Advertisement

ಕಳ್ಳ-ಪೊಲೀಸ್‌ ಆಟ

08:07 PM Aug 18, 2020 | Suhan S |

ಚೀಟಿಯಾಟ, ಕಳ್ಳ- ಪೋಲಿಸ್‌ ಆಟವೆಂದೆಲ್ಲ ನಾನಾ ಹೆಸರುಗಳು ಈ ಆಟಕ್ಕಿವೆ. ರಜೆಗೆಂದು ಅಜ್ಜಿ ಊರಿಗೆ ಹೋದಾಗ, ಹಿಂದೊಮ್ಮೆ ಎಲ್ಲಾ ಮಕ್ಕಳೂ ತಪ್ಪದೇ ಆಡುತ್ತಿದ್ದ ಜನಪ್ರಿಯ ಆಟ ಇದಾಗಿತ್ತು.

Advertisement

ಮಳೆಗಾಲದಲ್ಲಿ ಒಳಾಂಗಣ ಆಟಗಳೇ ಬೇಕು. ಹೊರಗೆ ನೀರಿನಲ್ಲಿ ನೆನೆಯುವುದಕ್ಕಿಂತ, ಮನೆಯಲ್ಲೇ ಕುಳಿತು ಆಡುವ ಆಟವಿದ್ದರೆ ಚೆನ್ನ. ಅದಕ್ಕೆಂದೇ ಹುಟ್ಟಿದ ಕಳ್ಳ-ಪೊಲೀಸ್‌ಆಟದ ಕುರಿತು ನೋಡೋಣ. ನಾಲ್ಕು ಅಥವಾ ಐದಾರು ಆಟಗಾರರು ಆಡಬಹುದಾದ ಈ ಆಟದಲ್ಲಿ, ರಾಜ, ರಾಣಿ, ಕಳ್ಳ, ಪೊಲೀಸ್‌, ಡಾಕ್ಟರ್‌ ಎಂದೆಲ್ಲಾ ಎಂದು ನಮೂದಿಸಿ 4 ಚೀಟಿಗಳನ್ನು ಮಾಡಿಟ್ಟುಕೊಳ್ಳಬೇಕು. ಈ ಪೈಕಿ ರಾಜ, ರಾಣಿ, ಡಾಕ್ಟರ್‌, ಪೊಲೀಸ್‌ ಎಂದಿರುವ ಚೀಟಿಗಳಿಗೆ, ಇಂತಿಷ್ಟು ಎಂದು ಅಂಕಗಳು ಇರುತ್ತವೆ. ಈಗ ಆಟಗಾರರು ವೃತ್ತಾಕಾರದಲ್ಲಿ ಕುಳಿತುಕೊಳ್ಳಬೇಕು. ನಂತರ ಯಾರಾದರೊಬ್ಬ ಚೀಟಿಗಳನ್ನು ಮಡಚಿ ಕೆಳಗೆ ಹಾಕಬೇಕು. ಲಾಟರಿ ತೆಗೆಯುವಂತೆ ಒಬ್ಬೊಬ್ಬರು ಒಂದೊಂದು ಚೀಟಿಯನ್ನು ಎತ್ತಿಕೊಳ್ಳಬೇಕು. ನಿಮಗೆ ರಾಜ, ರಾಣಿ, ಡಾಕ್ಟರ್‌ ಎಂದು ಬರೆದಿರುವ ಚೀಟಿ ಬಂದರೆ 1000, 800,600 ಅಂಕಗಳು ನಿಮ್ಮ ಪಾಲಿಗೆ. “ಪೊಲೀಸ್‌’ ಚೀಟಿ ದೊರೆತವನು “ಕಳ್ಳ’ ಚೀಟಿ ಯಾರ ಬಳಿ ಇದೆಯೋ, ಅದನ್ನು ಸರಿಯಾಗಿ ಊಹಿಸಿ ಹೇಳಬೇಕು. ಸರಿಯಾಗಿದ್ದರೆ ಆ ಆಟಗಾರನಿಗೆ 500 ಅಂಕಗಳು, ಕಳ್ಳನಿಗೆ 0 ಅಂಕ. ತಪ್ಪಾಗಿ ಊಹಿಸಿದರೆ, ಪೊಲೀಸ್‌ ಚೀಟಿ ಹೊಂದಿದ್ದವನಿಗೆ 0 ಅಂಕ. ಕಳ್ಳ ಎಂಬ ಚೀಟಿ ಎತ್ತಿಕೊಂಡೂ ಸಿಕ್ಕಿಬೀಳದವನಿಗೆ 500 ಅಂಕ ದೊರೆಯುತ್ತದೆ.

