Advertisement

Health; ಬಾಲ್ಯದ ಆಘಾತಗಳು ಮತ್ತು ಮಾನಸಿಕ ಆರೋಗ್ಯದ ಮೇಲೆ ಅವುಗಳ ದೀರ್ಘಕಾಲೀನ ಪರಿಣಾಮಗಳು

06:11 PM Sep 23, 2024 | Team Udayavani |

ನಿಮ್ಮ ಮಧುಮೇಹ ಅಥವಾ ಕ್ಯಾನ್ಸರ್ ಬಾಲ್ಯದಲ್ಲಿ ನೀವು ಅನುಭವಿಸಿದ ಆಘಾತಗಳಿಂದ ಉಂಟಾಗಿದೆ ಎಂದು ವೈದ್ಯರು ನಿಮಗೆ ಹೇಳಿದರೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಮತ್ತು ನೀವು ಹೇಗೆ ಅದನ್ನು ನಿಭಾಯಿಸುತ್ತೀರಿ?

Advertisement

ʻಆಘಾತಕಾರಿ ಬಾಲ್ಯದ ಅನುಭವಗಳುʼ (ACE), ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆಗಳಿಗೆ ಮತ್ತು ರೋಗಗಳಿಗೆ ಕಾರಣವಾಗುವ ಸಂಕೀರ್ಣವಾದ ನಡವಳಿಕೆಯನ್ನು ವ್ಯಕ್ತಿಗಳಲ್ಲಿ ರೂಪಿಸುತ್ತವೆ. ಇದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಅಪ್ಪು ಎಂಬ 40 ವರ್ಷದ ವ್ಯಕ್ತಿಗೆ ಇತ್ತೀಚೆಗೆ ಮಧುಮೇಹ ಇರುವುದು ದೃಢಪಟ್ಟಿತು. ತೂಕ ಇಳಿಸಿಕೊಳ್ಳಲು, ಆಹಾರ ಕ್ರಮವನ್ನು ಬದಲಾಯಿಸಲು ಮತ್ತು ಜೀವನ ಶೈಲಿಯನ್ನು ಮಾರ್ಪಡಿಸಿಕೊಳ್ಳಲು ಅವರಿಗೆ ಸೂಚಿಸಲಾಯಿತು. ನಿಯಮಿತ ಆರೋಗ್ಯ ತಪಾಸಣೆಯ ಸಮಯದಲ್ಲಿ ಅವರಿಗೆ ಈ ವಿಷಯ ಗೊತ್ತಾಗಿತ್ತು. ಅಪ್ಪು ಕೌಟುಂಬಿಕ ಅಥವಾ ಅನುವಂಶಿಕ ಮಧುಮೇಹದ ಇತಿಹಾಸ ಹೊಂದಿದ್ದರೂ, ಅವರ ತಂದೆ ಔಷಧಗಳನ್ನು ಪ್ರಾರಂಭಿಸಿದಾಗ ಅವರಿಗೆ 52 ವರ್ಷ ವಯಸ್ಸಾಗಿತ್ತು. ಅಪ್ಪು ಇಷ್ಟು ಬೇಗ ತನಗೆ ಮಧುಮೇಹ ಯಾಕೆ ಬಂದಿತು ಎಂದು ಚಕಿತರಾದರು. ಕೆಲವು ಆನ್‌ಲೈನ್‌ ಸಂಶೋಧನೆಯ ನಂತರ, ಸಂಸ್ಕರಿಸಿದ ಹಿಟ್ಟು, ಕಾರ್ಬೊನೇಟೆಡ್ ಪಾನೀಯಗಳು, ಕೆಲಸದ ಒತ್ತಡ ಮತ್ತು ಅವರ ಪ್ರಸ್ತುತ ಜೀವನಶೈಲಿಯಂತಹ ಅಂಶಗಳು ಇದಕ್ಕೆ ಕಾರಣ ಎಂದು ಗೊತ್ತಾಗಿತ್ತು.

