Advertisement

Glasgow Commonwealth Games: ಹಾಕಿ, ಕ್ರಿಕೆಟ್‌, ಕುಸ್ತಿ, ಬ್ಯಾಡ್ಮಿಂಟನ್‌ಗೆ ಖೋ

10:28 PM Oct 22, 2024 | Team Udayavani |

ಲಂಡನ್‌: ನಿರೀಕ್ಷೆಯಂತೆ 2026ರ ಗ್ಲಾಸ್ಗೋ ಕಾಮನ್ವೆಲ್ತ್‌ ಕ್ರೀಡಾ ಕೂಟದಿಂದ ಹಾಕಿ, ಕ್ರಿಕೆಟ್‌, ಕುಸ್ತಿ ಸೇರಿಂದಂತೆ ಹಲವು ಕ್ರೀಡೆಗಳನ್ನು ಕೈಬಿಡಲಾಗಿದೆ. ಪಂದ್ಯಾವಳಿಯ ಆರ್ಥಿಕ ವೆಚ್ಚವನ್ನು ಕಡಿಮೆಗೊಳಿಸಿ, ಬಜೆಟ್‌ ಸ್ನೇಹಿಯಾಗಿ ನಡೆಸುವ ಉದ್ದೇಶದಿಂದ ಇಂಥ ಕಠಿನ ನಿರ್ಧಾ ರಕ್ಕೆ ಬರಲಾಗಿದೆ ಎಂದು ಕಾಮನ್ವೆಲ್ತ್‌ ಗೇಮ್ಸ್‌ ಫೆಡರೇಶನ್‌ ತಿಳಿಸಿದೆ. ಮಂಗಳವಾರ ಅದು ಕ್ರೀಡೆಗಳ ಯಾದಿಯನ್ನು ಬಿಡುಗಡೆ ಮಾಡಿತು.

Advertisement

ಕೂಟದಿಂದ ಹಾಕಿ, ಕ್ರಿಕೆಟ್‌, ಕುಸ್ತಿ, ಬ್ಯಾಡ್ಮಿಂಟನ್‌, ಟೇಬಲ್‌ ಟೆನಿಸ್‌, ಶೂಟಿಂಗ್‌, ಸ್ಕ್ವಾಷ್‌, ಟ್ರಯತ್ಲಾನ್‌ ಸ್ಪರ್ಧೆಗಳನ್ನು ಕೈಬಿಡಲಾಗಿದೆ. 2022ರ ಬರ್ಮಿಂಗ್‌ಹ್ಯಾಮ್‌ ಗೇಮ್ಸ್‌ಗೆ ಹೋಲಿಸಿದರೆ ಗ್ಲಾಸ್ಗೋದಲ್ಲಿ 9 ಕ್ರೀಡಾಸ್ಪರ್ಧೆಗಳು ಕಡಿಮೆಯಾಗಿವೆ. ಕೇವಲ 10 ಕ್ರೀಡಾ ವಿಭಾಗಗಳಷ್ಟೇ ಇರಲಿವೆ. ಹಾಗೆಯೇ ಕೇವಲ 4 ತಾಣಗಳಲ್ಲಷ್ಟೇ ಪಂದ್ಯಾವಳಿಯನ್ನು ನಡೆಸಲಾಗುವುದು.

ಇಷ್ಟೇ ಕ್ರೀಡೆಗಳು…

ಗ್ಲಾಸ್ಗೋ ಗೇಮ್ಸ್‌ನಲ್ಲಿನ ಕ್ರೀಡೆಗಳೆಂದರೆ: ಆ್ಯತ್ಲೆಟಿಕ್ಸ್‌ ಮತ್ತು ಪ್ಯಾರಾ ಆ್ಯತ್ಲೆಟಿಕ್ಸ್‌ (ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌), ಸ್ವಿಮ್ಮಿಂಗ್‌ ಮತ್ತು ಪ್ಯಾರಾ ಸ್ವಿಮ್ಮಿಂಗ್‌, ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌, ಟ್ರ್ಯಾಕ್‌ ಸೈಕ್ಲಿಂಗ್‌ ಮತ್ತು ಪ್ಯಾರಾ ಟ್ರ್ಯಾಕ್‌ ಸೈಕ್ಲಿಂಗ್‌, ನೆಟ್‌ಬಾಲ್‌, ವೇಟ್‌ಲಿಫ್ಟಿಂಗ್‌ ಮತ್ತು ಪ್ಯಾರಾ ವೇಟ್‌ಲಿಫ್ಟಿಂಗ್‌, ಬಾಕ್ಸಿಂಗ್‌, ಜೂಡೋ ಬೌಲ್ಸ್‌ ಮತ್ತು ಪ್ಯಾರಾ ಬೌಲ್ಸ್‌, 3×3 ಬಾಸ್ಕೆಟ್‌ಬಾಲ್‌, 3×3 ವೀಲ್‌ಚೇರ್‌ ಬಾಸ್ಕೆಟ್‌ಬಾಲ್‌.

