Advertisement

ಆನ್‌ಲೈನ್‌-ಆಫ್ಲೈನ್‌ ಗೊಂದಲದಲ್ಲಿ ಮಕ್ಕಳು

11:00 AM Oct 18, 2021 | Team Udayavani |

ಪಾಲಕ, ಪೋಷಕರಿಂದ ಆನ್‌ಲೈನ್‌ ತರಗತಿಗಾಗಿ ಮೊಬೈಲ್‌ ಪಡೆದು, ಅದರಲ್ಲಿ ಅಶ್ಲೀಲ ವಿಡಿಯೊ, ಚಿತ್ರ ನೋಡಿ ಅದರಿಂದ ಹೊರಬರಲಾಗದೇ ಅದೆಷ್ಟೋ ವಿದ್ಯಾರ್ಥಿಗಳು ಇನ್ನು ಕೊರಗುತ್ತಿದ್ದಾರೆ. ನಿರಂತರ ಮೊಬೈಲ್‌ ನೋಡುತ್ತಲೇ ಕಣ್ಣಿನ ದೃಷ್ಟಿ ಹೀನವಾಗಿರುವುದು ಸೇರಿದಂತೆ ಅನೇಕ ಮಾನಸಿಕ ಸಮಸ್ಯೆಗಳನ್ನು ಬಹುತೇಕ ಮಕ್ಕಳ ಎದುರಿಸುತ್ತಿದ್ದಾರೆ.ವಿವಿಧ ಆ್ಯಪ್‌ಗ್ಳಿಂದ ಮಕ್ಕಳು ಪಾಲಕರಿಗೆ ಮಾಡಿದ ಮೋಸ, ಸ್ವತಃ ಮಕ್ಕಳೇ ಅದರಿಂದ ಕಂಗೆಟ್ಟಿರುವುದು ಸೇರಿದಂತೆ ಹಲವು ನಿದರ್ಶನಗಳು ಬೆಳಕಿಗೆ ಬಂದಿವೆ. ಭೌತಿಕ ತರಗತಿಗಳು ಆರಂಭವಾದರೂ ಇತ್ಯಾವುದು ಕಡಿಮೆಯಾಗಿಲ್ಲ.

Advertisement

ಶಾಲೆಗಳು ತುರ್ತಾಗಿ ಮಾಡಬೇಕಿರುವುದು: ಆನ್‌ಲೈನ್‌ ಅಥವಾ ಪೂರ್ವ ಮುದ್ರಿತಾ ವಿಡಿಯೊ ತರಗತಿಯಿಂದ ಭೌತಿಕ ತರಗತಿಗೆ ಬಂದಿ ರುವ ವಿದ್ಯಾರ್ಥಿಗಳಿಗೆ ನೇರವಾಗಿ ಪಠ್ಯ ಬೋಧನೆ ಮಾಡುವ ಬದಲಿಗೆ ಒಂದೆರೆಡು ತರಗತಿಗಳು ಅವರನ್ನು ಮಾನಸಿಕವಾಗಿ ಭೌತಿಕ ತರಗತಿಗೆ ಸಜ್ಜುಗೊ ಳಿಸುವ ಕಾರ್ಯವನ್ನು ತುರ್ತಾಗಿ ಶಾಲೆಗಳಲ್ಲಿ ಮಾಡಬೇಕು. ಸುಮಾರು 18 ತಿಂಗಳ ವಿದ್ಯಾರ್ಥಿಗಳು ಶಾಲಾ ಸ್ನೇಹಿತರಿಂದ ದೂರ ವಿದ್ದರು. ಈಗ ಮತ್ತೆ ಒಂದಾಗಿದ್ದರೂ, ಪರಿಚಯಿಸಿಕೊಳ್ಳಲು ತಡಬಡಿಸುವ ಸ್ಥಿತಿಯಲ್ಲಿದ್ದಾರೆ. ಇದನ್ನು ಸರಿಪಡಿಸುವ ಕಾರ್ಯ ಮಾಡಬೇಕು.