ಗ್ರಾಹಕರ (Clients) ಕರೆಗಳನ್ನು ಸ್ವೀಕರಿಸುವುದಕ್ಕಾಗಿ ಅಪ್ಪು ಅವರು ತಡರಾತ್ರಿವರೆಗೂ ಕೆಲಸ ಮಾಡುತ್ತಾರೆ. ಹೀಗೆ ಮಾಡಿದಾಗಲೆಲ್ಲಾ ಅವರು ತೀವ್ರ ಒತ್ತಡದಲ್ಲಿರುತ್ತಾರೆ ಮತ್ತು ಒತ್ತಡ ನಿವಾರಣೆಗಾಗಿ ಅತಿಯಾಗಿ ಆಹಾರವನ್ನು ಸೇವಿಸುತ್ತಾರೆ (Stress eating) ಎಂದು ಅಪು ಅವರ ಪತ್ನಿ ಹೇಳಿದ್ದಾರೆ. ಸಮಯಕ್ಕೆ ಸರಿಯಾಗಿ ಕೆಲಸವನ್ನು ಮುಗಿಸುವ ವಿಚಾರದಲ್ಲಿ ತಾವು ತುಂಬಾ ಕಳವಳದಿಂದ ಇರುವುದಾಗಿ ಸ್ವತಃ ಅಪ್ಪು ಒಪ್ಪಿಕೊಳ್ಳುತ್ತಾರೆ. ಅವರು ಬೇರೆ ಬೇರೆ ದೇಶದಲ್ಲಿರುವ ಗ್ರಾಹಕರಿಗಾಗಿ ಆ ದೇಶಗಳ ವಿಭಿನ್ನ ಸಮಯದ ವಲಯಗಳಿಗೆ ಅನುಗುಣವಾಗಿ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಪ್ರತಿಕೂಲ ಸಮಯದಲ್ಲಿ ಅವರು ಕೆಲಸ ಮಾಡಬೇಕಾಗುತ್ತದೆ. ಅವರು ತಮ್ಮ 10ನೇ ತರಗತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಾಗ ಒತ್ತಡ ನಿವಾರಣೆಗಾಗಿ ಆಹಾರ ಸೇವನೆಯ (Stress eating) ಅಭ್ಯಾಸವನ್ನು ಪ್ರಾರಂಭಿಸಿದರು.

ʻಜೆಇಇʼ ಪ್ರವೇಶ ಪರೀಕ್ಷೆಗೆ ದಿನಕ್ಕೆ 12-14 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದಾಗ ಸುಮಾರು ಆರು ತಿಂಗಳಲ್ಲಿ 10-15 ಕೆಜಿ ತೂಕ ಹೆಚ್ಚಾಗಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಅವರು 9ನೇ ತರಗತಿಯವರೆಗೆ ತಮ್ಮ ಅಧ್ಯಯನದ ಬಗ್ಗೆ ಅಷ್ಟು ಗಂಭೀರವಾಗಿರಲಿಲ್ಲ. ಐಐಟಿ ಪ್ರವೇಶ ಪರೀಕ್ಷೆ ಪಾಸು ಮಾಡುವ ಬಯಕೆಯನ್ನು ವ್ಯಕ್ತಪಡಿಸಿದಾಗ, ಕೇವಲ 70% ಅಂಕಗಳನ್ನು ಗಳಿಸಿದ್ದಕ್ಕಾಗಿ ಸೋದರ ಸಂಬಂಧಿಗಳು ಮತ್ತು ಕುಟುಂಬದಿಂದ ಅಪಹಾಸ್ಯಕ್ಕೊಳಗಾಗಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಅಪಹಾಸ್ಯಕ್ಕೊಳಗಾದ ಆ ಅನುಭವವು ಅವರಲ್ಲಿ ಅಸುರಕ್ಷಿತ ಭಾವನೆಯನ್ನು ಉಂಟುಮಾಡಿತ್ತು. ಹಾಗೆ ನೋಡಿದರೆ, ಅವರಲ್ಲಿ ಅಸುರಕ್ಷತೆ ಭಾವ ಮೂಡಿಸಿದ ಅನೇಕ ಅಂಶಗಳಿದ್ದವು. ಅದರಲ್ಲಿ ಇದು ಮೊದಲನೆಯದು. ಇಂದಿಗೂ, ಅವರು ತಮ್ಮ ಕೆಲಸ ಮತ್ತು ಪ್ರಯತ್ನಗಳನ್ನು ಗುರುತಿಸುತ್ತಿಲ್ಲ, ಸಾಕಷ್ಟು ಪ್ರಶಂಸೆ ದೊರೆಯುತ್ತಿಲ್ಲ ಎಂಬ ಕಳವಳ ಅವರನ್ನು ಕಾಡುತ್ತದೆ.

