Advertisement

ಮರದ ಮೇಲೊಂದು ಮನೆ ಕಟ್ಟಿದ ಮಕ್ಕಳು!

01:00 PM May 11, 2020 | Sriram |

ವಿಶೇಷ ವರದಿ-ಸುಳ್ಯ: ಬೆಳ್ಳಾರೆ ಪೇಟೆಯಿಂದ ಕೂಗಳತೆ ದೂರದ ತಡಗಜೆ ದೇವರ ಕಟ್ಟೆಯ ಬಳಿ ಮರದ ಮೇಲೆ ಮಕ್ಕಳೇ ನಿರ್ಮಿಸಿದ ಪುಟ್ಟ ಮನೆ ಗಮನ ಸೆಳೆಯುತ್ತಿದೆ!

Advertisement

ತಡಗಜೆ ನಿವಾಸಿ ಬೆಳ್ಳಾರೆ ಕೆಪಿಎಸ್‌ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಾದ ಭವಿಷ್‌, ಆಕಾಶ್‌, ಎಳೆಯ ಪ್ರಾಯದ ಬಾಲಕಿ ಭಕ್ತಿ, ಬಂಟ್ವಾಳದ ಆರನೇ ತರಗತಿ ವಿದ್ಯಾರ್ಥಿ ಆತ್ಮಿಕ್‌ ಈ ಮನೆಯ ನಿರ್ಮಾತೃಗಳು. ಆತ್ಮಿಕ್‌ ಬಂಟ್ವಾಳದಿಂದ ತಡಗಜೆಯ ಅಜ್ಜಿ ಮನೆಗೆ ಬಂದವ ಲಾಕ್‌ಡೌನ್‌ ಕಾರಣ ಊರಿಗೆ ಹೋಗಲಾಗದೆ ಇಲ್ವೇ ಉಳಿದುಕೊಂಡಿದ್ದ. ಈ ನಾಲ್ವರು ಸೇರಿಕೊಂಡು ಸ್ವಂತ ಯೋಚನೆಯಲ್ಲೇ ಮನೆ ನಿರ್ಮಿಸಿದರು.

ಕಾರ್ಟೂನ್ ವೀಕ್ಷಿಸಿ ಮನೆ ನಿರ್ಮಿಸಿದರು!
ಟ್ರೀ ಹೌಸ್‌ ನಿರ್ಮಾಣಕ್ಕೆ ಯೋಚನೆ ಹೊಳೆದದ್ದು ಟಿ.ವಿ. ವೀಕ್ಷಣೆ ವೇಳೆ. ಮರದಲ್ಲಿ ಮನೆ ಎನ್ನುವ ದೃಶ್ಯವನ್ನು ಶಿವ ಕಾರ್ಟೂನ್ ಮೂಲಕ ವೀಕ್ಷಿಸಿದ ಮಕ್ಕಳು ಅದನ್ನು ಪ್ರಯೋ ಗಿಸುವ ಪ್ರಯತ್ನ ಆರಂಭಿಸಿದರು. ಅದಕ್ಕಾಗಿ ಬಳ್ಳಿ ಜಾತಿಯ ಹೆಚ್ಚು ಎತ್ತರವಿಲ್ಲದ ಮರವನ್ನು ಆಯ್ಕೆ ಮಾಡಿಕೊಂಡರು. ಸಣ್ಣ-ಸಣ್ಣ ಮರದ ತುಂಡುಗಳನ್ನು ಜೋಡಿಸಿ ಮೆಟ್ಟಲು ಮಾಡಿ, ಅನಂತರ ಮರ ಏರಿ ಗೆಲ್ಲುಗಳು ನಡುವೆ ಮರದ ತುಂಡು ಜೋಡಿಸಲಾಯಿತು. ಅದರ ಮೇಲೆ ತೆಂಗಿನ ಗರಿಯ ಛಾವಣಿ ನಿರ್ಮಿಸಲಾಯಿತು. ಕೆಳ ಭಾಗದಲ್ಲಿ ವಿಶ್ರಾಂತಿಗೆಂದು ಉಯ್ನಾಲೆ, ಆಸನ ನಿರ್ಮಿಸಿದರು. 3 ವಾರಗಳ ಶ್ರಮದಿಂದ ಮನೆ ಸಿದ್ಧವಾಗಿದೆ. ಐದಾರು ಮಂದಿ ಕುಳಿತುಕೊಳ್ಳುವಷ್ಟು ಸ್ಥಳ ಇದೆ ಎನ್ನುತ್ತಾರೆ ಭವಿಷ್‌.

ಗೃಹ ಪ್ರವೇಶದ ಸಂಭ್ರಮ
ಮನೆ ಕಟ್ಟಿದ ಮೇಲೆ ಗೃಹ ಪ್ರವೇಶ ಮಾಡಬೇಕು ಎಂಬ ಯೋಚನೆ ಮಕ್ಕಳಲ್ಲಿ ಬಂತು. ಮೇ 10ರಂದು ಮುಹೂರ್ತ ನಿಗದಿ ಮಾಡಿ, ಹತ್ತಾರು ಮಂದಿಗೆ ಆಹ್ವಾನ ಕೊಟ್ಟರು. ಮನೆಯೊಳಗೆ ಕಾಲಿಡುವ ಮೂಲಕ ಗೃಹ ಪ್ರವೇಶ ಕೂಡ ನಡೆಯಿತು. ಅತಿಥಿಗಳಿಗೆ ಅವಲಕ್ಕಿ, ಜ್ಯೂಸ್‌ ನೀಡಲಾಯಿತು. 20ಕ್ಕೂ ಅಧಿಕ ಮಂದಿ ಬಂದಿದ್ದರು. ನಮಗೆ ಖುಷಿ ಆಯಿತು ಅನ್ನುತ್ತಾರೆ ಆತ್ಮಿಕ್‌, ಆಕಾಶ್‌.

 

Advertisement
Advertisement

Udayavani is now on Telegram. Click here to join our channel and stay updated with the latest news.

Next