ಮಕ್ಕಳಿಗೆ ಕೌನ್ಸೆಲಿಂಗ್‌ ಅಗತ್ಯವಿದೆ: 6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಈಗಾಗಲೇ ಪೂರ್ಣ ಪ್ರಮಾಣದ ಭೌತಿಕ ತರಗತಿ ಆರಂಭವಾಗಿದೆ. ಅ.21ರಿಂದ 1ರಿಂದ 5ನೇ ತರಗತಿ ಮಕ್ಕಳಿಗೂ ಭೌತಿಕ ತರಗತಿ ಶುರುವಾಗಲಿದೆ. ಅದರಲ್ಲೂ 1ರಿಂದ 15ನೇ ತರಗತಿ ಮಕ್ಕಳು ಶಾಲೆ ಬರುತ್ತಿದ್ದಾರೆ. ಈ ಮಕ್ಕಳನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ಎಲ್ಲ ಮಕ್ಕಳಿಗೂ ಅನ್ವಯವಾಗುವಂತೆ ಶಾಲೆಗಳಲ್ಲಿ ಕನಿಷ್ಠ ಒಂದು ಅಥವಾ ಎರಡು ದಿನ ಆಪ್ತ ಸಮಾಲೋಚನೆ ಮಾಡಬೇಕು. ಕೊರೊನಾದಿಂದ ಅನೇಕ ನೋವಿನ ಜತೆಗೆ ಕಠಿಣ ಪರಿಸ್ಥಿತಿಗಳನ್ನು ಮಕ್ಕಳೂ ನೋಡಿರುತ್ತಾರೆ.

ಯಾವುದೇ ಮಕ್ಕಳಿಗೂ ಆಪ್ತ ಸಮಾಲೋಚನೆ ಈವರೆಗೂ ಆಗಿಲ್ಲ. ಬಹಳಷ್ಟು ಮಕ್ಕಳು ತಮ್ಮ ಕಷ್ಟ ಹೇಳಿಕೊಳ್ಳಲು ಕಾಯುತ್ತಿದ್ದಾರೆ. ಆಪ್ತ ಸಮಾಲೋಚನೆ ಮೂಲಕ ಮಕ್ಕಳ ಸಮಸ್ಯೆ ಅರಿತು, ಮಾನಸಿಕವಾಗಿ ಅವರನ್ನು ಹಗರು ಮಾಡಬೇಕಿದೆ. ನೇರವಾಗಿ ಪಠ್ಯ ವಿಷಯ ಬೋಧನೆಯಿಂದ ಮಕ್ಕಳನ್ನು ಶೈಕ್ಷಣಿಕವಾಗಿ ಸಜ್ಜುಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಆಪ್ತ ಸಮಾಲೋಚನೆ ಅತಿ ಅವಶ್ಯಕ ಎಂದು ಹಿರಿಯ ಆಪ್ತ ಸಮಾಲೋಚಕರೊಬ್ಬರು ವಿವರ ನೀಡಿದರು.

“ಆನ್‌ಲೈನ್‌ತರಗತಿ ವೇಳೆ ಅಶ್ಲೀಲ, ಸಂದೇಶ ವಿಡಿಯೊಗಳ ಲಿಂಕ್‌ ಬರುತ್ತಿರುವ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಕಾನೂನು ಕ್ರಮಕೈಗೊಳ್ಳಲಾಗಿದೆ. ಜತೆಗೆ ಪೋಷಕರು ಮಕ್ಕಳಿಗೆ ಮೊಬೈಲ್‌ ಕೊಡುವ ಮೊದಲು ಪರಿಶೀಲಿಸಿಬೇಕು. ಜತೆಗೆ ಆನ್‌ಲೈನ್‌ ತರಗತಿ ಸಂದರ್ಭದಲ್ಲಿ ಪಕ್ಕದಲ್ಲಿದ್ದರೆ ಉತ್ತಮ.”