Advertisement

ಬಾಲ್ಯದಲ್ಲಾದ ಆಘಾತ ಮತ್ತು ಆರೋಗ್ಯ

1998ರಲ್ಲಿ ಪ್ರಕಟಗೊಂಡ ʻಆಘಾತಕಾರಿ ಬಾಲ್ಯದ ಅನುಭವಗಳು (ACE) ಅಧ್ಯಯನʼವು ಈ ವಿಚಾರದ ಬಗ್ಗೆ ಗಮನಾರ್ಹವಾಗಿ ಬೆಳಕು ಚೆಲ್ಲಿತು. ನಿಂದನೆ ಮತ್ತು ನಿರ್ಲಕ್ಷ್ಯದಂತಹ ಆಘಾತಕಾರಿ ಬಾಲ್ಯದ ಅನುಭವಗಳು ಹಾಗೂ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ನಡುವಿನ ಸಂಬಂಧವನ್ನು ಬಹಿರಂಗಪಡಿಸಿತು. ಹೃದ್ರೋಗ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳೂ ಇದರಲ್ಲಿ ಸೇರಿವೆ. ಉದಾಹರಣೆಗೆ, ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರತಿಕೂಲ ಅನುಭವಗಳನ್ನು ಹೊಂದಿರುವ ವ್ಯಕ್ತಿಗಳು, ಅಂತಹ ಯಾವುದೇ ಆಘಾತಗಳಿಗೆ ಒಳಗಾಗದವರಿಗೆ ಹೋಲಿಸಿದರೆ ಹೃದ್ರೋಗವನ್ನು ಹೊಂದುವ ಸಾಧ್ಯತೆ ಎರಡು ಪಟ್ಟು ಹೆಚ್ಚಾಗಿರುತ್ತದೆ ಎಂದು ಹೇಳುವ ಮೂಲಕ ಆರಂಭಿಕ ಮಧ್ಯಸ್ಥಿಕೆ ಮತ್ತು ಬೆಂಬಲದ ಅಗತ್ಯವನ್ನು ಈ ವರದಿಯು ಪ್ರತಿಪಾದಿಸಿತು.

ಬೆದರಿಸುವಿಕೆ, ದೈಹಿಕ ನಿಂದನೆ, ಪೋಷಕರಿಂದ ಬೆಂಬಲ ದೊರೆಯದಿರುವುದು, ಸಾಮಾಜಿಕ – ಆರ್ಥಿಕ ತೊಂದರೆಗಳು ಮತ್ತು ಕುಟುಂಬ ವಿವಾದಗಳಂತಹ ಬಾಲ್ಯದ ಆಘಾತಕಾರಿ ಅಥವಾ ಪ್ರತಿಕೂಲ ಅನುಭವಗಳು ಮಗು ಅಥವಾ ಹದಿಹರೆಯದವರನ್ನು ಮಾನಸಿಕ ಆರೋಗ್ಯ ಸಮಸ್ಯೆಯ ಅಪಾಯಕ್ಕೆ ತಳ್ಳಬಹುದು. ಇದು ಆಗಾಗ್ಗೆ ಮಾದಕದ್ರವ್ಯದ ವ್ಯಸನ, ಅಸುರಕ್ಷಿತ ಜೀವನ ಶೈಲಿ ಆಯ್ಕೆಗಳು ಮತ್ತು ಅಪಾಯಕಾರಿ ನಡವಳಿಕೆಯಂತಹ ಪ್ರವೃತ್ತಿಗಳಿಗೆ ಕಾರಣವಾಗುತ್ತದೆ. ಇದು ದೈಹಿಕ ಮತ್ತು ಮಾನಸಿಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಬಾಲ್ಯದ ಲೈಂಗಿಕ ದೌರ್ಜನ್ಯದ ಅನುಭವಗಳು ವ್ಯಕ್ತಿಯ ಮನಸ್ಸಿನ ಮೇಲೆ ತೀವ್ರವಾಗಿ ಪರಿಣಾಮ ಬೀರಬಹುದು. ಅವು ಅಂತಹ ವ್ಯಕ್ತಿಗಳನ್ನು ಹಲವು ವರ್ಷಗಳವರೆಗೆ ದುರ್ಬಲರಾಗಿಸುತ್ತವೆ, ಅವರ ಸಂಬಂಧಗಳು, ಸ್ವಯಂ-ಪ್ರಜ್ಞೆ, ಆಹಾರ ಪದ್ಧತಿ ಮತ್ತು ಲೈಂಗಿಕ ನಡವಳಿಕೆಯ ಮೇಲೆ ಪರಿಣಾಮ ಬೀರುತ್ತವೆ. ಅಂತಹ ಅನುಭವಗಳಿಗೆ ಒಳಗಾಗುವ ಮಕ್ಕಳು ಮತ್ತು ಹದಿಹರೆಯದವರು ʻಪಿಟಿಎಸ್‌ಡಿʼ, ಒತ್ತಡ-ಸಂಬಂಧಿತ ಅಸ್ವಸ್ಥತೆಗಳು, ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳನ್ನು ಬೆಳೆಸಿಕೊಳ್ಳಬಹುದು. “ದುರ್ಬಲ ಮನಸ್ಸಿನವರು” ಎಂದು ಹಣೆಪಟ್ಟಿ ಕಟ್ಟುವ ಅಥವಾ ದೂಷಣೆಯ ಭಯದಿಂದಾಗಿ ಅನೇಕರು ಈ ಅನುಭವಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಆಘಾತಗಳು ಅವರನ್ನು ಇತರರನ್ನು ನಂಬದಂತೆ ತಡೆಯುತ್ತವೆ.

