Advertisement

ಪೋಷಕರಿಗೇ ಬೇಡವಾದ ಆರ್‌ಟಿಇ

06:00 AM Jul 31, 2018 | Team Udayavani |

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್‌ಟಿಇ) ಉಚಿತ ಸೀಟು ಲಭ್ಯವಾದರೂ, ಸುಮಾರು 24 ಸಾವಿರ ಪಾಲಕ, ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಆರ್‌ಟಿಇ ಅಡಿ ದಾಖಲಿಸಿಲ್ಲ.

Advertisement

ಪೂರ್ವಪ್ರಾಥಮಿಕ ಹಾಗೂ ಪ್ರಾಥಮಿಕ ತರಗತಿಗಳ 2018-19ನೇ ಸಾಲಿನ ಪ್ರವೇಶ ಪ್ರಕ್ರಿಯೆ  ಪೂರ್ಣಗೊಂಡಿದ್ದು, ರಾಜ್ಯದ 14,107 ಖಾಸಗಿ ಶಾಲೆಗಳಲ್ಲಿ ಶೇ.25 ರಂತೆ 1,52,117 ಸೀಟುಗಳನ್ನು ಮೀಸಲಿಡಲಾಗಿತ್ತು. ಲಭ್ಯವಿರುವ ಉಚಿತ ಸೀಟುಗಳಿಗೆ 2.38 ಲಕ್ಷಕ್ಕೂ ಅಧಿಕ ಅರ್ಜಿ ಬಂದಿತ್ತು. ಆನ್‌ಲೈನ್‌ ಲಾಟರಿ ಪ್ರಕ್ರಿಯೆ ಮೂಲಕ ಮೂರು ಸುತ್ತಿನಲ್ಲಿ ಸೀಟು ಹಂಚಿಕೆ ಮಾಡಲಾಗಿತ್ತು.

ಮೊದಲ ಸುತ್ತಿನಲ್ಲಿ ಸೀಟು ಪಡೆದ 1,11,518 ಮಕ್ಕಳಲ್ಲಿ 97,868 ಮಕ್ಕಳು, 2ನೇ ಸುತ್ತಿನಲ್ಲಿ ಸೀಟು ಪಡೆದ 13,119 ಮಕ್ಕಳಲ್ಲಿ 7,776 ಮಕ್ಕಳು ಹಾಗೂ 3ನೇ ಸುತ್ತಿನಲ್ಲಿ ಸೀಟು ಪಡೆದ 19,123 ಮಕ್ಕಳಲ್ಲಿ 14,034 ವಿದ್ಯಾರ್ಥಿಗಳು ಮಾತ್ರ ಸಂಬಂಧಪಟ್ಟ ಶಾಲೆಗೆ ದಾಖಲಾಗಿದ್ದಾರೆ. ಒಟ್ಟು 1,43,760 ಮಕ್ಕಳಲ್ಲಿ 1,19,678 ಮಕ್ಕಳು ಮಾತ್ರ ಆರ್‌ಟಿಇ ಸೀಟಿನಡಿ ಪ್ರವೇಶ ಪಡೆದಿದ್ದಾರೆ. ಉಳಿದ 24,082 ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ಆರ್‌ಟಿಇ ಅಡಿ ಖಾಸಗಿ ಶಾಲೆಗೆ ಸೇರಿಸಿಲ್ಲ.

ಪ್ರಸಕ್ತ ಸಾಲಿನಲ್ಲಿ ಲಭ್ಯವಿದ್ದ 1.52 ಲಕ್ಷ ಸೀಟುಗಳಲ್ಲಿ ಹಂಚಿಕೆಯಾಗಿ ಉಳಿದ ಮತ್ತು ದಾಖಲಾತಿ ಪಡೆಯದ ಮಕ್ಕಳು ಸೇರಿ 32,439 ಸೀಟುಗಳು ಭರ್ತಿಯಾಗದೇ ಉಳಿದಿವೆ. ಉಡುಪಿಯಲ್ಲಿ 656, ದಕ್ಷಿಣ ಕನ್ನಡದಲ್ಲಿ 843, ಬೆಂಗಳೂರಿನ ಮೂರು ಜಿಲ್ಲೆಗಳಲ್ಲಿ 6,812, ಬಳ್ಳಾರಿಯಲ್ಲಿ 722, ಹಾಸನದಲ್ಲಿ 699, ಮೈಸೂರಿನಲ್ಲಿ 1313, ವಿಜಯಪುರದಲ್ಲಿ 1,663 ಸೀಟುಗಳು ಭರ್ತಿಯಾಗದೇ ಉಳಿದುಕೊಂಡಿವೆ.3,245 ಶಾಲೆಗಳಲ್ಲಿ ಲಭ್ಯವಿದ್ದ 18 ಸಾವಿರ ಆರ್‌ಟಿಇ ಸೀಟಿಗೆ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಿಲ್ಲ. 1,171 ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ ಆರ್‌ಟಿಸಿ ಸೀಟುಗಳಿಗಿಂತ ಕಡಿಮೆ ಅರ್ಜಿ ಸಲ್ಲಿಕೆಯಾಗಿದೆ.