  • ಸಂದೀಪ್‌ ಪಾಟೀಲ್‌, ಜಂಟಿ ಪೊಲೀಸ್‌ ಆಯುಕ್ತ, ಸಿಸಿಬಿ
Advertisement

“ಮಕ್ಕಳಲ್ಲಿ ವೈಯಕ್ತಿಕವಾಗಿ ಆತ್ಮೀಯತೆ ಮನೋಭಾವ ಬೆಳೆಸುವುದು ಶಾಲೆಯ ಜವಾಬ್ದಾರಿಯಾಗಬೇಕು. ಪ್ರತಿ ಶಾಲೆಯಲ್ಲೂ ಮಕ್ಕಳಿಗೆ ಆಪ್ತ ಸಮಾಲೋಚನೆ ಮಾಡಬೇಕು. ಇದಕ್ಕಾಗಿ ಶಿಕ್ಷಕರಿಗೆ ತರಬೇತಿ ನೀಡಬೇಕು. ಮಕ್ಕಳ ಮಾನಸಿಕತೆ ಶೈಕ್ಷಣಿಕತೆಗೆ ಹೊಂದಿಕೊಳ್ಳುವಂತೆ ಮಾಡಬೇಕು.”

  • ನಾಗಸಿಂಹ ಜಿ.ರಾವ್‌, ನಿರ್ದೇಶಕ, ಚೈಲ್ಡ್‌ ರೈಟ್‌ ಟ್ರಸ್ಟ್‌

ಆಟಕ್ಕೂ ಆದ್ಯತೆ ನೀಡಬೇಕು-

ಕೊರೊನಾ ಕಾರಣಕ್ಕಾಗಿ ಮಕ್ಕಳು ಮೈದಾನದಲ್ಲಿ ಆಟವಾಡುವುದು ಕಡಿಮೆಯಾಗಿದೆ. ಈಗ ಕೆಲವೆಡೆ ಶಾಲೆಗಳು ಶುರುವಾಗಿವೆ, ಶುರುವಾಗುತ್ತಿವೆ. ಮಕ್ಕಳಿಗೆ ಬೌದ್ಧಿಕವಾಗಿ ಆಲೋಚನಾ ಶಕ್ತಿ ಬೆಳೆಸುವ ಮತ್ತು ಅವರ ಮನಸ್ಸು, ಬುದ್ಧಿ ಏಕೀಕರಿಸುವ ಕೆಲವೊಂದು ಆಟಗಳನ್ನು ಕನಿಷ್ಠ ವಾರದಲ್ಲಿ ಒಂದೆರೆಡು ದಿನವಾದರೂ ಆಯೋಜಿಸಬೇಕು. ಮನಶಾಸ್ತ್ರಕ್ಕೆ ಸಂಬಂಧಿಸಿದ ಕೆಲ ವೊಂದು ಆಟಗಳು ಇವೆ.

ಅವುಗಳನ್ನು ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಆಡಿಸುವ ಮೂಲಕ ಶೈಕ್ಷಣಿಕ ವಾತಾವರಣಕ್ಕೆ ಅವರನ್ನು ತರುವ ಪ್ರಯತ್ನ ಆಗಬೇಕು. ಪಾಠ ಬೋಧನೆಯೊಂದರಿಂದಲೇ ಮಕ್ಕಳ ಮಾನಸಿಕ ಪರಿವರ್ತನೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವೂ ಕೆಲ ವೊಂದು ಕಾರ್ಯಕ್ರಮ ರೂಪಿಸಬೇಕು ಎಂದು ಶಿಕ್ಷಣ ತಜ್ಞರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಮಕ್ಕಳಲ್ಲಿ ಧನಾತ್ಮಕತೆ ಬೆಳೆಸಬೇಕು