ನೈಸರ್ಗಿಕ ವಿಪತ್ತುಗಳು, ಅಪಘಾತಗಳು ಅಥವಾ ತೀವ್ರವಾದ ನಿಂದನೆಯಂತಹ ಪ್ರಮುಖ ಆಘಾತಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಕ್ತಿಗಳನ್ನು ತೊಂದರೆ ಗೊಳಿಸಬಹುದಾದರೂ, ನಿರ್ಲಕ್ಷ್ಯ ಮತ್ತು ಆರೈಕೆಯ ಕೊರತೆಯು ವ್ಯಕ್ತಿಯ ಜೀವನ ಆಯ್ಕೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಜೊತೆಗೆ ಅವರ ಬೆಳವಣಿಗೆಯ ಅವಕಾಶಗಳನ್ನು ಮಿತಿಗೊಳಿಸುತ್ತದೆ ಎಂದು ಸಂಶೋಧನೆ ತೋರಿಸುತ್ತದೆ. ನಿಂದನೆ ಮತ್ತು ನಿರ್ಲಕ್ಷ್ಯ ಎರಡೂ ಸಹ ʻಆಘಾತದ ಪೀಳಿಗೆಯ ಆವರ್ತನʼಕ್ಕೆ (Frequency of shock generation) ಕಾರಣವಾಗಬಹುದು. ಇದನ್ನು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ರವಾನಿಸಬಹುದು.

ಚಿಕಿತ್ಸಾ ಪ್ರಕ್ರಿಯೆ

ಸುರಕ್ಷತೆ ಮತ್ತು ಸ್ಥಿರಗೊಳಿಸುವಿಕೆ: ಚಿಕಿತ್ಸೆಯ ಮೊದಲ ಹಂತವು, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ದೈಹಿಕ ಮತ್ತು ಮಾನಸಿಕ ರೋಗಲಕ್ಷಣಗಳನ್ನು ನಿರ್ವಹಿಸುವತ್ತ ಗಮನ ಹರಿಸುತ್ತದೆ. ಇದು ನಿದ್ರೆ, ಹಸಿವನ್ನು ಪುನಃಸ್ಥಾಪಿಸುವುದು ಮತ್ತು ವ್ಯಕ್ತಿಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುವುದನ್ನು ಒಳಗೊಂಡಿರುತ್ತದೆ.

ಮನೋಚಿಕಿತ್ಸೆ ಮತ್ತು ಮನೋಸಾಮಾಜಿಕ ಮಧ್ಯಸ್ಥಿಕೆಗಳು: ಈ ಚಿಕಿತ್ಸೆಯು ಆಘಾತದ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವತ್ತ ಮತ್ತು ಪರಿಹರಿಸುವತ್ತ ಗಮನ ಹರಿಸುತ್ತದೆ.

ಕುಟುಂಬ ಅಥವಾ ಸಮುದಾಯ ಆಧಾರಿತ ಬೆಂಬಲ: ದೀರ್ಘಕಾಲದ ಒತ್ತಡದ ಸಂದರ್ಭಗಳಲ್ಲಿ, ಉಪಶಮನಕಾರಿ ವಾತಾವರಣವನ್ನು ನಿರ್ಮಿಸಲು ವ್ಯಕ್ತಿಗಳಿಗೆ ಗುಂಪಿನ ಬೆಂಬಲ ಅಥವಾ ಕುಟುಂಬ ಆಧಾರಿತ ಮಧ್ಯಸ್ಥಿಕೆಗಳು ಬೇಕಾಗುತ್ತವೆ.

