Advertisement

Chikodi: ತುರ್ತು ಪರಿಸ್ಥಿತಿ ವಿರೋಧಿಸಿ ಬಿಜೆಪಿ ಬೃಹತ್ ಪ್ರತಿಭಟನೆ

06:03 PM Jun 25, 2024 | Team Udayavani |

ಚಿಕ್ಕೋಡಿ: 1975 ರಲ್ಲಿ ಅಂದಿನ ಮಾಜಿ ಪ್ರಧಾನಿ ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದ ದಿನ ವಿರೋಧಿಸಿ ಚಿಕ್ಕೋಡಿ ಜಿಲ್ಲಾ ಬಿಜೆಪಿಯು ಚಿಕ್ಕೋಡಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

Advertisement

ಮಿನಿ ವಿಧಾನಸೌಧದ ಮುಂಭಾಗದಲ್ಲಿ ಇರುವ ಬಿಜೆಪಿ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಕವಟಗಿಮಠ ನಗರದಲ್ಲಿ ಇರುವ ಜಿಲ್ಲಾ ಕಾಂಗ್ರೆಸ್‌ಗೆ ಮುತ್ತಿಗೆ ಹಾಕಲು ಹೊರಟಾಗ ಪೊಲೀಸ್‌ರು ಬಸವ ವೃತ್ತದಲ್ಲಿ ತಡೆದರು. ಆದರೂ ಬಿಜೆಪಿ ಕಾರ್ಯಕರ್ತರು ಪೊಲೀಸ್ ಬ್ಯಾರಿಕೆಡ್ ದಾಟಿ ಹೋಗಲು ಯತ್ನಿಸಿದಾಗ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಮಾಜಿ ಸಚಿವ ಶ್ರೀಮಂತ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ  ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸ್‌ರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.

ಬಿಜೆಪಿ ಕಚೇರಿಯಿಂದ ಹೊರಟ ಬಿಜೆಪಿ ಕಾರ್ಯಕರ್ತರು ಮೆರವಣಿಗೆಯುದ್ದಕ್ಕೂ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ದಿಕ್ಕಾರ ಕೂಗಿದರು. ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತಿದೆಂದು ದೇಶದ ತುಂಬೆಲ್ಲ ಸುಳ್ಳು ಹೇಳಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕ್ಷೇಮೆ ಕೇಳಬೇಕೆಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

ಇದಕ್ಕೂ ಮೊದಲು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ತುರ್ತು ಪರಿಸ್ಥಿತಿ ಕುರಿತು ಅವಲೋಕನ ಸಭೆಯಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ೪೦೦ ಸ್ಥಾನ ಗೆಲ್ಲಬೇಕೆಂಬ ಉತ್ಸಾಹದಲ್ಲಿತ್ತು. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಮುಖಂಡರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತದೆಂದು ಸುಳ್ಳು ಹೇಳಿ ಬಿಜೆಪಿ ವಿರುದ್ಧ ಅಪಪ್ರಚಾರ ನಡೆಸಿದರು. ಹೀಗಾಗಿ ಬಿಜೆಪಿಗೆ ಹಿನ್ನಡೆಯಾಗಿದೆ ಎಂದರು.

Advertisement

ಸಂವಿಧಾನ ಬದಲಾವಣೆ ಮಾಡುತ್ತಾರೆಂದು ಇವಾಗ ಮಾತನಾಡುವವರು ಕಳೆದ 50 ವರ್ಷದ ಹಿಂದೆ ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಸಂವಿಧಾನ ಕಗ್ಗೊಲ್ಲೆ ಮಾಡಿದ್ದು ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು. ಚುನಾವಣೆಯಲ್ಲಿ ಸೋಲು-ಗೆಲುವು ಇರುವುದೇ ಆದರೆ ದೇಶದ ಅಖಂಡತೆ, ಸಂಸ್ಕೃತಿ ಮತ್ತು ಭಾರತ ವಿಶ್ವಗುರುವಾಗಲು ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ ಮತ್ತು ಮಾಜಿ ಶಾಸಕ ಬಾಳಾಸಾಹೇಬ ವಡ್ಡರ ಮಾತನಾಡಿದರು.

ಇದಕ್ಕೂ ಮೊದಲು ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ ಖ್ಯಾತ ನ್ಯಾಯವಾದಿ ಪಿ.ಕೆ.ಅನ್ವೇಕರ ಮತ್ತು ಮುಖ್ಯ ವಕ್ತಾರ ಶ್ರೀಕಾಂತ ಕುಲಕರ್ಣಿ ಅವರು ದೇಶದ ಸಂಸ್ಕೃತಿಯ ಆಧಾರದ ಮೇಲೆ ಸಂವಿಧಾನ ನಡೆಯುತ್ತಿದೆ. ಸಂವಿಧಾನ ನಮ್ಮ ಆತ್ಮ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ ಪಾಟೀಲ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ, ರಾಜೇಶ ನೇರ್ಲಿ, ಹೆಸ್ಕಾಂ ಮಾಜಿ ನಿರ್ದೇಶಕ ಮಹೇಶ ಭಾತೆ, ದೀಪಕ ಪಾಟೀಲ, ಸಿದ್ದು ಖಿಂಡಿ, ರಾಜು ಹರಗನ್ನವರ, ಅಪ್ಪಾಸಾಹೇಬ ಚೌಗಲಾ, ಸದಾಶಿವ ಹಳಂಗಳಿ, ಸಂಜು ಪಾಟೀಲ, ಪ್ರಭು ಡಬ್ಬನ್ನವರ, ರಾಜು ಡೋಂಗರೆ ಸೇರಿದಂತೆ ಅಥಣಿ, ಕಾಗವಾಡ, ರಾಯಬಾಗ, ಕುಡಚಿ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ಯಮಕನಮರಡಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅಹಿತಕರ ಘಟನೆ ನಡೆಯದಂತೆ ಡಿವೈಎಸ್‌ಪಿ ಗೋಪಾಲಕೃಷ್ಣ ಗೌಡರ ನೇತೃತ್ವದಲ್ಲಿ ಪಿಎಸ್‌ಐ ಮಲಗೌಡ ನೇರ್ಲಿ ಬೀಗಿ ಬಂದೋಬಸ್ತ್ ಕಲ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next