ಇದೇ ರೀತಿ, ಚೀಟಿಯನ್ನು ಮತ್ತೆ ಮಡಚಿ ಪುನರಾವರ್ತಿಸುತ್ತಾ ಸಾಗಿ, ಕೊನೆಯಲ್ಲಿ ಯಾರು ಜಾಸ್ತಿ ಅಂಕಗಳ ಮೊತ್ತ ಹೊಂದಿರುತ್ತಾರೋ, ಅವರು ಗೆದ್ದಂತೆ. ಜಾಸ್ತಿ ಆಟಗಾರರಿದ್ದರೆ ಸೇವಕ, ಮಂತ್ರಿ ಎಂದೆಲ್ಲ ಚೀಟಿಗಳನ್ನೂ ಹೆಚ್ಚಿಸುತ್ತಾ ಹೋಗಬಹುದು. ರಾಜ ಮಂತ್ರಿಯನ್ನು ಹುಡುಕುವ, ಮಂತ್ರಿ ಸೇವಕನನ್ನು ಹುಡುಕುವ ಆಟವನ್ನೂ ಹಲವು  ಕಡೆ ಆಡುತ್ತಾರೆ. ಇನ್ನು ಕೆಲವರು, ರಾಜ ರಾಣಿಯನ್ನು ಹುಡುಕಿ, ರಾಣಿ ಪೋಲಿಸನನ್ನು, ಪೋಲಿಸ್‌ ಕಳ್ಳನನ್ನು ಹುಡುಕುವ ಆಟವಾಡಿ, ಊಹೆಯಲ್ಲಿ ತಪ್ಪಿದ್ದರೆ ಅವರ ಚೀಟಿಯನ್ನು ಬದಲಾಯಿಸಿಕೊಳ್ಳುವ ಆಟವನ್ನೂ ಆಡುತ್ತಾರೆ. ಹೀಗೆ ಊಹೆ, ಸರಿ, ತಪ್ಪು ಇವುಗಳೊಂದಿಗೆ ಆಟವಾಡುವ ಮಜವೇ ಬೇರೆ.

ಚೀಟಿಯಾಟ, ಕಳ್ಳ- ಪೊಲೀಸ್‌ ಆಟವೆಂದೆಲ್ಲ ನಾನಾ ಹೆಸರುಗಳು ಈ ಆಟಕ್ಕೆ ಇವೆ. ರಜೆಗೆಂದು ಅಜ್ಜಿ ಊರಿಗೆ ಹೋದಾಗ ಹಿಂದೊಮ್ಮೆ ಎಲ್ಲಾ ಮನೆಯ ಮಕ್ಕಳೂ ತಪ್ಪದೇ ಆಡುತ್ತಿದ್ದ ಜನಪ್ರಿಯ ಆಟ ಇದಾಗಿತ್ತು. ಎಷ್ಟೋ ಜನರ ನೋಟ್‌ ಬುಕ್ಕಿನ ಕೊನೆಯ ಪುಟಗಳು ಕಳ್ಳ- ಪೊಲೀಸ್‌ ಆಟದ ಎಂಟ್ರಿಯಿಂದಲೇ ತುಂಬಿರುತ್ತಿದ್ದವು. ಈ ಆಟವನ್ನು ಕೆಲವೊಮ್ಮೆ ಹಾಸ್ಟೆಲ್‌ನಲ್ಲಿ ಆಡುತ್ತಾ ಕುಳಿತು, ಅದಕ್ಕಾಗಿಯೇವಾರ್ಡನ್‌ ಕೈಲಿ ಏಟು ತಿಂದವರ ಸಂಖ್ಯೆ ಅತಿ ಅನ್ನುವಷ್ಟಿದೆ ಎಂದರೆ, ಈ ಆಟದ ಜನಪ್ರಿಯತೆಯನ್ನು ಊಹಿಸಬಹುದು. ರಜೆಯ ಮಜಾ ಸವಿಯಲು, ಬೋರು ಎನ್ನುವ ಮಕ್ಕಳೊಂದಿಗೆ ಸಮಯದ ಸದುಪಯೋಗ ಪಡೆಯಲು, ಒಮ್ಮೆ ಆಡಿನೋಡಿ.

 

Advertisement

 

 -ಸಾವಿತ್ರಿ ಶ್ಯಾನುಭಾಗ

Advertisement

Udayavani is now on Telegram. Click here to join our channel and stay updated with the latest news.

Next