ಆನ್‌ಲೈನ್‌ ಕಲಿಕೆ ಇಂದಿನ ಅವಶ್ಯಕತೆಯಾಗಿದೆ. ಪೂರ್ಣ ಪ್ರಮಾಣದಲ್ಲಿ ತರಗತಿಗಳು ಆರಂಭವಾಗಿದ್ದರೂ, ಅನೇಕ ವಿದ್ಯಾರ್ಥಿಗಳು ಇಂದಿಗೂ ಆನ್‌ಲೈನ್‌ನಲ್ಲೇ ಕಲಿಕೆ ಮುಂದು ವರಿಸುತ್ತಿದ್ದಾರೆ. ಹೀಗಾಗಿ ಆನ್‌ಲೈನ್‌ ಪಾಠದ ಹೊರತಾಗಿಯೂ ಮೊಬೈಲ್‌ಗ‌ಳಲ್ಲಿ ಅಗತ್ಯ ಮಾಹಿತಿ ಪಡೆಯುವುದು ಇತ್ಯಾದಿಗಳು ಅವಶ್ಯಕವಾಗಿದೆ. ಈ ಹಿನ್ನೆಲೆ ಮಕ್ಕಳಿಗೆ ಧನಾತ್ಮಕ ಅಂಶ ಕಲಿಸುವ, ನೈತಿಕ ನೆಲೆಗಟ್ಟಿನಲ್ಲಿ ಮೊಬೈಲ್‌ ಬಳಕೆ ಹೇಗಿರಬೇಕು ಎಂಬುದನ್ನು ಕಲಿಸುವ ಅಗತ್ಯವಿದೆ ಎಂದು ಶಿಕ್ಷಣ ತಜ್ಞ ವಾಸುದೇವ ಶರ್ಮಾ ಮಾಹಿತಿ ನೀಡಿದರು.

ಸಾಮೂಹಿಕ ಕಲಿಕೆಯ ಮಾಹಿತಿಯನ್ನು ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ನೀಡಬೇಕು. ಇಲ್ಲವಾದರೆ, ತರಗತಿ ಕಲಿಕೆಯ ರುಚಿ ಅವರಿಗೆ ಸಿಗುವುದಿಲ್ಲ. ಇದರ ಜತೆಗೆ ಆನ್‌ಲೈನ್‌ ಕಲಿಕೆಯ ಧನಾತ್ಮಕ ಅಂಶಗಳನ್ನು ಮಕ್ಕಳಿಗೆ ಶಾಲೆ ಮತ್ತು ಮನೆಯಲ್ಲಿ ಕಲಿಸಿಕೊಡಬೇಕು.

  • ವಾಸುದೇವ ಶರ್ಮಾ, ಶಿಕ್ಷಣ ತಜ್ಞ

ಮೊಬೈಲ್‌ ಆರಂಭದ ಬಳಕೆ, ಅತಿಯಾದ ಅವಲಂಬನೆ ಯಿಂದ ಯುವಜನತೆಯಲ್ಲಿ ಅಪರಾಧ ಪ್ರಕರಣಗಳು ಕಂಡು ಬರುತ್ತಿದ್ದವು. ಆದರೆ, ಕಳೆದೆರಡು ವರ್ಷಗಳಿಂದ ಮಕ್ಕಳಲ್ಲಿ ಕೂಡ ಮೊಬೈಲ್‌ ಬಳಕೆ ಹೆಚ್ಚಾಗಿದ್ದು, ಅಪರಾಧ ಮನಸ್ಥಿತಿ ಹೆಚ್ಚಾಗಲು ಈ ಅಂಶವೂ ಕಾರಣವಾಗಿರಬಹುದು. ಈ ಕುರಿತು ಹೆಚ್ಚಿನ ಸಂಶೋಧನೆ ನಡೆಸಬೇಕಿದೆ.

