Advertisement

ಮಳವೂರು: ಕೆರೆಗಳಲ್ಲಿ ಹೂಳು, ತೋಡುಗಳಲ್ಲಿ ಕಶ್ಮಲ ನೀರು

12:40 PM Oct 30, 2018 | |

ಬಜಪೆ : ಮಳವೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 11 ಕೆರೆಗಳಿದ್ದು, ಅದರಲ್ಲಿ ಒಂದು ಕೆರೆ ಅಭಿವೃದ್ಧಿಯಾಗಿದೆ. ಈ ಭಾಗದ ಬಹುತೇಕ ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದು, ತೋಡುಗಳಲ್ಲಿ ಕಶ್ಮಲ ನೀರು ಸೇರಿಕೊಂಡಿರುವುದರಿಂದ ಇದ್ದರೂ ಉಪಯೋಗಕ್ಕಿಲ್ಲದಂತಾಗಿದೆ.

Advertisement

ನಗರ ಭಾಗದ ವಿದ್ಯಾರ್ಥಿಗಳಿಗೆ ಈಜು ಕಲಿಯಲು ಅಲ್ಲಲ್ಲಿ ಸ್ವಿಮ್ಮಿಂಗ್‌ ಪೂಲ್‌ ಗಳಿರುತ್ತವೆ. ಆದರೆ ಗ್ರಾಮೀಣ ಭಾಗದ ಮಕ್ಕಳಿಗೆ ಕೆರೆ, ತೋಡುಗಳೇ ಈಜು ಕಲಿಯಲು ಇರುವ ಪ್ರಮುಖ ಸ್ಥಳ. ಆದರೆ ಈ ಭಾಗದಲ್ಲಿ ಮಾತ್ರ ಕೆರೆ, ತೋಡುಗಳಿದ್ದರೂ ಅದರಲ್ಲಿ ಇಳಿಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೃಷಿ ಪ್ರಧಾನವಾದ ಈ ಭಾಗದಲ್ಲಿ ಹೊಲಗದ್ದೆಗಳಲ್ಲಿ ಕೆಲಸ ಮಾಡಿ ಬರುವ ಕೃಷಿಕರು ಹತ್ತಿರವಿರುವ ಕೆರೆ, ಕೃಷಿ ಬಾವಿ, ನದಿ, ತೋಡುಗಳಲ್ಲಿ ತಮ್ಮ ಕೋಣಗಳು, ಕೃಷಿ ಪರಿಕರಗಳನ್ನು ಸ್ವಚ್ಛಗೊಳಿಸುತ್ತಿದ್ದರೆ, ಅವರ ಮಕ್ಕಳು ನೀರಿನಲ್ಲಿ ಈಜಾಡಿ ಸಂಭ್ರಮಿಸುತ್ತಿದ್ದರು. ಇನ್ನು ಸಾಂಪ್ರದಾಯಿಕ ಕೃಷಿ ವಿಧಾನವನ್ನು ಅನುಸರಿಸುತ್ತಿದ್ದವರು ಕಡಿಮೆ ನೀರಿರುವ ಕೆರೆಗಳ ಮಧ್ಯೆ ಸ್ವಲ್ಪ ಹೊಯ್ಗೆ ತೆಗೆದು ಗುಂಡಿ ಮಾಡಿ ನೀರು ಸಂಗ್ರಹವಾಗುವಂತೆ ಮಾಡುತ್ತಿದ್ದರು. ಇದರಲ್ಲಿ ಪ್ರತಿನಿತ್ಯವು ಕೋಣಗಳನ್ನು ತೊಳೆಯುತ್ತಿದ್ದುದರಿಂದ ನೀರಿನಲ್ಲಿ ಪಾಚಿನಿಲ್ಲದೆ ಸ್ವಚ್ಛವಾಗಿ ಇರುತ್ತಿತ್ತು.

ಇದಕ್ಕಾಗಿಯೇ ಅಲ್ಲಲ್ಲಿ ಕೆರೆಗಳು ನಿರ್ಮಾಣವಾಗುದ್ದವು. ವರ್ಷವಿಡೀ ಆ ಕೆರೆಗಳಲ್ಲಿ ನೀರು ಇರುತ್ತಿತ್ತು. ದೊಡ್ಡವರ ಜತೆ ಮಕ್ಕಳು ಬಂದು ಇಲ್ಲಿ ಈಜು ಕಲಿಯುತ್ತಿದ್ದರು. ರಜಾದಿನಗಳಲ್ಲಿ ಈ ಕೆರೆಗಳು ಪ್ರಮುಖ ಆಕರ್ಷಣೆಯೇ ಕೇಂದ್ರವಾಗಿರುದ್ದವು. ಆದರೆ ಈಗ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಕೆರೆಗಳ ಅತಿ ಕ್ರಮಣ, ನಿಂತ ನೀರಿ ನಲ್ಲಿ ಪಾಚಿ, ಹೂಳು ತುಂಬಿ ಕೆರೆಗಳೇ ಇಲ್ಲವಾಗಿವೆ. ಅಲ್ಲದೇ ಡಿಸೆಂಬರ್‌ ತಿಂಗಳ ವೇಳೆಗೆ ನೀರು ಬತ್ತಿ ಹೋಗುತ್ತಿದೆ.