ಗ್ಲಾಸ್ಗೋ 2014ರ ಕಾಮನ್ವೆಲ್ತ್‌ ಆತಿಥ್ಯವನ್ನೂ ವಹಿಸಿತ್ತು. ಆಗ 18 ಕ್ರೀಡೆಗಳ ಒಟ್ಟು 261 ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು.

Advertisement

“ಕಾಮನ್ವೆಲ್ತ್‌ ಗೇಮ್ಸ್‌ನ ನಿರ್ವಹಣೆ ಹಾಗೂ ಹಣಕಾಸು ವೆಚ್ಚವನ್ನು ತಗ್ಗಿಸ ಬೇಕಾಗಿದೆ. ಹೀಗಾಗಿ 10 ಕ್ರೀಡೆಗಳಷ್ಟೇ ಇರಲಿವೆ. ಇವು ಕೇವಲ 4 ತಾಣಗಳಲ್ಲಿ ನಡೆಯಲಿವೆ’ ಎಂದು ಕಾಮನ್ವೆಲ್ತ್‌ ಗೇಮ್ಸ್‌ ಫೆಡರೇಶನ್‌ ತಿಳಿಸಿದೆ. 2014ರ ಗೇಮ್ಸ್‌ ವೇಳೆ ಶೂಟಿಂಗ್‌ ಸ್ಪರ್ಧೆಯನ್ನು ಗ್ಲಾಸ್ಗೋದಿಂದ 100 ಕಿ.ಮೀ. ದೂರದಲ್ಲಿ ಆಯೋಜಿಸ ಲಾಗಿತ್ತು. 2010ರ ದಿಲ್ಲಿ ಗೇಮ್ಸ್‌ ಬಳಿಕ ಆರ್ಚರಿಯನ್ನು ಕಡೆಗಣಿಸುತ್ತಲೇ ಬರಲಾಗಿದೆ.

ಭಾರತಕ್ಕೆ ಭಾರೀ ನಷ್ಟ

ಗ್ಲಾಸ್ಗೋ ಗೇಮ್ಸ್‌ನ ಇಂಥದೊಂದು ನಿರ್ಧಾರದಿಂದ ಭಾರತಕ್ಕೆ ಭಾರೀ ನಷ್ಟವಾಗಲಿದೆ. ಕೈಬಿಟ್ಟ ಸ್ಪರ್ಧೆ ಗಳೆಲ್ಲವೂ ಭಾರತದ ಪದಕ ಭರವಸೆಯ ಕ್ರೀಡೆಗಳಾಗಿರುವುದೇ ಇದಕ್ಕೆ ಕಾರಣ. ಇದರಿಂದ ಭಾರತದ ಪದಕ ಸಂಖ್ಯೆಯಲ್ಲಿ ಭಾರೀ ಕಡಿತ ಉಂಟಾಗುವುದರಲ್ಲಿ ಅನುಮಾನ ವಿಲ್ಲ. ಕಳೆದ ಗೇಮ್ಸ್‌ನಿಂದ ಶೂಟಿಂಗ್‌ ಸ್ಪರ್ಧೆಯನ್ನು ಕೈಬಿಟ್ಟಾಗಲೇ ಭಾರತಕ್ಕೆ ಇದರ ಹೊಡೆತ ಬಿದ್ದಿತ್ತು.

2022ರ ಗೇಮ್ಸ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ್ದ ಭಾರತ ಒಟ್ಟು 61 ಪದಕಗಳನ್ನು ಜಯಿಸಿತ್ತು (22 ಚಿನ್ನ, 16 ಬೆಳ್ಳಿ, 23 ಕಂಚು). ಕುಸ್ತಿಯಲ್ಲಿ 12, ವೇಟ್‌ಲಿಫ್ಟಿಂಗ್‌ನಲ್ಲಿ 10, ಆ್ಯತ್ಲೆಟಿಕ್ಸ್‌ ನಲ್ಲಿ 8, ಬಾಕ್ಸಿಂಗ್‌ ಮತ್ತು ಟಿಟಿಯಲ್ಲಿ ತಲಾ 7 ಪದಕ ಒಲಿದಿತ್ತು.

ಗೇಮ್ಸ್‌ ಹಾಕಿಯಲ್ಲಿ ಭಾರತ ಈವರೆಗೆ 3 ಬೆಳ್ಳಿ, 2 ಕಂಚು; ಬ್ಯಾಡ್ಮಿಂಟನ್‌ನಲ್ಲಿ 10 ಚಿನ್ನ ಸೇರಿದಂತೆ 31 ಪದಕ ಜಯಿಸಿದೆ.  23ನೇ ಆವೃತ್ತಿಯ ಈ ಕ್ರೀಡಾಕೂಟ 2026ರ ಜು. 23ರಿಂದ ಆ. 2ರ ತನಕ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next