  • ಡಾ.ಪ್ರದೀಪ್‌ ಬಾಣಂದೂರ್‌, ಪ್ರಾಧ್ಯಾಪಕರು, ನಿಮ್ಹಾನ್ಸ್‌

ಸಾಮೂಹಿಕ ಕಲಿಕೆ ಬಗ್ಗೆ ಅರಿವು ಮೂಡಿಸಿ

ಆನ್‌ಲೈನ್‌ನಿಂದ ಮಕ್ಕಳು ಸಾಮೂಹಿಕ ಕಲಿಕೆಯನ್ನು ಮರೆತಿದ್ದಾರೆ. ಸಾಮೂ ಹಿಕ ಕಲಿಕೆ ಇಲ್ಲದೇ ಒಂದೂವರೆ ವರ್ಷಕ್ಕೂ ಅಧಿಕ ಕಾಲ ಶಿಕ್ಷಣ ಮುಂದುವರಿಸಿ ದ್ದಾರೆ. ಈಗ ಸಾಮೂಹಿಕ ಕಲಿಕೆ ಆರಂಭವಾಗಿದೆ. ಸಾಮೂಹಿಕ ಕಲಿಕೆಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು. ಇದರಿಂದ ಆಗುವ ಅನುಕೂಲಗಳೇನು ಎಂಬು ದರ ಅರಿವು ಮಕ್ಕಳಿಗೆ ಮೂಡಿಸಬೇಕು. ಸ್ನೇಹಿತರೊಂದಿಗೆ ಬೆರೆಯುವುದು, ಪಠ್ಯ, ಪಠ್ಯೇತರ ವಿಷಯಗಳ ಚರ್ಚೆ ನಡೆಸುವುದು, ತರಗತಿ ಕೊಠಡಿಯಲ್ಲಿ ಕೊರೊನಾ ಪೂರ್ವದಲ್ಲಿದ್ದ ವಾತಾವರಣವನ್ನು ಪುನರ್‌ ಸ್ಥಾಪಿಸಲು ಬೇಕಾದ ಕ್ರಮ ಶಾಲೆಯಿಂದ ಮಾಡಬೇಕು ಎಂದು ತಜ್ಞರೊಬ್ಬರು ಮಾಹಿತಿ ನೀಡಿದರು.

ಮೊಬೈಲ್‌ ಸೇರಿದಂತೆ ಯಾವುದೇ ಹೊಸ ವಸ್ತು/ ವಿಷಯ ಅತಿ ಬಳಕೆಯಿಂದ ಅಪರಾಧಕ್ಕೀಡಾಗುವುದು ಅಥವಾ ಅಪರಾಧ ಮಾಡುವ ಎರಡೂ ಸಾಧ್ಯತೆಗಳಿವೆ. ಬುದ್ಧಿಮಟ್ಟಕ್ಕಿಂತ ಭಾವನೆಗಳು ಬಲಶಾಲಿಯಾದಾಗ ಮಕ್ಕಳು ಪ್ರಚೋಚನೆಗೊಳಗಾಗುತ್ತಾರೆ. ಮಕ್ಕಳ ವರ್ತನೆಯಲ್ಲಿ ಬದಲಾವಣೆ, ಅತಿ ಕೋಪ, ಮಂಕಾಗುವುದು ಕಂಡ ಕೂಡಲೇ ಎಚ್ಚೆತ್ತುಕೊಳ್ಳಬೇಕು.

  • ಡಾ.ರೂಪೇಶ್‌, ಮಕ್ಕಳು ಮತ್ತು ಹದಿಹರೆಯದವರ ಮಾನಸಿಕ ತಜ್ಞರು, ನಿಮ್ಹಾನ್ಸ್‌

ಆನ್‌ಲೈನ್‌ ತರಗತಿಯಲ್ಲಿ ಅವಾಂತರ:           

