ಹೊಸದಿಲ್ಲಿ : “ಭಗವಾನ್, ಅಲ್ಲಾ ಹೆಸರಿನಲ್ಲಿ ನಮ್ಮ ದೇಶದಲ್ಲಿ ಮಕ್ಕಳು ಹುಟ್ಟುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನಮ್ಮ ಜನಸಂಖ್ಯೆ 36 ಕೋಟಿ ಇತ್ತು; ಇವತ್ತು ಅದು 135 ಕೋಟಿಗೆ ಏರಿದೆ; ವರ್ಷಂಪ್ರತಿ ದೇಶದ ಜನಸಂಖ್ಯೆ ಎರಡು ಕೋಟಿ ಹೆಚ್ಚುತ್ತಿದೆ’ ಎಂದು ಬಿಜೆಪಿ ನಾಯಕ ವಿಜಯ್ ಪಾಲ್ ಸಿಂಗ್ ತೋಮರ್ ಅವರಿಂದು ರಾಜ್ಯಸಭೆಯಲ್ಲಿ ‘ದೇಶದಲ್ಲಿ ಜನಸಂಖ್ಯಾ ಸ್ಫೋಟ’ದ ಮೇಲಿನ ಚರ್ಚೆಯಲ್ಲಿ ಉದ್ಗರಿಸಿದರು.
“ಭೂಮಿಯ ಶೇ.2.4ರಷ್ಟು ಸ್ಥಳವನ್ನು ಮಾತ್ರವೇ ಭಾರತ ಹೊಂದಿದೆ; ಆದರೆ ಅದೇ ವೇಳೆ ವಿಶ್ವ ಜನಸಂಖ್ಯೆಯ ಶೇ.17.5ರಷ್ಟನ್ನು ಭಾರತ ಹೊಂದಿದೆ. ದೇಶದಲ್ಲಿನ ಅಭಿವೃದ್ಧಿ ಕಾರ್ಯಗಳೆಲ್ಲ ಜನಸಂಖ್ಯಾ ಸ್ಫೋಟದಿಂದಾಗಿ ನಿರರ್ಥಕವಾಗುತ್ತಿವೆ’ ಎಂದು ತೋಮರ್ ಹೇಳಿದರು.
ದೇಶದ ಜನಸಂಖ್ಯಾ ಸ್ಫೋಟವನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಚರ್ಚೆ ರಾಜ್ಯಸಭೆಯಲ್ಲಿ ನಡೆಯಿತು.
ಬಿಜೆಪಿಯ ಅಶೋಕ್ ಬಾಜಪೇಯಿ ಅವರು “ಚೀನವನ್ನು ಹಿಂದಿಕ್ಕಿ ಭಾರತ 2022ರಲ್ಲಿ ವಿಶ್ವದ ಅತ್ಯಧಿಕ ಜನಸಂಖ್ಯೆಯ ದೇಶವಾಗಿ ಹೊರಹೊಮ್ಮಲಿದ್ದು 2050ರ ವೇಳೆಗೆ ನಮ್ಮ ದೇಶ 1.66 ಶತಕೋಟಿ ಜನರಿಗೆ ಮನೆಯಾಗಲಿದೆ’ ಎಂದು ಹೇಳಿದರು. ಜನಸಂಖ್ಯಾ ಸ್ಫೋಟವನ್ನು ತಡೆಯಲು ಖಚಿತ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದವರು ಹೇಳಿದರು.
ಸಮಾಜವಾದಿ ಪಕ್ಷದ ಸದಸ್ಯ ಜಾವೇದ್ ಅಲಿ ಖಾನ್ ಅವರು ಮಾತನಾಡಿ, “ಅಲ್ಪಸಂಖ್ಯಾಕರ ಶಿಕ್ಷಣ ಮತ್ತು ಆರ್ಥಿಕ ನೆರವಿಗಾಗಿ ಹಲವಾರು ಸಂಸ್ಥೆಗಳನ್ನು ಸರಕಾರ ಸ್ಥಾಪಿಸಿದೆಯಾದರೂ ಸಕಾಲಿಕ ನೇಮಕಾತಿ ಇಲ್ಲದ ಕಾರಣಕ್ಕೆ ಅವು ಬಹುತೇಕ ನಿಷ್ಕ್ರಿಯವಾಗಿವೆ’ ಎಂದು ಹೇಳಿದರು.
ಮೌಲಾನಾ ಶಿಕ್ಷಣ ಪ್ರತಿಷ್ಠಾನಕ್ಕೆ ನಿರ್ದೇಶಕರಿಲ್ಲದೆ 3 ವರ್ಷಗಳಾಗಿವೆ; ಕೇವಲ 6 ತಿಂಗಳ ಹಿಂದಷ್ಟೇ ಈ ಹುದ್ದೆಗೆ ನೇಮಕಾತಿ ನಡೆದಿದೆ. ರಾಷ್ಟ್ರೀಯ ಅಲ್ಪಸಂಖ್ಯಾಕ ಅಭಿವೃದ್ಧಿ ಹಣಕಾಸು ನಿಗಮಕ್ಕೆ ಕೂಡ ಅಧ್ಯಕ್ಷರಿಲ್ಲದೆ 3 ವರ್ಷಗಳಾಗಿವೆ; ಕೇವಲ 3 ತಿಂಗಳ ಹಿಂದಷ್ಟೇ ಈ ನೇಮಕಾತಿ ಮಾಡಲಾಗಿದೆ’ ಎಂದು ಖಾನ್ ಹೇಳಿದರು.