ಮರುಸಂಘಟನೆ, ಕೌಶಲ್ಯ ನಿರ್ಮಾಣ, ಮತ್ತು ಬೆಳವಣಿಗೆ: ಈ ಹಂತವು ವ್ಯಕ್ತಿಗೆ ತನ್ನ ಕೈತಪ್ಪಿದ ಕೆಲಸಗಳು, ಸಾಮಾಜಿಕ ಪಾತ್ರಗಳನ್ನು ಮರಳಿ ಪಡೆಯಲು ಹಾಗೂ ಕೌಶಲ್ಯಗಳನ್ನು ಬೆಳೆಸಿಕೊಳ್ಳುವತ್ತ ಕೆಲಸ ಮಾಡಲು ಸಹಾಯ ಮಾಡುತ್ತದೆ.

ಆಘಾತ-ಸಂಬಂಧಿತ ಕಾಳಜಿಗಳನ್ನು ಪರಿಹರಿಸದಿದ್ದಾಗ, ಅಂತಹ ವ್ಯಕ್ತಿಗಳು ತಲೆನೋವು, ಶಾರೀರಿಕ ನೋವು, ಮೈಗ್ರೇನ್, ಕಳಪೆ ಜೀವನಶೈಲಿ ಆಯ್ಕೆಗಳು ಮತ್ತು ವ್ಯಸನಗಳಿಂದಾಗಿ ಬೊಜ್ಜು ಮುಂತಾದ ಮಾನಸಿಕ-ದೇಹದ ಸಮಸ್ಯೆಗಳನ್ನು ಬೆಳೆಸಿಕೊಳ್ಳಬಹುದು. ಈ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುವುದು ಮುಖ್ಯವಾದರೂ, ಸಂಪೂರ್ಣ ಚೇತರಿಕೆಗೆ ಪುನರುಜ್ಜೀವನ ವಾತಾವರಣವನ್ನು ಸೃಷ್ಟಿಸುವ ಅಗತ್ಯವಿರುತ್ತದೆ. ಇಂದಿನ ವೇಗದ, ಗುರಿ-ಆಧಾರಿತ ಜಗತ್ತಿನಲ್ಲಿ, ಅಂತಹ ಪರಿಸರಗಳ ಲಭ್ಯತೆ ಕಷ್ಟ. ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಔಷಧಗಳು ಸಹಾಯ ಮಾಡಬಹುದು, ಆದರೆ ಆಗಾಗ್ಗೆ, ಮನೋವೈದ್ಯರ ಬೆಂಬಲವೂ ಬೇಕಾಗಬಹುದು. ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಲು ಮತ್ತು ಬಾಧಿತ ವ್ಯಕ್ತಿಗಳು ಅದಕ್ಕೆ ಹೊಂದಿಕೊಳ್ಳುವಂತೆ ಸಹಾಯ ಮಾಡಲು ಕುಟುಂಬಗಳು ಮತ್ತು ವೈದ್ಯರೊಂದಿಗೆ ಮನೋವೈದ್ಯರು ಸಹ ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ಮನೋಚಿಕಿತ್ಸೆ ಮತ್ತು ಮಾನಸಿಕ ಸಾಮಾಜಿಕ ಮಧ್ಯಸ್ಥಿಕೆಗಳು ನಿರ್ಣಾಯಕ ಪಾತ್ರವಹಿಸುತ್ತವೆ.