ಆನ್‌ಲೈನ್‌ ತರಗತಿ ಸಂದರ್ಭದಲ್ಲಿ ಸಾಕಷ್ಟು ಅವಾಂತರಗಳಾಗಿವೆ. ಶಾಲಾ- ಕಾಲೇಜು ವಿದ್ಯಾರ್ಥಿಗಳು ತರಗತಿ ಕೇಳುವ ಸಂದರ್ಭ ದಲ್ಲಿ ಅಸಭ್ಯ ದೃಶ್ಯಗಳಿಗೆ ಸಂಬಂಧಿಸಿದ ಸಂದೇಶಗಳು, ಕೆಲ ವಿದ್ಯಾರ್ಥಿಗಳಿಂದ ಅಶ್ಲೀಲ ದೃಶ್ಯಗಳ ವಿಡಿಯೊ ಕಳುಹಿಸಿರುವ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಇತ್ತೀಚೆಗೆ ಕೊರೊನಾ ಕಾರಣ ದಿಂದಾಗಿ ಓದಿಗಿಂತ ಕ್ರೀಡೆ, ಪ್ರವಾಸದಲ್ಲಿ ಆಸಕ್ತಿ ಹೆಚ್ಚಾಗಿ ಬಿಸಿಎ ವಿದ್ಯಾರ್ಥಿನಿ ಸೇರಿ 7 ಮಕ್ಕಳು ಮನೆ ತೋರೆದಿರುವ ಘಟನೆ ಬೆಳಕಿಗೆ ಬಂದಿತ್ತು. ನಂತರ ಮಕ್ಕಳನ್ನು ಪತ್ತೆ ಹಚ್ಚಿದಾಗ ಸ್ಫೋಟಕ ವಿಚಾರ ಬಯಲಾಗಿದ್ದು, ಆನ್‌ಲೈನ್‌ ತರಗತಿಯಿಂದ ಓದಿನಲ್ಲಿ ಆಸಕ್ತಿ ಇರಲಿಲ್ಲ.

ಕ್ರೀಡೆ, ಪ್ರವಾಸಕ್ಕೆ ಹೋಗಬೇಕೆಂದು ಬಯಕೆ ಉಂಟಾಗಿತ್ತು ಎಂದು ಹೇಳಿ ಪೊಲೀಸರು ಮತ್ತು ಪೋಷಕರಲ್ಲಿ ಅಚ್ಚರಿ ಮೂಡಿಸಿದ್ದರು. ಕೊರೊನಾ ಕಾರಣದಿಂದ ಎರಡು ವರ್ಷಗಳಿಂದ ಶಾಲಾ-ಕಾಲೇಜುಗಳು ಆರಂಭವಾಗಿಲ್ಲ. ಕೇವಲ ಆನ್‌ಲೈನ್‌ ತರಗತಿಗಳಷ್ಟೇ ನಡೆ ಯುತ್ತಿವೆ. ಹೀಗಾಗಿ ಮಕ್ಕಳಿಗೆ ವಿದ್ಯಾಭ್ಯಾಸದ ಮೇಲೆ ಆಸಕ್ತಿ ಕಡಿಮೆಯಾಗಿದ್ದು, ಕ್ರೀಡೆಹಾಗೂ ಪ್ರವಾಸಕ್ಕೆ ಹೋಗುವ ಕುರಿತು ಹೆಚ್ಚು ಗಮನ ಹರಿಸಿದ್ದರು.

ಈ ಮಧ್ಯೆ ಸಾಮಾನ್ಯವಾಗಿ ಪೋಷಕರು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸುವಂತೆ ಮಕ್ಕಳ ಮೇಲೆ ಒತ್ತಡ ಹಾಕುತ್ತಿದ್ದರು. ಅಲ್ಲದೆ, ಮನೆಯಲ್ಲಿ ಆರು ತಿಂಗಳು ಅಥವಾ ವರ್ಷಕ್ಕೊಮ್ಮೆ ಪ್ರವಾಸಕ್ಕೆ ಕರೆ ದೊಯ್ಯುತ್ತಿದ್ದರು. ಅದು ಕೊರೊನಾ ಕಾರಣದಿಂದ ಸಾಧ್ಯವಾಗಿರಲಿಲ್ಲ. ಅದರಿಂದ ಬೇಸರಗೊಂಡಿದ್ದ ಬಿಸಿಎ ವಿದ್ಯಾರ್ಥಿನಿ ತನ್ನ ಅಕ್ಕ-ಪಕ್ಕದ ಮನೆ ಇತರೆ ಮೂವರು ಮಕ್ಕಳನ್ನು ಪ್ರವಾಸಕ್ಕೆಂದು ಕರೆ ದೊಯ್ದು, ಮೈಸೂರು, ಉತ್ತರ ಕರ್ನಾಟಕ ಹಾಗೂ ಮಂಗಳೂರಿಗೆ ಕರೆದೊಯ್ದಿದ್ದರು. ಬಳಿಕ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದರು.

