Advertisement

ಕೋವಿಡ್ ನಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳನ್ನು ನೇರವಾಗಿ ದತ್ತು ಪಡೆಯಲು ಅವಕಾಶವಿಲ್ಲ

11:42 AM May 18, 2021 | Team Udayavani |

ಬೆಂಗಳೂರು: ಕೋವಿಡ್ ಎರಡನೇ ಅಲೆಯಲ್ಲಿ ಯುವಕರಲ್ಲಿ ಸೋಂಕು ಹೆಚ್ಚಾಗಿರುವುದು ಕಾಣಿಸುತ್ತಿದೆ. ಎರಡನೆಯ ಅಲೆಯಲ್ಲಿ ತಂದೆ ತಾಯಿ ತೀರಿ ಹೋಗಿ ಮಕ್ಕಳು ಅನಾಥವಾಗಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಪ್ರತಿ ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ಚೆನ್ನಮ್ಮ ಶಾಲೆಗಳಲ್ಲಿ ತೆರೆಯಲು ತೀರ್ಮಾನ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂವತ್ತು ಜಿಲ್ಲೆಗಳಲ್ಲಿ ಕೋವಿಡ್ ಮಕ್ಕಳಿಗಾಗಿ ಕೊವಿಡ್ ಕೇರ್ ಕೇಂದ್ರ ಆರಂಭಿಸಲಾಗುತ್ತಿದೆ. 993 ಸಂಸ್ಥೆಗಳು ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. 33 ಮಕ್ಕಳ ದತ್ತು ಕೇಂದ್ರಗಳಿವೆ. 1098 ನಂಬರ್ ಗೆ ಕಾಲ್ ಮಾಡಬಹುದು. ಈಗಾಗಲೇ 23613 ಕರೆಗಳು ಬರುತ್ತಿವೆ. ಪ್ರತಿ ತಿಂಗಳು ಕೊವಿಡ್ ಸಂಬಂಧಿತ 137 ಕರೆಗಳು ಬರುತ್ತಿವೆ. ಮೂವತ್ತು ಜಿಲ್ಲೆಗಳಲ್ಲಿ ಮಕ್ಕಳು ಹೆಚ್ಚಾದರೆ ವಿಶೇಷ ಮಕ್ಕಳ ಶಾಲೆಗಳನ್ನು ತೆಗೆದುಕೊಳ್ಳಲು ತೀರ್ಮಾನ ಮಾಡಲಾಗಿದೆ ಎಂದರು.

ನೇರವಾಗಿ ದತ್ತು ಪಡೆಯಲು ಅವಕಾಶವಿಲ್ಲ: ತಂದೆ ತಾಯಿ ಕಳೆದುಕೊಂಡ ಮಗುವನ್ನು ಹತ್ತಿರದ ಸಂಬಂಧಿಗಳು ನೋಡಿಕೊಳ್ಳಲು ಒಪ್ಪಿಕೊಂಡರೆ ಅವರಿಂದ ಒಪ್ಪಿಗೆ ಪತ್ರ ಬರೆಸಿಕೊಂಡು ಅವರಿಗೆ ಜವಾಬ್ದಾರಿ ನೀಡಲಾಗುವುದು. ಕೋವಿಡ್ ಕೇರ್ ಕೇಂದ್ರಗಳಲ್ಲಿ ಯಾವುದೇ ರೀತಿಯ ಮಾನಸಿಕ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. 7ರಿಂದ 18 ವರ್ಷದ ಹೆಣ್ಣು ಮಕ್ಕಳನ್ನು ಪ್ರತ್ಯೇಕವಾಗಿ ಇರಿಸಲು ತೀರ್ಮಾನಿಸಲಾಗಿದೆ ಎಂದರು.

ಅನಾಥ ಮಕ್ಕಳನ್ನು ದತ್ತು ಕೇಂದ್ರದ ಮೂಲಕ ದತ್ತು ನೀಡಲಾಗುವುದು. ನೇರವಾಗಿ ಮಕ್ಕಳನ್ನು ದತ್ತು ಪಡೆಯಲು ಯಾರಿಗೂ ಅವಕಾಶವಿಲ್ಲ. ಯಾವುದೇ ಮಗುವಾಗಿದ್ದರೂ ಅದನ್ನು ಇಲಾಖೆ ವ್ಯಾಪ್ತಿಗೆ ಒಪ್ಪಿಸಿ ನಂತರ ದತ್ತು ಪಡೆಯುವ ಪ್ರಕ್ರಿಯೆ ಮಾಡಬೇಕು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸಂದೇಶಗಳನ್ನು ನಂಬದೆ ನೇರವಾಗಿ ಪರಿಶೀಲಿಸಬೇಕು. ಮಕ್ಕಳ ಭವಿಷ್ಯದ ಜೊತೆಗೆ ಆಟವಾಡುವುದು ಬೇಡ. ಇಬ್ಬರು ಮಕ್ಕಳು ಅನಾಥವಾಗಿದ್ದರೆ ಇಬ್ಬರನ್ನೂ ಒಟ್ಟಿಗೆ ಇಡಲು ಕ್ರಮ ಕೈಗೊಳ್ಳಲಾಗುವುದು. ನೇರವಾಗಿ ದತ್ತು ಪಡೆಯುವುದು ಕಾನೂನು ಬಾಹಿರವಾಗಿದ್ದು, ಅದರ ವಿರುದ್ದ ಬಾಲ ನ್ಯಾಯ ಕಾಯ್ದೆ 2015 ಹಾಗೂ ಅಡಾಪ್ಶನ್ ರೆಗ್ಯುಲೇಷನ್ 2017 ರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಜೊಲ್ಲೆ ಹೇಳಿದರು.

