Advertisement

ಭಾರತದ ಮಕ್ಕಳಲ್ಲಿದೆ ಹೆಚ್ಚು ಬುದ್ಧಿ ಶಕ್ತಿ

09:29 AM Feb 12, 2019 | |

ಬೀದರ: ಭಾರತದ ಮಕ್ಕಳು ವಿಶ್ವದಲ್ಲೇ ಅತಿ ಹೆಚ್ಚು ಬುದ್ಧಿ ಶಕ್ತಿ ಹೊಂದಿದವರಾಗಿದ್ದಾರೆ. ಆದರೆ ಇದರ ಸದ್ಬಳಕೆ ಮಾಡಿಕೊಳ್ಳದ ಕಾರಣ ಪ್ರತಿಭೆಗಳು ಕಮರುತ್ತಿವೆ ಎಂದು ವಿಜಯಪುರ- ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಮಾಯಾನಂದ ಸರಸ್ವತಿ ಮಹಾರಾಜ್‌ ಹೇಳಿದರು.

Advertisement

ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕ ಭವನದಲ್ಲಿ ವಿವೇಕಾನಂದ ಅಕಾಡೆಮಿ ಫಾರ್‌ ಎಜುಕೇಷನಲ್‌ ಎಕ್ಸ್‌ಲೆನ್ಸ್‌ ಕೇಂದ್ರದಿಂದ ಸೋಮವಾರ ಆಯೋಜಿಸಿದ್ದ ಕೆಎಎಸ್‌ ಪರೀಕ್ಷೆ ಕುರಿತ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಮೆರಿಕಾ ಸೇರಿ ನಾನಾ ದೇಶಗಳಲ್ಲಿ ಹುಲಿಗಳಂತೆ ಗರ್ಜಿಸುತ್ತಿರುವ ಭಾರತದ ಮಕ್ಕಳು ಅಲ್ಲಿ ಅದೃಷ್ಟವಂತರಾಗಿ ಮೆರೆಯುತ್ತಿದ್ದಾರೆ. ಆದರೆ ಭಾರತದಲ್ಲಿ ಕುರಿಗಳಂತೆ ವರ್ತಿಸುತ್ತ ದುರದೃಷ್ಟವಂತರು ಎನಿಸಿಕೊಳ್ಳುತ್ತಿರುವುದು ದುರಂತದ ಸಂಗತಿ. ತನ್ನೊಳಗಿನ ಅಗಾದ ಶಕ್ತಿಯ ಪರಿಚಯ ಮಾಡಿಕೊಳ್ಳದೆ ನಮ್ಮ ಮಕ್ಕಳು ಸಾಧನೆಯಲ್ಲಿ ವಿಫಲವಾಗುತ್ತಿದ್ದಾರೆ ಎಂದರು.

ಮೂರು ವಾರಗಳ ಹಿಂದಷ್ಟೇ ಅಮೆರಿಕದಲ್ಲಿ ನಡೆಸಲಾಗಿದ್ದ ಅಧ್ಯಯನದ ವರದಿಯೊಂದು ಬಂದಿದೆ. ಅಲ್ಲಿನ 10 ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ 8 ಸ್ಥಾನ ಭಾರತೀಯ ಮಕ್ಕಳ ಪಾಲಾಗಿದೆ. ಇದಲ್ಲದೆ ಅಲ್ಲಿರುವ ಅನೇಕ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ಭಾರತದ ಮಕ್ಕಳು ಅಲ್ಲಿನವರಿಗಿಂತಲೂ ಚಾಣಕ್ಯ ಇದ್ದಾರೆ. ಬುದ್ಧಿ ಶಕ್ತಿ ನಮ್ಮ ಮಕ್ಕಳಲ್ಲಿ ಜಾಸ್ತಿ ಇದೆ ಎಂಬುದು ಹೊರ ದೇಶಗಳಲ್ಲಿ ಸಾಬೀತಾಗುತ್ತಿದೆ. ಆದರೆ, ನಮ್ಮಲ್ಲಿ ಮಾತ್ರ ಸಾಧನೆ ಆಗುತ್ತಿಲ್ಲ. ಹೀಗೇಕೆ ಆಗುತ್ತಿದೆ ಎಂಬ ಬಗ್ಗೆ ಗಂಭೀರ ಚಿಂತನೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ರಾಜಕೀಯ ಸ್ವಾತಂತ್ರ್ಯದಿಂದ ಏನೂ ಲಾಭವಿಲ್ಲ. ಶೋಷಣೆ, ಪೋಷಣೆಯಲ್ಲೇ ರಾಜಕಾರಣಿಗಳ ಕೆಲಸ ಖತಂ ಆಗುತ್ತಿದೆ. ಬುದ್ಧಿಹೀನರು, ಅಸಮರ್ಥರು ಆಳುವವರಾದರೆ ಏನಾಗುತ್ತದೆ ಎಂಬುದಕ್ಕೆ ನಮ್ಮಲ್ಲಿನ ಈಗಿನ ಸ್ಥಿತಿಗತಿಯೇ ಸಾಕ್ಷಿಯಾಗಿದೆ. ನಮ್ಮ ವೇದ, ಉಪ ನಿಷತ್‌, ಸಂಸ್ಕೃತಿಗಿಂತ ದೊಡ್ಡ ವಿಜ್ಞಾನ ಮತ್ತೂಂದಿಲ್ಲ. ನ್ಯೂಟನ್‌ನ ಎಲ್ಲ ಸಂಶೋಧನೆ ಅಂಶ ಋಗ್ವೇದದಲ್ಲಿವೆ ಎಂದು ಇಂಗ್ಲಿಷ್‌ ವಿಜ್ಞಾನಿಗಳೇ ಹೇಳುತ್ತಾರೆ. ನಮ್ಮ ಮಕ್ಕಳು ತನ್ನ ಶಕ್ತಿ ಅರಿಯುವಲ್ಲಿ ವಿಫಲರಾಗಿದ್ದಾರೆ. ಇಂಗ್ಲಿಷ್‌ ವ್ಯಾಮೋಹಕ್ಕೆ ಸಿಲುಕಿ ನರಳಾಡುತ್ತಿದ್ದಾರೆ. ಕನ್ನಡ ಮಾಧ್ಯಮ ಕೀಳಾಗಿ ಕಾಣುತ್ತಿದ್ದಾರೆ. ಉನ್ನತ ಸಾಧನೆ ಹುಚ್ಚು ಇಲ್ಲ. ಶ್ರೇಷ್ಠ ಗುರಿಗಿಂತಲೂ ಸೋಷಿಯಲ್‌ ಮೀಡಿಯಾದಲ್ಲಿ ಸಮಯ ಕಳೆಯುವ ಹುಚ್ಚು ಹೆಚ್ಚಾದರೆ ಸಾಧನೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