ಅವರ ಕೌನ್ಸಿಲಿಂಗ್‌ ವೇಳೆಯೂ ಒಂದೂವರೆ ವರ್ಷಗಳಿಂದ ಪ್ರವಾಸಕ್ಕೆ ಕರೆದೊಯ್ದಿರಲಿಲ್ಲ. ಅಲ್ಲದೆ, ಕೇವಲ ಆನ್‌ಲೈನ್‌ ತರಗತಿಯಿಂದ ಬೇಸರವಾಗಿತ್ತು. ಹೀಗಾಗಿ ಪ್ರವಾಸ ಹೋಗಿದ್ದೇವು ಎಂದು ಹೇಳಿಕೆ ನೀಡಿದ್ದರು. ಇನ್ನು ಇತರೆ ಮೂವರು ಮಕ್ಕಳು ಓದಿನಲ್ಲಿ ಆಸಕ್ತಿ ಕಡಿಮೆಯಾಗಿದೆ. ಕಬಡ್ಡಿ ಕ್ರೀಡೆಯಲ್ಲಿ ಆಸಕ್ತಿಯಿದ್ದು, ಉನ್ನತ ಹೆಸರು ಸಂಪಾದಿಸಿ, ಹಣಗಳಿಸಿಕೊಂಡು ಬರುತ್ತೇವೆ ಎಂದು ಪತ್ರ ಬರೆದಿಟ್ಟು ಹೋಗಿದ್ದರು. ಅನಂತರ ಮೈಸೂರಿನಲ್ಲಿ ಸುತ್ತಾಡಿ, ಮತ್ತೆ ಬೆಂಗಳೂರಿಗೆ ಬಂದಾಗ ಪೊಲೀಸರು ರಕ್ಷಿಸಿದರು.

ಉಪನ್ಯಾಸಕಿಗೆ ಪೋರ್ನ್ ವಿಡಿಯೊ!

ಮತ್ತೊಂದು ಪ್ರಕರಣದಲ್ಲಿ ಉತ್ತರ ವಿಭಾಗ ಸೆನ್‌ ಠಾಣೆ ಪೊಲೀಸರು ಪಿಯುಸಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿತ್ತು. ಪಿಯುಸಿ ವಿದ್ಯಾರ್ಥಿಯೊಬ್ಬ ಆನ್‌ಲೈನ್‌ ತರಗತಿ ವೇಳೆಯೇ ಉಪನ್ಯಾಸಕಿಗೆ ಪೋರ್ನ್ ವಿಡಿಯೊ ಕಳುಹಿಸಿದ್ದ. ಈ ಸಂಬಂಧ ಉಪನ್ಯಾಸಕಿ ಉತ್ತರ ವಿಭಾಗ ಸೆನ್‌ ಠಾಣೆಗೆ ದೂರು ನೀಡಿದ್ದರು. ನಂತರ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೆಲ ತಿಂಗಳಿಂದ ಆನ್‌ಲೈನ್‌ ತರಗತಿಯಿಂದ ಬೇಸತ್ತು ಸ್ನೇಹಿತನೊಬ್ಬನ ಸಲಹೆ ಮೇರೆಗೆ ಪೋರ್ನ್ ವಿಡಿಯೊ ನೋಡಿ ಪ್ರಚೋದನೆಗೊಂಡು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿತ್ತು.