ರಾಜಧಾನಿ ಬೆಂಗಳೂರು ಸೇರಿ ಮೈಸೂರು, ಮಂಗಳೂರು ಮೊದಲಾದ ಜಿಲ್ಲೆಗಳ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಸೀಟಿಗೆ ಹೆಚ್ಚಿನ ಬೇಡಿಕೆ ಇತ್ತು. ಕೆಲವೊಂದು ಶಾಲೆಗಳಲ್ಲಿ ಮೂಲ ಸೌಲಭ್ಯ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿಲ್ಲ. ಬಹುತೇಕರು ತಮ್ಮ ವ್ಯಾಪ್ತಿಯಲ್ಲಿ ಹಲವು ಶಾಲೆಗಳಿದ್ದರೂ, ಪ್ರತಿಷ್ಠಿತ ಒಂದೆರಡು ಶಾಲೆಗೆ ಮಾತ್ರ ಅರ್ಜಿ ಹಾಕಿರುವುದರಿಂದ ಅರ್ಹರಿಗೂ ಸೀಟು ತಪ್ಪಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

Advertisement

1,078 ಕೋಟಿ ಬಿಡುಗಡೆ:
ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಗೆ ಸೇರುವ ಮಗುವಿನ ಪೂರ್ತಿ ವೆಚ್ಚ ಸರ್ಕಾರವೇ ಭರಿಸುತ್ತದೆ. ಇದಕ್ಕಾಗಿ ಪ್ರತಿ ವರ್ಷ 150 ಕೋಟಿಗೂ ಅಧಿಕ ರೂ.ಗಳನ್ನು ಮೀಸಲಿಡಲಾಗುತ್ತಿದೆ. ಈವರೆಗೆ ಆರ್‌ಟಿಇ ಅಡಿ ದಾಖಲಾಗಿರುವ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಗಾಗಿ 1,078 ಕೋಟಿರೂ.ಗಳನ್ನು ಖಾಸಗಿ ಆಡಳಿತ ಮಂಡಳಿಗೆ ಸರ್ಕಾರದಿಂದ ನೀಡಲಾಗಿದೆ.

ಕೇರಳ ಮಾದರಿಗೆ ಚಿಂತನೆ
ಕೇರಳದಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಅನುಷ್ಠಾನಗೊಳಿಸಿದ ಮಾದರಿಯನ್ನು ರಾಜ್ಯದಲ್ಲೂ ಜಾರಿಗೆ ಚಿಂತನೆ ನಡೆದಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಲಭ್ಯವಿರುವ ಸೀಟುಗಳನ್ನು ಆರ್‌ಟಿಇ ಮಕ್ಕಳಿಗೆ ಹಂಚಿಕೆಯಾದ ನಂತರ ಉಳಿದ ಸೀಟುಗಳನ್ನು ಖಾಸಗಿ ಶಾಲೆಗೆ ನೀಡುವ ಮಾದರಿ ಇದಾಗಿದೆ. ಖಾಸಗಿ ಶಾಲೆಗೆ ಸರ್ಕಾರದಿಂದ ಯಾವುದೇ ಅನುದಾನ ನೀಡುವುದಿಲ್ಲ. ಆರ್‌ಟಿಇ ಅಡಿ ಸೇರಿದ ಮಕ್ಕಳಿಗೆ ಶಾಲೆಯಿಂದ ಸೌಲಭ್ಯ ಒದಗಿಸಬೇಕಾಗುತ್ತದೆ. ರಾಜ್ಯ ಸರ್ಕಾರ ಇನ್ನೂ ಈ ತೀರ್ಮಾನ ತೆಗೆದುಕೊಂಡಿಲ್ಲ.

ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಗಳಿಗೆ ಸೇರಿದ ವಿದ್ಯಾರ್ಥಿಗಳ ಪಾಲಕರು ಸಾರಿಗೆ ವೆಚ್ಚ ಹೊರತುಪಡಿಸಿ ಬೇರೆ ಯಾವುದೇ ಶುಲ್ಕ ಪಾವತಿಸುವಂತಿಲ್ಲ. ಈ ವರ್ಷ ಸುಮಾರು 30 ಸಾವಿರ ಸೀಟುಗಳು ಭರ್ತಿಯಾಗದೇ ಉಳಿದಿದೆ.
– ಪಾಲಾಕ್ಷಯ್ಯ, ಆರ್‌ಟಿಇ ಸಮಾಲೋಚಕ

ಮುಖ್ಯಾಂಶಗಳು
ಶಾಲೆಗಳ ಸಂಖ್ಯೆ: 14,107
ಲಭ್ಯ ಸೀಟುಗಳು: 1,43,760 
ಸೀಟು ಪಡೆದವರು: 1,19,678 
ದಾಖಲಿಸದವರು: 24,082 

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next