ಹರಿಯುವ ತೋಡುಗಳು ಗ್ರಾಮಗಳಲ್ಲಿ ಈಜು ಕಲಿಕೆಗಿರುವ ಸ್ಥಳವಾಗಿದ್ದವು. ಮಳೆಗಾಲದಲ್ಲಿ ಇದರಲ್ಲಿ ನೀರು ತುಂಬಿ ಹರಿದರೆ, ಬೇಸಗೆಯಲ್ಲಿ ಹರಿಯುವ ತೋಡಿಗೆ ಕಟ್ಟ ಕಟ್ಟಿ ನೀರನ್ನು ಕೃಷಿಗೆ ಬಳಸುತ್ತಿದ್ದರು. ಅದರೆ ಈಗಿನ ಪರಿಸ್ಥಿತಿ ಹಾಗಿಲ್ಲ. ತೋಡಿನ ನೀರಿನಲ್ಲಿ ಇಳಿಯುವುದೇ ಕಷ್ಟ. ತ್ಯಾಜ್ಯ ನೀರು, ಚರಂಡಿ ಕೊಳಚೆ ಇದರಲ್ಲಿ ಹರಿಯುವುದರಿಂದ ದುರ್ಗಂಧಯುಕ್ತವಾದ ಹರಿಯುವ ನೀರಿಗೆ ಇಳಿಯುವುದೇ ಕಷ್ಟ. ಹೀಗಾಗಿ ಈಜು ಕಲಿಯಲು ಹೇಗೆ ಸಾಧ್ಯವಿದೆ? ಹೀಗಾಗಿ ಈಜು ಕಲಿಯುವ ಆಸಕ್ತಿ ಉಳ್ಳವರಿಗೂ ಇಲ್ಲಿ ಅವಕಾಶವಿಲ್ಲದಂತಾಗಿದೆ.

Advertisement

ಗ್ರಾಮಗಳಲ್ಲೂ ಈಜುಕೊಳ ನಿರ್ಮಾಣವಾಗಲಿ
ಈಜು ಜೀವರಕ್ಷಕ ವಿದ್ಯೆ. ಅದನ್ನು ಪ್ರತಿಯೊಬ್ಬರೂ ಕಲಿಯಬೇಕಿದೆ. ಹೀಗಿರುವಾಗ ಗ್ರಾಮೀಣ ಭಾಗದ ಮಕ್ಕಳು ಇದರಿಂದ ವಂಚಿತರಾಗುವುದು ಎಷ್ಟು ಸರಿ? ಹೀಗಾಗಿ ಪ್ರತಿ ಗ್ರಾಮ ಗ್ರಾಮಗಳಲ್ಲೂ ಈಜು ಕೊಳ, ಟಬ್‌ ಗಳನ್ನು ಸರಕಾರ ನಿರ್ಮಿಸಿಕೊಡಬೇಕಿದೆ. ಇಲ್ಲವಾದರೆ ಗ್ರಾಮೀಣ ಭಾಗದಲ್ಲಿ ಇರುವ ಕೆರೆ, ತೋಡುಗಳನ್ನು ಅಭಿವೃದ್ಧಿಪಡಿಸಿ, ನಿರ್ವಹಣೆಗೆ ಸಮಿತಿ ರಚಿಸಿ, ನೈರ್ಮಲ್ಯ ಕಾಪಾಡಲು ಕ್ರಮಕೈ ಗೊಳ್ಳಬೇಕಿದೆ. 

ಈಜು ಕೊಳ ನಿರ್ಮಾಣವಾಗಬೇಕು
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ 1 ಎಕರೆ ಭೂಪರಿವರ್ತನೆ ಸಂದರ್ಭದಲ್ಲಿ ಕೆರೆ ಅಭಿವೃದ್ಧಿಗಾಗಿ 1 ಲಕ್ಷ ರೂ. ಹಣ ವಸೂಲು ಮಾಡುತ್ತಿದೆ. ದೊಡ್ಡ ಲೇಔಟ್‌ ಸಂದರ್ಭದಲ್ಲಿ ಈಜುಕೊಳ ಹಾಗೂ ಇತರ ನಿರ್ಮಾಣಕ್ಕೆಂದು ವಸೂಲಾತಿ ನಡೆಯುತ್ತಿದೆ ಈ ನಿಟ್ಟಿನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೆರೆ ಅಭಿವೃದ್ದಿ ಹಾಗೂ ಈಜು ಕೊಳ ನಿರ್ಮಾಣ ಮಾಡಬಹುದು. ನಾವು ಈಜು ಕೃಷಿ ಕೆರೆಯಲ್ಲಿ ಕಲಿತ್ತಿದ್ದವು. ಅದರೆ ಈಗಿನ ಮಕ್ಕಳಿಗೆ ಇದಕ್ಕೆ ಅವಕಾಶವಿಲ್ಲದಂತಾಗಿದೆ. ಇದಕ್ಕೆ ಕಾರಣ ಕೆರೆಯಲ್ಲಿ ಹೂಳು, ತೋಡುಗಳಲ್ಲಿ ಕಶ್ಮಲ ನೀರು ಹರಿಯುತ್ತಿರುವುದು.
– ಗಣೇಶ್‌ ಅರ್ಬಿ
ಅಧ್ಯಕ್ಷ, ಮಳವೂರು ಗ್ರಾ.ಪಂ. 

Advertisement

Udayavani is now on Telegram. Click here to join our channel and stay updated with the latest news.

Next