ಇದನ್ನೂ ಓದಿ:ಕಾಫಿನಾಡಿಗರ ಮನ ಗೆದ್ದಿದ್ದ ಸಹಕಾರ ಸಾರಿಗೆಗೆ ಬೀಗ: ಬಿಗಿ ಪೊಲೀಸ್ ಭದ್ರತೆಯಲ್ಲಿ ಜಪ್ತಿ

Advertisement

ಎರಡನೆ ಅಲೆಯಲ್ಲಿ ಮಂಡ್ಯ ಹಾಗೂ ಚಾಮರಾಜನಗರದಲ್ಲಿ ಇಬ್ಬರು ಮಕ್ಕಳು ಅನಾಥವಾಗಿವೆ. ಮಂಡ್ಯದಲ್ಲಿ ಅವರ ಅಜ್ಜ- ಅಜ್ಜಿ ನೋಡಿಕೊಳ್ಳುತ್ತಿದ್ದಾರೆ. ಚಾಮರಾಜನಗರದಲ್ಲಿ ಅವರ ಚಿಕ್ಕಮ್ಮ ನೋಡಿಕೊಳ್ಳುತ್ತಿದ್ದಾರೆ. ಅನಾಥ ಮಗುವಿಗೆ ಭಾಗ್ಯಲಕ್ಷ್ಮಿ ಮಾದರಿ ಯೋಜನೆ ಜಾರಿ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಹಾಗೂ ದಾನಿಗಳಿಂದ ಅವರ ಶಿಕ್ಷಣ ವ್ಯವಸ್ಥೆ ಮಾಡಲಾಗುವುದು. ಶೈಕ್ಷಣಿಕವಾಗಿ ದತ್ತು ತೆಗೆದುಕೊಳ್ಳಲು ಬಂದರೆ ಅವರಿಗೆ ಸರ್ಕಾರ ಸಹಕಾರ ನೀಡುವುದು ಎಂದು ಮಾಹಿತಿ ನೀಡಿದರು.

ಯಾವುದೇ ಮಠಾಧೀಶರು ನೇರವಾಗಿ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಅವಕಾಶವಿಲ್ಲ. ಅವರು ಸರ್ಕಾರವನ್ನು ಸಂಪರ್ಕಿಸಿ ಕಾನೂನು ಪ್ರಕಾರ ದತ್ತು ಪಡೆಯಬೇಕು. ಆರು ಜಿಲ್ಲೆಗಳಲ್ಲಿ ದತ್ತು ಕೇಂದ್ರಗಳಿಲ್ಲ, ಅಲ್ಲಿ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಮುಂದೆ ಬಂದರೆ ಸರ್ಕಾರ ಸಹಕಾರ ನೀಡಲಿದೆ ಎಂದರು.

30 ಲಕ್ಷ ರೂ.ಪರಿಹಾರ: ಅಂಗನವಾಡಿ ಕಾರ್ಯಕರ್ತೆಯರಿಗೆ ವಾರಿಯರ್ಸ್ ಎಂದು ತೀರ್ಮಾನಿಸಲಾಗಿದೆ. ಕಳೆದ ವರ್ಷ 25 ಜನ ಅಂಗನವಾಡಿ ಕಾರ್ಯಕರ್ತೆಯರು ನಿಧನ ಹೊಂದಿದ್ದಾರೆ.  ಅವರಲ್ಲಿ 5 ಜನರಿಗೆ 30 ಲಕ್ಷ ರೂ.ಪರಿಹಾರ ನೀಡಲಾಗಿದೆ. ಉಳಿದ 20 ಜನರಿಗೆ ನೀಡಲಾಗುತ್ತಿದೆ. ಈಗಲೂ ಈ ಯೋಜನೆ ಜಾರಿಯಲ್ಲಿದೆ ಎಂದರು.

ಮೂರನೆ ಅಲೆಯಲ್ಲಿಯೂ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ಯಾರೋ ಕಳಿಸಿದ ಸಂದೇಶವನ್ನು ಸುಮ್ಮನೆ ಫಾರ್ವರ್ಡ್ ಮಾಡಬಾರದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next