ಆಘಾತ-ಮಾಹಿತಿಯುಕ್ತ ಆರೈಕೆಯ ಪ್ರಾಮುಖ್ಯತೆ

ಆಘಾತ-ಮಾಹಿತಿಯುಕ್ತ ಆರೈಕೆಯು (trauma-informed care), ಆಘಾತವು ವ್ಯಕ್ತಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದರತ್ತ ಗಮನ ಕೇಂದ್ರೀಕರಿಸುತ್ತದೆ. ಜೊತೆಗೆ, ಆರೋಗ್ಯ, ಸಾಮಾಜಿಕ ಸೇವೆಗಳು ಮತ್ತು ಕಾನೂನು ಸೇವೆಗಳಲ್ಲಿ ತೊಡಗಿರುವ ಪ್ರತಿಯೊಬ್ಬರೂ ಈ ಪರಿಣಾಮದ ಬಗ್ಗೆ ಮಾಹಿತಿ ಹೊಂದಿರುವುದನ್ನು ಖಚಿತಪಡಿಸಿಕೊಳ್ಳುತ್ತದೆ. ಗುಣಪಡಿಸುವ ಪ್ರಕ್ರಿಯೆಯು ವ್ಯಕ್ತಿಯಲ್ಲಿ ನಂಬಿಕೆ, ಸುರಕ್ಷತೆ ಮತ್ತು ಸಬಲೀಕರಣವನ್ನು ಖಚಿತಪಡಿಸಬೇಕು. ಆಘಾತದ ಪರಿಣಾಮಗಳನ್ನು ಗುರುತಿಸಲು ಮತ್ತು ಪರಿಹರಿಸಲು ವೃತ್ತಿಪರರಿಗೆ ತರಬೇತಿ ನೀಡುವ ಅಗತ್ಯವಿದೆ.

ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು: (Resilience)

ಆಘಾತಕಾರಿ ಘಟನೆಗಳಿಗೆ ಯಾರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು, ಅವರ ಮೆದುಳು ಅವುಗಳನ್ನು ಹೇಗೆ ವ್ಯಾಖ್ಯಾನಿಸುತ್ತದೆ ಮತ್ತು ಅರ್ಥ ಮಾಡಿಕೊಳ್ಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಈ ಮೌಲ್ಯಮಾಪನವು ವ್ಯಕ್ತಿಯ ಮನೋಧರ್ಮ, ನಿಭಾಯಿಸುವ ಕೌಶಲ್ಯಗಳು, ಹಿಂದಿನ ಅನುಭವಗಳು ಮತ್ತು ಲಭ್ಯವಿರುವ ಬೆಂಬಲದ ಆಧಾರದ ಮೇಲೆ ಬದಲಾಗುತ್ತದೆ. ಪ್ರತಿಕೂಲತೆಯು ವ್ಯಕ್ತಿಗಳಲ್ಲಿ ಸ್ಥಿತಿಸ್ಥಾಪಕತ್ವವನ್ನು ಬೆಳೆಸಬಹುದಾದರೂ, ಇದನ್ನು ಬೆಳೆಸಿಕೊಳ್ಳಲು ವ್ಯಕ್ತಿಗಳಿಗೆ ಸಹಾಯ ಮಾಡುವುದು ಸಹ ಗುಣಪಡಿಸುವಿಕೆಯ ನಿರ್ಣಾಯಕ ಭಾಗವಾಗಿದೆ. ಮಕ್ಕಳು ಮತ್ತು ವಯಸ್ಕರಿಗೆ ಸ್ಥಿತಿಸ್ಥಾಪಕತ್ವವನ್ನು ಬೆಳೆಸಿಕೊಳ್ಳಲು ಸಹಾಯ ಮಾಡಲು ಸಮುದಾಯ ಮಟ್ಟದ ಜಾಗೃತಿ ಮತ್ತು ಕೌಶಲ್ಯ ನಿರ್ಮಾಣ ಅವಕಾಶಗಳ ಅಗತ್ಯವಿದೆ.

ಬಾಲ್ಯದ ಆಘಾತವು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ, ಅಪ್ಪು ಅವರಂತಹ ವ್ಯಕ್ತಿಗಳನ್ನು ನಾವು ಉತ್ತಮವಾಗಿ ಬೆಂಬಲಿಸಬಹುದು. ಮಧುಮೇಹದಂತಹ ರೋಗ ರೋಗಲಕ್ಷಣಗಳನ್ನು ನಿರ್ವಹಿಸಲು ಮಾತ್ರವಲ್ಲದೆ, ಅವರ ಆರಂಭಿಕ ಅನುಭವಗಳಲ್ಲಿ ಬೇರೂರಿರುವ ಮೂಲ ಕಾರಣಗಳನ್ನು ನಿರ್ವಹಿಸಲು ಸಹ ನೆರವಾಗಬಹುದು.

ಡಾ.ಅವಿನಾಶ್ ಜಿ.ಕಾಮತ್

ಮಕ್ಕಳು ಮತ್ತು ಹದಿಹರೆಯ ವಯಸ್ಕರ ಮನೋವೈದ್ಯರು

ಕೆಎಂಸಿ ಆಸ್ಪತ್ರೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next