ಕಲಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ವರ್ಷವಿಡೀ ಪ್ರತಿಭಾ ಪುರಸ್ಕಾರಗಳು ನಡೆಯುತ್ತಿರುತ್ತವೆ. ಇದಕ್ಕಾಗಿಯೇ ಸ್ಥಾಪಿಸಿದ ಟ್ರಸ್ಟ್‌ಗಳು ಸರಾಸರಿ ಶೇ. 90-95 ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ದೊಡ್ಡಮಟ್ಟದಲ್ಲಿ ಉತ್ತೇಜನ ನೀಡಿವೆ. ಜ್ಞಾನಾರ್ಜನೆಯ ಹೊರತಾಗಿ ಕ್ರೀಡೆ ಮತ್ತಿತರ ಚಟುವಟಿಕೆಗಳಲ್ಲೂ ಪೈಪೋಟಿ ಏರ್ಪಡಿಸಿ ಪ್ರಶಸ್ತಿಗೆ ಅರ್ಹತೆಯನ್ನು ಅಳೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಗಣೇಶೋತ್ಸವ ಸಮಿತಿಗಳೂ ಶೈಕ್ಷಣಿಕ ಪ್ರತಿಭಾ ಪುರಸ್ಕಾರದಂಥ ಸಮಾಜ ಮುಖೀ ಕಾರ್ಯಗಳತ್ತ ಹರಿಸಿರುವುದು ಸ್ತುತ್ಯಾರ್ಹ. ಕ್ರಿಯಾಶೀಲ ಮಕ್ಕಳನ್ನು ಕಾಣಬೇಕಾದರೆ ಗಣೇಶೋತ್ಸವ ಬರಬೇಕು. ಪ್ರತೀ ವರುಷ ಗಣೇಶೋತ್ಸವದ ಪೂರ್ವಭಾವಿಯಾಗಿ ಚಿತ್ರಕಲೆ, ಆವೆಮಣ್ಣಿನ ಕಲೆ, ಪೇಪರ್ ಕ್ರಾಫ್ಟ್, ರಂಗೋಲಿ, ಛದ್ಮವೇಷ, ನೃತ್ಯ, ಭಕ್ತಿಗೀತೆ, ಸಂಗೀತ ವಾದ್ಯ ವಾದನ ಮುಂತಾದ ಹತ್ತು ಹಲವು ಸ್ಪರ್ಧೆಗಳನ್ನು ಮಕ್ಕಳಿಗಾಗಿ ಅಯೋಜಿಸುತ್ತಾರೆ. ಈ ಸಮಯದಲ್ಲಿ ಮಕ್ಕಳಿಗಿಂತ ಅವರ ಹೆತ್ತವರಿಗೆ, ಪೋಷಕರಿಗೆ, ಕಲಾಶಿಕ್ಷಕರಿಗೆ ಕೈ ತುಂಬಾ ಕೆಲಸ ! ತಮ್ಮ ಮಕ್ಕಳು ಉತ್ತಮ ಪ್ರದರ್ಶನ ನೀಡುವಂತೆ ತಲೆಕೆಡಿಸಿಕೊಳ್ಳುವ ಮನೆ ಮಂದಿಯ ಆಲೋಚನೆಗಳನ್ನು ಮಕ್ಕಳು ಕಾರ್ಯರೂಪಕ್ಕೆ ತರುವಲ್ಲಿ ಸಾಕಷ್ಟು ಬದಲಾವಣೆಗಳಾಗಿ ಬೈಗುಳ ರೂಪ ಪಡೆದುಕೊಳ್ಳುವುದೂ ಇದೆ.
ಹೆಚ್ಚಿನ ಮಕ್ಕಳು ಹಿರಿಯರ ಮಾರ್ಗದರ್ಶನದಲ್ಲಿ ಸ್ಪರ್ಧೆಯ ಕಣಕ್ಕೆ ಇಳಿಯುತ್ತಾರೆ. ಉಳಿದವರು ಶಾಸ್ತ್ರೀಯವಾಗಿ ಕಲಿತುಕೊಂಡು ಬಂದ ವಿದ್ಯೆಗಳನ್ನು ಪ್ರದರ್ಶಿಸುವ ಸಮಯವದು. ಎಲ್ಲಾ ರೀತಿಯ ಸಂಗ್ರಹಗಳಿಂದ ಆಯ್ದ ಕೃತಿಗಳಿಗೆ ಇನ್ನಷ್ಟು ಮಸಾಲೆ ರುಚಿ ಸೇರಿಸಿ ಕಲಿಸಿಕೊಟ್ಟರೂ ಕೊನೆಯ ಫಲಿತಾಂಶ ಆ ಮಗುವಿನ ಪ್ರತಿಭೆಯಂದಲೇ ಹೊರಹೊಮ್ಮಬೇಕು. ಬಹುಮಾನ ಬಾರದಿದ್ದರೆ ತೀರ್ಪುಗಾರರನ್ನು ತರಾಟೆಗೆ ತೆಗೆದುಕೊಳ್ಳುವ ಘಟನೆಗಳು ಕೂಡ ನಡೆಯುತ್ತವೆ. ಒಂದೇ ದಿನ ಹಲವಾರು ಕಡೆ ವಿವಿಧ ಸ್ಪರ್ಧೆಗಳು ನಡೆಯುವ ಸಂದರ್ಭ, ತಂದೆ ತಾಯಂದಿರು ಯೋಜನೆ ರೂಪಿಸಿ ಗುಣಮಟ್ಟದ ಬಹುಮಾನ ವ್ಯವಸ್ಥೆ ಇರುವಲ್ಲಿ ಮಕ್ಕಳನ್ನು ಕರೆದು ಕೊಂಡು ಭಾಗವಹಿಸುತ್ತಾರೆ. ಕೆಲವೊಮ್ಮೆ ಮುಂಜಾನೆಯಿಂದ ಸಂಜೆ ತನಕ ಭಾಗವಹಿಸಿದ ಉದಾಹರಣೆಗಳಿವೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೆಚ್ಚು ಕಮ್ಮಿ 1000 ಕಡೆ ಸಂಘ ಸಂಸ್ಥೆಗಳು ಗಣೇಶೋತ್ಸವವನ್ನು ಆಚರಿಸುತ್ತವೆ. ಇಲ್ಲೆಲ್ಲಾ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಎಳೆಯ ಪ್ರಬುದ್ಧ ಕಲಾವಿದರು ನೃತ್ಯ -ಸಂಗೀತ ಪರಿಣತಿ ಹೊಂದಿದವರೇ. ಹಿಂದೆ ಸ್ಪರ್ಧೆಗಳಿಂದಲೇ ತಯಾರಾದವರು ಎಂಬುದು ವಿಶೇಷ. ಈ ಮಕ್ಕಳ ಭವಿಷ್ಯ ಕಟ್ಟುವ ಸ್ಪರ್ಧಾ ಲೋಕ, ಜೀವನ ಸಂತೃಪ್ತಿಯ ಜತೆಗೆ ಹಣ ಮತ್ತು ಗೌರವ ಸಂಪಾದನೆಯ ಮೆಟ್ಟಿಲು ಎಂದೇ ಹೇಳಬಹುದು.
ಜೀವನ್ ಶೆಟ್ಟಿ