 ಅಶ್ಲೀಲ ಸಂದೇಶಗಳ ಲಿಂಕ್‌-

ಎರಡು ವರ್ಷಗಳಿಂದ ದಿನಕ್ಕೆ 3-4 ಗಂಟೆಗಳ ಕಾಲ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ತರಗತಿ ಕೇಳುವ ಸಂದರ್ಭದಲ್ಲಿ ಬರುವ ಕೆಲವೊಂದು ಸಂದೇಶಗಳನ್ನು ಕ್ಲಿಕಿಸಿದಾಗ ಅದರಲ್ಲಿ ಅಶ್ಲೀಲ ಫೋಟೋಗಳು, ವಿಡಿಯೊಗಳು ತೆರೆದುಕೊಂಡಿರುವ ಘಟನೆಗಳು ಪತ್ತೆಯಾಗಿವೆ. ಅಲ್ಲದೆ, ಆನ್‌ಲೈನ್‌ ತರಗತಿ ವೇಳೆಯೇ ಕಾಲೇಜು ವಿದ್ಯಾರ್ಥಿಯೊಬ್ಬ ಅಶ್ಲೀಲ ವಿಡಿಯೊ ಕಳುಹಿಸಿ ಸಿಕ್ಕಿಬಿದ್ದಿದ್ದಾನೆ.

ಕಳೆದ ವರ್ಷ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಆನ್‌ಲೈನ್‌ ಕ್ಲಾಸ್‌ ಕೇಳುವ ಸಂದರ್ಭದಲ್ಲಿ ಅಶ್ಲೀಲ ಸಂದೇಶವೊಂದು ಬಂದಿದೆ. ಕುತುಹಲಕ್ಕೆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದಾಗ ಅಶ್ಲೀಲ ವಿಡಿಯೊಗಳು ತೆರೆದುಕೊಂಡಿವೆ. ಅದನ್ನು ಗಮನಿಸಿದ ಅವರ ಪೋಷಕರು ಕೂಡಲೇ ಮೊಬೈಲ್‌ ಕಸಿದುಕೊಂಡು, ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ರೀತಿ ಬಸವೇಶ್ವರನಗರ ಠಾಣೆ, ದಕ್ಷಿಣ ವಿಭಾಗ, ಉತ್ತರ ವಿಭಾಗ ಕೆಲ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಸಿಸಿಬಿ ಪೊಲೀಸರು ಪ್ರಕರಣಗಳ ತನಿಖೆ ನಡೆಸಿದಾಗ ಕೆಲವೊಂದು ಮಾಹಿತಿ ಬಹಿರಂಗವಾಗಿದ್ದವು. ಕೆಲ ಪ್ರಕರಣಗಳಲ್ಲಿ ಪೋಷಕರು ಹೆಚ್ಚು ನೋಡುತ್ತಿದ್ದ ವೆಬ್‌ಸೈಟ್‌, ಯುಟ್ಯೂಬ್‌ ಚಾಲನ್‌ಗಳ ನೋಟಿಫಿಕೇಷನ್‌ಗಳು ಬಂದಿದ್ದವು.

ಇನ್ನು ಇತರೆ ಪ್ರಕರಣಗಳಲ್ಲಿ ಮೊಬೈಲ್‌, ಲ್ಯಾಪ್‌ ಟಾಪ್‌ ರಿಪೇಪ್‌ ಕೊಟ್ಟಾಗ ಅಂಗಡಿಯ ಮಾಲೀಕ ನಂಬರ್‌ ಪಡೆದುಕೊಂಡು ಕಳುಹಿಸುತ್ತಿ ರುವುದು ಪತ್ತೆಯಾಗಿತ್ತು. ಈ ಸಂಬಂಧ ಕಾನೂನು ಕ್ರಮಕೈಗೊಳ್ಳಲಾಗಿತ್ತು. ಜತೆಗೆ ಪೋಷಕರಿಗೆ ಕೌನ್ಸಿಲಿಂಗ್‌ ನಡೆಸಿ ಮಕ್ಕಳಿಗೆ ಮೊಬೈಲ್‌ ಕೊಡುವ ಮೊದಲು ಮೊಬೈಲ್‌ ಅನ್ನು ಒಮ್ಮೆ ಪರಿಶೀಲಿಸಿ ನಂತರ ಕೊಡಬೇಕು ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದರು.

  • ಮೋಹನ್‌ ಭದ್ರಾವತಿ/ ರಾಜು ಖಾರ್ವಿ/ಜಯಪ್ರಕಾಶ್‌ ಬಿರಾದಾರ್‌

 

Advertisement

Udayavani is now on Telegram. Click here to join our channel and stay updated with the latest news.

Next