Advertisement

ವಿಧಿಯಾಟಕ್ಕೆ ತಬ್ಬಲಿಗಳಾದ ಮಕ್ಕಳು

05:06 PM Sep 08, 2018 | Team Udayavani |

ಗಂಗಾವತಿ: ವಿಧಿ ಯಾರ ಬಾಳಲಿ ಹೇಗೆ ಆಟವಾಡುತ್ತದೆಯೋ ಯಾರು ಕಂಡಿಲ್ಲ. ತಾಲೂಕಿನ ನವಲಿ ಗ್ರಾಮದ ಕುಟುಂಬವೊಂದರ ಇಬ್ಬರು ಬಾಲಕಿಯರು ವಿಧಿಯಾಟಕ್ಕೆ ತಬ್ಬಲಿಗಳಾದ ದೃಶ್ಯ ಹೃದಯ ಕಲಕುವಂತಿದೆ.

Advertisement

ಕೂಲಿ ಕೆಲಸದಿಂದ ಮರಳುವ ಸಂದರ್ಭದಲ್ಲಿ ತುಂಗಭದ್ರಾ ಕಾಲುವೆಗೆ ಟ್ರ್ಯಾಕ್ಟರ್‌ ಉರುಳಿ ಮೃತಪಟ್ಟ ಐವರು ಮಹಿಳೆಯರಲ್ಲಿ ನವಲಿ ಗ್ರಾಮದ ದುರುಗಮ್ಮಾ ಮಡಿವಾಳರ(40) ಸಹ ಒಬ್ಬರಾಗಿದ್ದಾರೆ. ಮೃತ ದುರುಗಮ್ಮಳ ಪತಿ ಬಸವರಾಜ 9 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಂತರ ದುರುಗಮ್ಮಾ ತನ್ನಿಬ್ಬರು ಹೆಣ್ಣುಮಕ್ಕಳ ಜತೆ ನವಲಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ದುರುಗಮ್ಮಾ ತನ್ನ ಮಕ್ಕಳಾದ ಜಯಶ್ರೀ (13) 8ನೇ ತರಗತಿ ಹಾಗೂ ಅಕ್ಷತಾ (9)ಳಿಗೆ ಉತ್ತಮ ಶಿಕ್ಷಣ ನೀಡಿ ಭವಿಷ್ಯ ನಿರ್ಮಿಸಲು ಕೂಲಿನಾಲಿ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದಳು. ಮಕ್ಕಳ ಶಾಲಾ ಶುಲ್ಕ ಪಠ್ಯಪುಸ್ತಕ, ಬಟ್ಟೆ, ಮನೆ ಬಾಡಿಗೆ ಹೊಂದಿಸಲು ಪ್ರತಿದಿನ ದುರುಗಮ್ಮಾ ಕೂಲಿ ಕೆಲಸಕ್ಕೆ ತೆರಳುತ್ತಿದ್ದಳು. ಮಳೆಯಾಗದ ಕಾರಣ ನವಲಿ ಸುತ್ತಲಿನ ಗ್ರಾಮಗಳಲ್ಲಿ ಕೂಲಿ ಕೆಲಸ ಸಿಗದೇ ಪ್ರತಿದಿನ ದೂರದ ಸೋಮನಾಳ ಹಾಗೂ ಇತರೆ ನೀರಾವರಿ ಪ್ರದೇಶದ ಗ್ರಾಮಗಳಿಗೆ ಇತರೆ ಮಹಿಳೆಯರೊಂದಿಗೆ ತೆರಳುವುದು ಸಾಮಾನ್ಯವಾಗಿತ್ತು.

ಹೀಗೆ ಕೂಲಿ ಕೆಲಸಕ್ಕೆ ಹೋಗಿ ಬರುವ ಸಂದರ್ಭದಲ್ಲಿ ಟ್ರ್ಯಾಕ್ಟರ್‌ ಕಾಲುವೆಗೆ ಉರುಳಿ ದುರುಗಮ್ಮ ಮೃತಪಟ್ಟಿದ್ದಾರೆ. ತಾಯಿ ಸಾವಿನ ನಂತರ ಇಬ್ಬರು ಹೆಣ್ಣು ಮಕ್ಕಳು ದಿಕ್ಕು ತೋಚದೆ ಅನಾಥರಾಗಿದ್ದಾರೆ. ಸದ್ಯ ಗ್ರಾಮದ ಜನರು ಆಗಮಿಸಿ ದುರುಗಮ್ಮಳ ಅಂತ್ಯಸಂಸ್ಕಾರ ಮುಗಿಸಿದ್ದಾರೆ. ಮುಂದಿನ ಭವಿಷ್ಯದ ಬಗ್ಗೆ ಚಿಕ್ಕಮಕ್ಕಳು ಯೋಚಿಸುತ್ತಿದ್ದಾರೆ. ಮಕ್ಕಳ ಬದುಕಿಗೆ ನೆರವಾಗಲು ಇಚ್ಛಿಸುವವರು ಮೊ.9845368753 ಸಂಪರ್ಕಿಸಲು ಗ್ರಾಮಸ್ಥರ ಕೋರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next