:15 AM Aug 23, 2018 | |

ವಾಡಿ (ಕಲಬುರಗಿ): ಪಾಟಿ ಚೀಲ ಹೊತ್ತು ಶಾಲೆಗೆ ಹೋಗಬೇಕಿದ್ದ ಮಕ್ಕಳು ಬುಟ್ಟಿ ಚೀಲ ಹೊತ್ತು ಕೂಲಿ ಕೆಲಸಕ್ಕೆ ಹೊರಡುತ್ತಿದ್ದಾರೆ!

Advertisement

ಹತ್ತಾರು ದಿನಗಳಿಂದ ಪಟ್ಟಣ ವ್ಯಾಪ್ತಿಯಲ್ಲಿ ಜಿಟಿಜಿಟಿ ಮಳೆಯಾಗಿದ್ದು, ಭೂಮಿ ಹಸಿಯಾಗಿ ಬೆಳೆಗಳು ಹಸಿರಾಗಿವೆ. ಮೋಡಗಳು ಮರೆಯಾಗಿ ಆಗಸ ತಿಳಿಯಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಪಟ್ಟಣ ಸೇರಿದಂತೆ ನಾಲವಾರ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮುಂಗಾರು ಬೆಳೆಗಳ ರಾಶಿ ಕಾರ್ಯ ಭರದಿಂದ ನಡೆಯುತ್ತಿದ್ದು, ಹೆಸರು ಬೆಳೆಯ ಫಸಲು ಬಿಡಿಸಲು ಬಾಲಕ, ಬಾಲಕಿಯರು ಕೃಷಿ ಕೂಲಿ ಕಾರ್ಮಿಕರಾಗಿ ತೆರಳುತ್ತಿದ್ದಾರೆ.

ಹೆಸರು ರಾಶಿಗೆ ಹೆಚ್ಚು ಕೂಲಿ ಕೊಟ್ಟು ಮಹಿಳೆಯರನ್ನು ಬಳಸಿಕೊಳ್ಳಲಾಗದೆ, ತೊಗರಿ ಸಾಲುಗಳ ಮಧ್ಯೆ ಬೆಳೆದು ನಿಂತ ಕಸ ಕೀಳಲು ಶಾಲಾ ಮಕ್ಕಳನ್ನು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕೃಷಿ ಕೆಲಸಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಬಳವಡಗಿ, ಕೊಂಚೂರ, ನಾಲವಾರ, ಕೊಲ್ಲೂರ, ಸನ್ನತಿ, ಕಡಬೂರ, ಶಾಂಪುರಹಳ್ಳಿ, ಕನಗನಹಳ್ಳಿ ಭಾಗಗಳಲ್ಲಿ ಮಕ್ಕಳ ಬಳಕೆ ಜೋರಾಗಿದೆ.

ಬೆಳಗ್ಗೆ ಎದ್ದು ಶಾಲೆ ಬ್ಯಾಗ್‌ ಹೊತ್ತು ಶಾಲೆಯತ್ತ ಹೆಜ್ಜೆ ಹಾಕಬೇಕಿದ್ದ 12-13 ವಯಸ್ಸಿನ ವಿದ್ಯಾರ್ಥಿಗಳು ಟಂಟಂ, ಆಟೋ ವಾಹನಗಳನ್ನು ಹತ್ತಿ, ಹೊಲ ಗದ್ದೆಗಳತ್ತ ಹೊರಡುತ್ತಿದ್ದಾರೆ. ದಿನಗೂಲಿಗಾಗಿ ಮಕ್ಕಳನ್ನು ಶಾಲೆಗೆ ಚಕ್ಕರ್‌ ಹಾಕಿಸುತ್ತಿರುವ ಪೋಷಕರಿಗೆ ಬಾಲಕಾರ್ಮಿಕ ಕಾನೂನಿನ ಅರಿವಿಲ್ಲ. ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಕನಿಷ್ಠ ಅರಿವೂ ಪೋಷಕರಿಗಿಲ್ಲ. ಸರ್ಕಾರ ಗ್ರಾಮೀಣ ಭಾಗದ ಮಕ್ಕಳಿಗೆ ಕಡ್ಡಾಯವಾಗಿ ಉಚಿತ ಶಿಕ್ಷಣ ನೀಡಬೇಕು ಎನ್ನುವ ಮಹತ್ವದ ಉದ್ದೇಶದಿಂದ ಬಾ ಮರಳಿ ಶಾಲೆಗೆ, ಚಿಣ್ಣರ ಅಂಗಳ, ಬಿಸಿಯೂಟ, ಸಮುದಾಯದತ್ತ ಶಾಲೆ, ಪ್ರತಿಭಾ ಕಾರಂಜಿ, ಶೈಕ್ಷಣಿಕ ಅಂಗಳ… ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಪೋಷಕರ ಅಜ್ಞಾನವೋ ಅಥವಾ ಬಡತನವೋ ಮಕ್ಕಳು ಮಾತ್ರ ಅಕ್ಷರ ಜ್ಞಾನದಿಂದ ವಂಚಿತರಾಗಿ ಬಾಲಕಾರ್ಮಿಕರಾಗುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಹೆಸರು ಬೆಳೆಯ ರಾಶಿ ನಡೆಯುತ್ತಿರುವುದರಿಂದ ಕೃಷಿ ಚಟುವಟಿಕೆ ಜೀವ ಪಡೆದುಕೊಂಡಿದೆ. ಶಾಲಾ ಮಕ್ಕಳು ಕೃಷಿ ಕೂಲಿ ಕಾರ್ಮಿಕರಾಗಿ ಬಳಕೆಯಾಗುತ್ತಿದ್ದಾರೆ. ಬಾಲಕಾರ್ಮಿಕ ಕಾಯ್ದೆ ಮಧ್ಯೆಯೂ ಮಕ್ಕಳು ಕೆಲಸಕ್ಕೆ ಹೋಗುತ್ತಿರುವುದಕ್ಕೆ ಪೋಷಕರ ಆರ್ಥಿಕ ದುಃಸ್ಥಿತಿ ಹಾಗೂ ಬಡತನ ಮುಖ್ಯ ಕಾರಣ. ಕಡ್ಡಾಯ ಉಚಿತ ಶಿಕ್ಷಣ ಹಾಗೂ ಬಾಲಕಾರ್ಮಿಕ ಕಾಯ್ದೆಗಳನ್ನು ಜಾರಿಗೆ ತಂದಿರುವ ಸರ್ಕಾರ ಅವುಗಳ ಅನುಷ್ಠಾನ ಬಿಗಿಗೊಳಿಸಿಲ್ಲ.
-ಶಿವುಕುಮಾರ ಆಂದೋಲಾ, ಉಪಾಧ್ಯಕ್ಷರು, ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ

Advertisement

– ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next