Advertisement

ಜಿಪಂ ಸಿಇಒ ಮಹಾಂತೇಶ ಬೀಳಗಿ ಮಾತನಾಡಿ, ಸಾಮಾನ್ಯ ಹಿನ್ನೆಲೆಯ ಕುಟುಂಬದಿಂದ ಬಂದ ನಾನು ಸಾಕಷ್ಟು ಕಷ್ಟಪಟ್ಟು ಓದಿದ್ದೇನೆ. ಸರ್ಕಾರ ಕೊಡುತ್ತಿದ್ದ ಹಾಲು, ಬ್ರೇಡ್‌ ತಿಂದು ದಿನ ದೂಡಿದ್ದೇನೆ. ನನಗೆ ಯಾವಾಗಲೂ ರೆಡ್‌ ಲೈಟ್ (ಕೆಂಪು ದೀಪದ) ಕಾರಿನಲ್ಲಿ ಓಡಾಡುವ ಅಧಿಕಾರಿ ಆಗಬೇಕೆಂಬ ಹುಚ್ಚು ಇತ್ತು. ಅದಕ್ಕಾಗಿ ಸತತ ಅಧ್ಯಯನ ಮಾಡುತ್ತಿದೆ. ಸ್ನಾತಕೋತ್ತರ ಪದವಿ ಪಡೆದು ಉಪನ್ಯಾಸಕನಾಗಿ ಆರಾಮ ಜೀವನ ನಡೆಸಬಹುದಿತ್ತು. ಆದರೆ ರೆಡ್‌ ಲೈಟ್ ಗಾಡಿಯ ಹುಚ್ಚು ನನಗೆ ಐಎಎಸ್‌ ಅಧಿಕಾರಿಯಾಗಿ ನಿಲ್ಲಿಸಿದೆ. ಸುತ್ತಲಿನ ಯಾವುದೇ ವಿಷಯ ನನಗೆ ಸಂಬಂಧವಿಲ್ಲ ಎಂದು ಅಧ್ಯಯನದಲ್ಲಿ ತೊಡಗಬೇಕು. ಅಂಥವರು ಬೇಕಾದಂಥ ಸಾಧನೆ ಮಾಡಬಹುದು ಎಂದು ಪ್ರತಿಪಾದಿಸಿದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರೇಮಸಾಗರ ದಾಂಡೇಕರ್‌, ಬೀದರ್‌ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜ್ಯೋತಿರ್ಮಯಾನಂದ, ಬೆಂಗಳೂರು ರಾಮಕೃಷ್ಣ ವೇದಾಂತ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಅಧ್ಯಯಾನಂದ ಮಹಾರಾಜ್‌, ಪತ್ರಕರ್ತ ಭೀಮರಾವ್‌ ಬುರಾನಪುರ, ಕಾಶೀನಾಥ ವಿಶ್ವಕರ್ಮ, ವಿಜಯಕುಮಾರ ಹೂಗಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next