ತುಮಕೂರು: ಪಾಶ್ಚಾತ್ಯರ ಅಂಧಾನುಕರಣೆಯಿಂದ ಇಂದಿನ ಮಕ್ಕಳಲ್ಲಿ ಭಾರತೀಯ ಪರಂಪರೆ, ಸಂಸ್ಕೃತಿ ಹಾಗೂ ಸಂಸ್ಕಾರದ ಬಗ್ಗೆ ಅಸಡ್ಡೆ ಮತ್ತು ಕೀಳರಿಮೆ ಉಂಟಾಗಿದೆ. ಇದನ್ನು ಹೋಗಲಾಡಿಸಿ ಮಕ್ಕಳಲ್ಲಿ ಸಂಸ್ಕಾರದ ತಿಳಿವಳಿಕೆ ಮೂಡಿಸುವ ಮಹತ್ತರ ಹೊಣೆಗಾರಿಕೆ ಪೋಷಕರ ಮೇಲಿದೆ ಎಂದು ಹೆಬ್ಬೂರು ಕೋದಂಡಾಶ್ರಮಮಠದ ಪೀಠಾಧಿಪತಿ ಶ್ರೀ ಮಾಧವಾಶ್ರಮ ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶ್ರೀ ಶಾರದ ಶಂಕರ ಮಹಿಳಾ ಮಂಡಳಿ ಟ್ರಸ್ಟ್ ಏರ್ಪಡಿಸಿದ್ದ “ಶ್ರೀ ಶಾರದಮ್ಮನವರ ವಾರ್ಷಿಕೋತ್ಸವ ಮತ್ತು ಲಲಿತಾ ಹೋಮ’ದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ತಾಯಿಗೆ ಪ್ರಥಮ ಸ್ಥಾನ: ಮಕ್ಕಳಿಗೆ ಸಂಸ್ಕಾರದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಹಿಳೆ ಪಾತ್ರ ಅತ್ಯಂತ ಪ್ರಮುಖ. “ಮಾತೃದೇವೋಭವ’ ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ್ದು, ತಾಯಿಗೆ ಪ್ರಥಮ ಸ್ಥಾನ ನೀಡಲಾಗಿದೆ. ಹಿಂದೆ ಮಹಿಳೆ ಎಂದರೆ ಮನೆಗಷ್ಟೇ ಸೀಮಿತ ಎಂಬಂತಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಮಹಿಳೆ ಪುರುಷರಿಗೆ ಸರಿಸಮನಾಗಿ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.
“ಲಿವಿಂಗ್ ಟುಗೆದರ್’ ಎಂಬ ಹೊಸ ರೋಗ ಪ್ರಾರಂಭವಾಗಿದ್ದು, ಇದು ನಮ್ಮ ಸಂಸ್ಕೃತಿ ಮೇಲೆ ಸವಾರಿ ಮಾಡುತ್ತಿದೆ. ಇದನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಲು ಪ್ರತಿಯೊಬ್ಬರೂ ಆಲೋಚಿಸಬೇಕು. ಇಳಿ ವಯಸ್ಸಿನಲ್ಲಿಯೂ ಇಂದಿರಮ್ಮ ಸುಂದರರಾವ್ ಮಹಿಳೆಯರನ್ನು ಸಂಘಟಿಸಿ, ಅವರಲ್ಲಿ ಸಂಸ್ಕೃತಿ, ಪರಂಪರೆ ಬಗ್ಗೆ ಅರಿವು ಮೂಡಿಸುತ್ತಿರುವುದು ಪ್ರತಿಯೊಬ್ಬರಿಗೂ ಮಾದರಿ ಎಂದರು.
ಸೌಲಭ್ಯ ಕಲ್ಪಿಸುವ ಭರವಸೆ: ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಬಿ.ವಿ.ಕುಮಾರ್ ಮಾತನಾಡಿ, ವಿಪ್ರರಿಗೆ ವಿದ್ಯೆ ಶ್ರೇಷ್ಟ. ಕಡುಬಡತನ ಹಾಗೂ ಮೂಲ ಸೌಲಭ್ಯಗಳ ಕೊರತೆಯ ನಡುವೆಯೂ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಸೂಕ್ತ ಸೌಲಭ್ಯ ಕಲ್ಪಿಸುವುದಾಗಿ ಹೇಳಿದರು. ಅತಿಥಿ ಉಪನ್ಯಾಸಕಿ ರಮ್ಯಾ ಕಲ್ಲೂರು, ಲಲಿತಾ ಹೋಮ ಹಾಗೂ ದೇವಿ ಮಹಾತ್ಮೆಯ ವೈಶಿಷ್ಟ್ಯತೆ ವಿವರಿಸಿದರು.
ಜಿಲ್ಲಾ ಬ್ರಾಹ್ಮಣ ಮಹಸಭಾ ಅಧ್ಯಕ್ಷ ನಾಗರಾಜರಾವ್, ಶಂಕರ ಸೇವಾ ಸಮಿತಿ ಉಪಾಧ್ಯಕ್ಷ ಸಂಪಿಗೆ ವೆಂಕಟನಾರಾಯಣ, ಸಂಘದ ಅಧ್ಯಕ್ಷೆ ಇಂದಿರಮ್ಮ ಸುಂದರರಾವ್, ಕಾರ್ಯದರ್ಶಿ ಸಿ.ಆರ್.ಸೌಮ್ಯಾ, ಕೆ.ನರಸಿಂಹಮೂರ್ತಿ, ನಿವೃತ್ತ ಪ್ರಾಚಾರ್ಯ ಜಿ.ಕೆ.ಗುಂಡಣ್ಣ, ನಿವೃತ್ತ ಶಿಕ್ಷಕಿ ಉಷಾ ಅನಂತರಾಮಯ್ಯ ಉಪಸ್ಥಿತರಿದ್ದರು.
ವಾರ್ಷಿಕೋತ್ಸವದ ಅಂಗವಾಗಿ ಬೆಳಗಿನಿಂದಲೇ ವಿಶೇಷ ಪೂಜೆ, ಲಲಿತಾಹೋಮ, ಪೂರ್ಣಾಹುತಿ ಮಠಮುದ್ರೆ ಶ್ರೀನಿವಾಸ ಜೋಯಿಸ್ ನೇತೃತ್ವದಲ್ಲಿ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ತುಮಕೂರು, ತಿಪಟೂರು, ಬೆಂಗಳೂರು ಸೇರಿ ವಿವಿಧೆಡೆಗಳಿಂದ ಭಕ್ತಾದಿಗಳು, ವಿವಿಧ ಬ್ರಾಹ್ಮಣ ಉಪಪಂಗಡಗಳ ಪದಾಧಿಕಾರಿಗಳು ಭಾಗವಹಿಸಿದ್ದರು.